- ಗಣೇಶ, ಈದ್ ಮಿಲಾದ್ ಹಬ್ಬದ ನಿಮಿತ್ತ ಶಾಂತಿ ಸಭೆಯಲ್ಲಿ ಬಿ.ಎಸ್.ನಿರಂಜನ್‌ಗೌಡ ತಾಕೀತು
ಗಣೇಶೋತ್ಸವ ವಿಸರ್ಜನಾ ಮೆರವಣಿಗೆ, ಮನರಂಜನಾ ಕಾರ್ಯಕ್ರಮವನ್ನು ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು. ಆನಂತರ ಧ್ವನಿವರ್ಧಕ ಬಳಸಬಾರದು ಎಂದು ಪೊಲೀಸ್ ಠಾಣಾಧಿಕಾರಿ ಬಿ.ಎಸ್.ನಿರಂಜನ್‌ಗೌಡ ಸೂಚನೆ ನೀಡಿದರು.
ಶುಕ್ರವಾರ ತಾಪಂ ಸಾಮರ್ಥ್ಯ ಸೌಧದಲ್ಲಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆ ನಿಮಿತ್ತ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ಎನ್.ಆರ್.ಪುರ ಶಾಂತಿಯ ಊರಾಗಿದೆ. ಇಲ್ಲಿ ಎಲ್ಲಾ ಹಬ್ಬಗಳನ್ನು ಶಾಂತಿ ಹಾಗೂ ಸೌಹಾರ್ದ ಯುತವಾಗಿ ಆಚರಿಸುತ್ತಾ ಬರಲಾಗುತ್ತಿದೆ. ಹಾಗೆಯೇ ಮುಂದುವರಿಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.ಗಣೇಶನ ವಿಗ್ರಹಕ್ಕೆ ಬೆಲೆ ಬಾಳುವ ಚಿನ್ನಾಭರಣ ಹಾಕುತ್ತಿದ್ದರೆ ಪೆಂಡಾಲ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಪೆಂಡಾಲ್‌ನಲ್ಲಿ ರಾತ್ರಿ ಕಾವಲುಗಾರರನ್ನು ನೇಮಿಸಿಕೊಳ್ಳಬೇಕು. ಈ ಬಾರಿ ಪಟ್ಟಣ ವ್ಯಾಪ್ತಿಯ ಎಲ್ಲಾ ಗಣೇಶ ವಿಗ್ರಹಗಳನ್ನು ಮೆಣಸೂರು ಭದ್ರಾ ಹಿನ್ನೀರಿನಲ್ಲಿ ವಿಸರ್ಜಿಸಲು ನಿರ್ಧರಿಸಲಾಗಿದೆ. ಪಟ್ಟಣ ವ್ಯಾಪ್ತಿಯ ಎಲ್ಲ ಗಣೇಶ ಸಮಿತಿಯವರು ಇದಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಮಸೀದಿ ಮುಖ್ಯಸ್ಥ ಸೈಯದ್ ಸಾಧಿಕ್ ಬಾಷಾ ಮಾತನಾಡಿ, ನಮ್ಮ ಸಮೂದಾಯವರು ಸೆ.16 ರಂದು ಈದ್ ಮಿಲಾದ್ ಆಚರಿಸುತ್ತೇವೆ. ರಾತ್ರಿ 9 ರಿಂದ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಗುವುದು. ಮೆರವಣಿಗೆ ಇನ್ನಿತರೆ ಕಾರ್ಯಕ್ರಮ ಆಯೋಜಿಸಿದರೆ ಪೊಲೀಸ್ ಇಲಾಖೆ ಗಮನಕ್ಕೆ ತರಲಾಗುವುದು. ಗಣೇಶೋತ್ಸವಕ್ಕೆ ನಮ್ಮ ಶುಭಾಶಯಗಳು. ಎಲ್ಲರೂ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸೋಣ ಎಂದರು.
ತಾಪಂ ನರೇಗಾ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಗಣಪತಿ ಪೆಂಡಾಲ್ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಗ್ರಾಮದ ಸ್ವಚ್ಛತೆಗೆ ಗ್ರಾಪಂ ಸಿಬ್ಬಂದಿಯೊಂದಿಗೆ ಸಹಕರಿಸ ಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಪಪಂ ಮುಖ್ಯಾಧಿಕಾರಿ ಆರ್.ವಿ. ಮಂಜುನಾಥ್, ತಾಲೂಕಿನ ವಿವಿಧ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿವಿಧ ಮಸೀದಿಗಳ ಮುಖ್ಯಸ್ಥರು, ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು, ಗ್ರಾ.ಪಂ. ಪಿಡಿಓಗಳು ಉಪಸ್ಥಿತರಿದ್ದರು.