ಮೇ ೫ ರಿಂದ ಪರಿಶಿಷ್ಟ ಜಾತಿ ಕುಟುಂಬ ಸಮೀಕ್ಷೆ: ಜಿಲ್ಲಾಧಿಕಾರಿ ಡಾ: ಕುಮಾರ

KannadaprabhaNewsNetwork | Published : Apr 24, 2025 12:04 AM

ಸಾರಾಂಶ

ಅಧಿಕಾರಿಗಳು ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಜಿಲ್ಲೆಯ ಯಾವುದೇ ಪರಿಶಿಷ್ಟ ಜಾತಿಯ ಕುಟುಂಬ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು. ಕುಟುಂಬದ ಉಪಜಾತಿ, ಆರ್ಥಿಕ ಮತ್ತು ಸಾಮಾಜಿಕ ಮಟ್ಟ ಸೇರಿದಂತೆ ಸಮೀಕ್ಷೆಯಲ್ಲಿ ನೀಡಲಾಗಿರುವ ಎಲ್ಲಾ ಪ್ರಶ್ನೆಗಳಿಗೆ ನಿಖರ ಉತ್ತರ ಪಡೆದು ಅಪಲೋಡ್ ಮಾಡಬೇಕಿರುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ದತ್ತಾಂಶ ಶೇಖರಿಸುವ ಸಮೀಕ್ಷೆ ಜಿಲ್ಲೆಯಲ್ಲಿ ಮೇ ೫ ರಿಂದ ೧೭ರವರೆಗೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಅಧಿಕಾರಿಗಳು ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಜಿಲ್ಲೆಯ ಯಾವುದೇ ಪರಿಶಿಷ್ಟ ಜಾತಿಯ ಕುಟುಂಬ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು. ಕುಟುಂಬದ ಉಪಜಾತಿ, ಆರ್ಥಿಕ ಮತ್ತು ಸಾಮಾಜಿಕ ಮಟ್ಟ ಸೇರಿದಂತೆ ಸಮೀಕ್ಷೆಯಲ್ಲಿ ನೀಡಲಾಗಿರುವ ಎಲ್ಲಾ ಪ್ರಶ್ನೆಗಳಿಗೆ ನಿಖರ ಉತ್ತರ ಪಡೆದು ಅಪಲೋಡ್ ಮಾಡಬೇಕಿರುತ್ತದೆ. ಇದಕ್ಕಾಗಿ ಏಪ್ರಿಲ್ ೨೮ ರಂದು ತಾಲೂಕು ಮಟ್ಟದಲ್ಲಿ ಸಮೀಕ್ಷೆ ನಡೆಸುವ ಎನ್ಮುರೇಟರ್ಸ್‌ಗೆ ತರಬೇತಿ ನೀಡಲಾಗುವುದು ಎಂದರು.

ಎನ್ಮುರೇಟರ್ಸ್‌ಗಳನ್ನು ಕಡ್ಡಾಯವಾಗಿ ಶಾಲಾ ಶಿಕ್ಷಕರನ್ನು ನೇಮಿಸಬೇಕು. ಪ್ರತಿ ಎನ್ಮುರೇಟರ್ಸ್ ಗುಂಪಿನ ಕೆಲಸವನ್ನು ಪರಿಶೀಲಿಸಲು ಮುಖ್ಯ ಶಿಕ್ಷಕರನ್ನು ನೇಮಕ ಮಾಡಬೇಕು. ಮೇ ೧೭ ರ ಸಮೀಕ್ಷೆ ಮುಗಿದ ನಂತರ ಮೇ ೧೯ ರಿಂದ ೨೨ ರವರೆಗೆ ಸ್ಥಳ ನಿಗದಿ ಮಾಡಿ ಶಿಬಿರ ನಡೆಸಲಾಗುವುದು. ಶಿಬಿರದಲ್ಲಿ ಯಾವುದೇ ಪರಿಶಿಷ್ಟ ಜಾತಿಯ ಕುಟುಂಬ ಸಮೀಕ್ಷೆಯಿಂದ ಬಿಟ್ಟುಹೋಗಿದ್ದಲ್ಲಿ ಸಂಪರ್ಕಿಸಿ ಸಮೀಕ್ಷೆಗೆ ಒಳಗಾಗಲೂ ಅವಕಾಶ ಸಹ ನೀಡಲಾಗಿದೆ ಎಂದರು.

