ಗ್ರಾಹಕರ ಸೇವೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಮುಂಚೂಣಿಯಲ್ಲಿ: ಡಾ.ಎಂ.ಎನ್.ಆರ್‌.

KannadaprabhaNewsNetwork |  
Published : Sep 29, 2024, 01:50 AM IST
ಬ್ಯಾಂಕಿನ ಸಿಬ್ಬಂದಿಗಳ ಪರವಾಗಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ಇವರು ಅಧ್ಯಕ್ಷರಾದ ಡಾ ಎಂ ಎನ್ ರಾಜೇಂದ್ರ ಕುಮಾರ್ ಅವರಿಂದ ಗಿಫ್ಟ್ ಕೂಪನ್ ಸ್ವೀಕರಿಸುತ್ತಿರುವುದು | Kannada Prabha

ಸಾರಾಂಶ

ಬ್ಯಾಂಕಿನ ಸಿಬ್ಬಂದಿಗೆ ಗಿಫ್ಟ್ ಕೂಪನ್ ವಿತರಣೆ ಹಾಗೂ ಶಾಖಾ ಮಟ್ಟದಲ್ಲಿ ಸಮಗ್ರ ಸಾಧನೆ ಮಾಡಿದ ಸಿಬ್ಬಂದಿಯನ್ನು ಪುರಸ್ಕರಿಸುವ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್ ) ತನ್ನ 113 ಶಾಖೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ನೀಡುತ್ತಿದೆ. ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಅಟಲ್ ಪಿಂಚಣಿ ಯೋಜನೆಯನ್ನು ಬ್ಯಾಂಕ್ ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಶಾಖಾ ಮಟ್ಟದಲ್ಲಿ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಸ್ಪಂದಿಸಿರುವುದರಿಂದ ಬ್ಯಾಂಕಿಗೆ ಸತತ ಮೂರು ವರ್ಷಗಳಿಂದ ‘ಎಪಿವೈ ರಾಷ್ಟ್ರೀಯ ಪ್ರಶಸ್ತಿ’ ಹಾಗೂ ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ಈ ಬಾರಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಥಮ ಪ್ರಶಸ್ತಿ ಲಭಿಸಿದೆ. ಈ ಪ್ರತಿಷ್ಠಿತ ಅವಳಿ ಪ್ರಶಸ್ತಿಗಳು ಬ್ಯಾಂಕಿನ ಘನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು ಮಾತ್ರವಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಎಸ್‌ಸಿಡಿಸಿಸಿ ಬ್ಯಾಂಕ್ ಗ್ರಾಹಕರ ಸೇವೆಯಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಶನಿವಾರ ಬ್ಯಾಂಕಿನ ಸಿಬ್ಬಂದಿಗೆ ಗಿಫ್ಟ್ ಕೂಪನ್ ವಿತರಣೆ ಹಾಗೂ ಶಾಖಾ ಮಟ್ಟದಲ್ಲಿ ಸಮಗ್ರ ಸಾಧನೆ ಮಾಡಿದ ಸಿಬ್ಬಂದಿಯನ್ನು ಪುರಸ್ಕರಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಬ್ಬಂದಿಗಳು ತಮ್ಮ ಕಾರ್ಯದಕ್ಷತೆಯನ್ನು ಇನ್ನಷ್ಟು ಹೆಚ್ಚಿಸಿ ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸಬೇಕು. ಗ್ರಾಹಕರ ಅನುಕೂಲಕ್ಕಾಗಿ ವಿವಿಧ ರೀತಿಯ ಸಾಲ ಸೌಲಭ್ಯ, ಠೇವಣಿಗಳಿಗೆ ಆಕರ್ಷಕ ಬಡ್ಡಿ ದರದ , ಲಾಕರ್ ಸೌಲಭ್ಯ, ಆರ್ ಟಿಎಸ್/ ನೆಫ್ಟ್ ಸೇರಿದಂತೆ ಕೋರ್ ಬ್ಯಾಂಕಿಂಗ್ ಸೌಲಭ್ಯ ಬ್ಯಾಂಕ್ ನಲ್ಲಿ ದೊರೆಯುತ್ತಿದೆ. ಹೀಗೆ ಬ್ಯಾಂಕಿನ ವಿವಿಧ ಯೋಜನೆಗಳ ಸಮರ್ಪಕ ಮಾಹಿತಿಯನ್ನು ಗ್ರಾಹಕರಿಗೆ ಸಿಬ್ಬಂದಿಗಳು ನೀಡಬೇಕು. ಇದರಿಂದ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತದೆ ಎಂದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದರು.ಬ್ಯಾಂಕಿನ ಸಿಬ್ಬಂದಿಗಳ ಪರವಾಗಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್, ಸಹಾಯಕ ಮಹಾಪ್ರಬಂಧಕ ರಾಜೇಶ್ ಶೆಟ್ಟಿ ಇವರು ಬ್ಯಾಂಕಿನ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್ ಅವರಿಂದ 10,000 ರು. ಮೌಲ್ಯದ ಗಿಫ್ಟ್ ಕೂಪನ್ ಸ್ವೀಕರಿಸಿದರು. 2023-24ನೇ ಸಾಲಿನಲ್ಲಿ ಬ್ಯಾಂಕ್ ನೀಡಿದ ಗುರಿಯನ್ನು ಸಾಧಿಸಿದ ಶಾಖಾ ವ್ಯವಸ್ಥಾಪಕರನ್ನು, ತಾಲೂಕು ಮಟ್ಟದಲ್ಲಿ ಸಮಗ್ರ ಸಾಧನೆ ಮಾಡಿದ ಸಿಬ್ಬಂದಿ ಹಾಗೂ ಎಪಿವೈ ಯೋಜನೆಯಲ್ಲಿ ಗುರಿ ಸಾಧಿಸಿದ ಶಾಖಾ ವ್ಯವಸ್ಥಾಪಕರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಬ್ಯಾಂಕಿನ ನಿರ್ದೆಶಕ ಎಂ. ಮಹೇಶ್ ಹೆಗ್ಡೆ ಅವರು ಬ್ಯಾಂಕಿನ ಸಿಬ್ಬಂದಿಗಳ ಕಾರ್ಯನಿರ್ವಹಣೆಯನ್ನು ಶ್ಲಾಘಿಸಿದರು. ಸಿಬ್ಬಂದಿಗಳ ಪರವಾಗಿ ಬೆಳ್ಳಾರೆ ಶಾಖೆಯ ವ್ಯವಸ್ಥಾಪಕ ಸಂತೋಷ್, ಉಪ್ಪುಂದ ಶಾಖೆಯ ವ್ಯವಸ್ಥಾಪಕ ಶಂಕರ್ ಶೆಟ್ಟಿ ಮಾತನಾಡಿ ಬ್ಯಾಂಕಿನ ಅಧ್ಯಕ್ಷರಿಗೆ ಹಾಗೂ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.