ಏಪ್ರಿಲ್ ೨೫ರಂದು ಜಿಲ್ಲಾ ಮಟ್ಟದಲ್ಲಿ ಹಾಗೂ ೨೮ ರಂದು ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಕಂಪ್ಯೂರ್ಟ ಹಾಗೂ ಸಮೀಕ್ಷೆಯ ಜ್ಞಾನವಿರುವ ಸಿಬ್ಬಂದಿಯನ್ನು ನಿಯೋಜಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಮಂಡ್ಯ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾಯಣ್ಣಗೌಡ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ನಗರಸಭೆ ಪೌರಾಯುಕ್ತೆ ಪಂಪಾಶ್ರೀ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಮೀಕ್ಷೆ ವೇಳೆ ಆದಿಜಾಂಬವ ಅರುಂಧತಿ ನಾಯರ್ ಎಂದು ಬರೆಸಿ: ಸಿದ್ದರಾಜು

ಕನ್ನಡಪ್ರಭ ವಾರ್ತೆ ಮಂಡ್ಯ

ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗದಿಂದ ಬರುವ ಮೇ ೫ರಿಂದ ನಡೆಯಲಿರುವ ಜಾತಿಗಣತಿ ಸಮೀಕ್ಷೆಯಲ್ಲಿ ವಂಚಿತ ಸಮುದಾಯವಾಗಿರುವ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವವರು ಆದಿಜಾಂಬವ ಅರುಂಧತಿಯಾರ್ ಎಂದು ಬರೆಸುವಂತೆ ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ತಿಳಿಸಿದರು.

ಪ್ರಸ್ತುತ ಮಾದಿಗ ಸಮುದಾಯದೊಂದಿಗೆ ನಮ್ಮನ್ನು ಸೇರಿಸಿದ್ದು, ಇದರಿಂದ ನಮಗೆ ಒಳ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ. ಹೀಗಾಗಿ ಆದಿಜಾಂಬವ ಅರುಂಧತಿಯಾರ್ ಎಂದು ನಮೂದಿಸಬೇಕು ಎಂದು ಸಲಹೆ ನೀಡಿದರು.

ಆಂಧ್ರ ಮತ್ತು ತಮಿಳುನಾಡಿನಲ್ಲಿ ನಮ್ಮ ಸಮುದಾಯಕ್ಕೆ ಶೇ.೩ರಷ್ಟು ಮೀಸಲಾತಿ ನೀಡಿದ್ದಾರೆ. ಕರ್ನಾಟಕದಲ್ಲೂ ಮೀಸಲಾತಿ ನೀಡುವಂತೆ ಒತ್ತಾಯಿಸಿದರಲ್ಲದೇ, ಮಾದಿಗ ಸಮುದಾಯಕ್ಕೆ ನೀಡಿರುವ ಮೀಸಲಾತಿಯಲ್ಲೇ ನಾವೂ ಪಡೆದುಕೊಳ್ಳಬೇಕಾಗಿದೆ. ಇದು ನಮಗೆ ತೊಂದರೆಯಾಗಿದೆ ಎಂದರು.

ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಸೇವಕರಾದ ಆದಿದ್ರಾವಿಡ ಅರುಂಧತಿಯಾರ್ ಜನಾಂಗವು ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿ, ಶೈಕ್ಷಣಿಕವಾಗಿ ಕಟ್ಟ ಕಡೆಯ ಸಮುದಾಯವಾಗಿ ಉಳಿದಿದ್ದು, ಒಳಮೀಸಲಾತಿಯಿಂದಲೂ ವಂಚಿತರಾಗಿದ್ದಾರೆ ಎಂದರು.

ಆದಿದ್ರಾವಿಡ ಅರುಂಧತಿಯಾರ್ ಜಿಲ್ಲಾಧ್ಯಕ್ಷೆ ನಾಗಮಣಿ.ಕೆ, ನಗರ ಘಟಕದ ಅಧ್ಯಕ್ಷ ರವಿ, ಪಳನಿ ಇತರರು ಗೋಷ್ಠಿಯಲ್ಲಿದ್ದರು.

Share this article