ಎಸ್‌ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ.ರಾಜರಾಮ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಾಲ್ಯೋಟ್ಟು, ಎಸ್. ಬಿ. ಜಯರಾಮ್ ರೈ, ಎಂ.ಮಹೇಶ್ ಹೆಗ್ಡೆ, ಮೋನಪ್ಪ ಶೆಟ್ಟಿ ಎಕ್ಕಾರು, ಹರಿಶ್ಚಂದ್ರ, ಕೆ.ಜೈರಾಜ್ ಬಿ.ರೈ, ಸದಾಶಿವ ಉಳ್ಳಾಲ್, ರಾಜೇಶ್ ರಾವ್ ಇದ್ದರು.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಉಪ ಮಹಾಪ್ರಬಂಧಕಿ ವಿದ್ಯಾ ಕಾರ್ನಾಡು ವಂದಿಸಿದರು. ಬ್ಯಾಂಕಿನ ಉಪ ಮಹಾಪ್ರಬಂಧಕ ನಿತ್ಯಾನಂದ ಶೇರಿಗಾರ್ ಹಾಗೂ ಸಹಾಯಕ ಮಹಾಪ್ರಬಂಧಕ ರಾಜೇಶ್ ಶೆಟ್ಟಿ ನಿರೂಪಿಸಿದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