ಶಾಲೆ ಮಾನ್ಯತೆ: ಡಿಡಿಪಿಐ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

KannadaprabhaNewsNetwork | Published : May 5, 2025 12:46 AM

ಸಾರಾಂಶ

ಪಟ್ಟಣದ ದುರ್ಗಿಗುಡಿಯ ಸ್ವಾಮಿ ವಿವೇಕಾನಂದ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಾವುದೇ ಮೂಲಸೌಕರ್ಯಗಳು ಇಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆ ಉಲ್ಲಂಘಿಸಿರುವ ಕಾರಣ ಆ ಶಾಲೆಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿಯಿಂದ 10ನೇ ತರಗತಿಗೆ ನೀಡಿದ್ದ ಮಾನ್ಯತೆ ಡಿಡಿಪಿಐ ಹಿಂಪಡೆದಿದ್ದ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಸ್ವಾಮಿ ವಿವೇಕಾನಂದ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ರೇವಣಸಿದ್ದಪ್ಪ ಹೇಳಿದ್ದಾರೆ.

- ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ರೇವಣಸಿದ್ದಪ್ಪ ಮಾಹಿತಿ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ದುರ್ಗಿಗುಡಿಯ ಸ್ವಾಮಿ ವಿವೇಕಾನಂದ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಾವುದೇ ಮೂಲಸೌಕರ್ಯಗಳು ಇಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆ ಉಲ್ಲಂಘಿಸಿರುವ ಕಾರಣ ಆ ಶಾಲೆಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿಯಿಂದ 10ನೇ ತರಗತಿಗೆ ನೀಡಿದ್ದ ಮಾನ್ಯತೆ ಡಿಡಿಪಿಐ ಹಿಂಪಡೆದಿದ್ದ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಸ್ವಾಮಿ ವಿವೇಕಾನಂದ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ರೇವಣಸಿದ್ದಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರೋ ಒಬ್ಬ ಅನಾಮಧೇಯ ವ್ಯಕ್ತಿ ನೀಡಿದ ದೂರನ್ನು ಪರಿಗಣಿಸಿ, ಡಿಡಿಪಿಐ ಅವರು ನಮ್ಮ ಶಾಲೆಗೆ ನೀಡಿದ ಮಾನ್ಯತೆ ಹಿಂಪಡೆದಿದ್ದರು. ಆದರೆ ನಮ್ಮ ಸಂಸ್ಥೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿ, ನಮ್ಮ ಶಾಲೆಯಲ್ಲಿ ಇರುವ ಮೂಲ ಸೌಕರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದೆವು. ಇದನ್ನು ಪರಿಗಣಿಸಿದ ರಾಜ್ಯ ಉಚ್ಚ ನ್ಯಾಯಾಲಯ 2025-26ನೇ ಸಾಲಿನ ಮಾನ್ಯತೆ ಹಿಂಪಡೆದಿದ್ದ ಡಿಡಿಪಿಐ ಆದೇಶಕ್ಕೆ ತಡೆ ನೀಡಿದೆ ಎಂದರು.

ಶಾಲೆಯಲ್ಲಿ ಸಕಲ ಸೌಕರ್ಯಗಳಿವೆ. ಸ್ಥಿರನಿಧಿ ಇಟ್ಟಿದ್ದೇವೆ. 1992-93 ರಿಂದ ಇಲ್ಲಿಯವರೆಗೂ ಪ್ರತಿ ವರ್ಷ ಮಾನ್ಯತೆ ನವೀಕರಣ ಮಾಡಿಸಿಕೊಂಡು ಬರುತ್ತಿದ್ದೇವೆ. ಸಣ್ಣಪುಟ್ಟ ಲೋಪಗಳಿದ್ದರೆ ಹೇಳಲಿ ತಿದ್ದುಕೊಳ್ಳುತ್ತೇವೆ. ಆದರೆ, ಸುಖಾಸುಮ್ಮನೆ ಸುಳ್ಳು ಆರೋಪ ಹೊರಿಸಿ ಶಾಲೆ ಮಾನ್ಯತೆ ಹಿಂಪಡೆಯುವ ಸುದ್ದಿ ಪೋಷಕರನ್ನು ಗೊಂದಲಕ್ಕೆ ಈಡುಮಾಡಿದೆ. ಇನ್ನು ಮುಂದೆ ಇದೇ ರೀತಿ ಮುಂದುವರಿದರೆ ಕಾನೂನು ರೀತ್ಯಾ ಮಾನಹಾನಿ ಕೇಸ್ ದಾಖಲು ಮಾಡಬೇಕಾಗುತ್ತದೆ ಎಂದರು.

ಪೋಷಕರಲ್ಲಿ ಗೊಂದಲ ಬೇಡ:

ಶಾಲೆ ಬಗ್ಗೆ ಸುಳ್ಳು ಮಾಹಿತಿ ಆಧರಿಸಿ ಡಿಡಿಪಿಐ ಮಾನ್ಯತೆ ಹಿಂಪಡೆದಿದ್ದ ಆದೇಶಕ್ಕೆ ತಡೆ ತಂದಿದ್ದೇವೆ. ನ್ಯಾಯಾಲಯದಲ್ಲಿ ಶಾಲೆಗೆ ಜಯ ಸಿಕ್ಕಿದೆ. ಪೋಷಕರಲ್ಲಿ ಗೊಂದಲ ಬೇಡ. 2025-26ನೇ ಸಾಲಿಗೆ ಮಕ್ಕಳನ್ನು ಶಾಲೆಗೆ ದಾಖಲು ಮಾಡಬಹುದು ಎಂದರು.

ಪುರಸಭೆ ನಾಮಿನಿ ಸದಸ್ಯ ಹಾಗೂ ಶಾಲೆ ಪೋಷಕ ರೇವಣಸಿದ್ದಪ್ಪ ಮೂಲಿಮನಿ ಮಾತನಾಡಿದರು. ಶಾಲೆ ಮುಖ್ಯೋಪಾಧ್ಯಾಯರಾದ ಮಲ್ಲಿಕಾರ್ಜುನ್, ಪೋಷಕರಾದ ಮಂಜಪ್ಪ, ಚಂದ್ರಪ್ಪ, ಇಂದ್ರೇಶ್, ಶಿಕ್ಷಕರಾದ ಕೆಂಚಪ್ಪ, ಚೇತನ್‌ಕುಮಾರ್ ಶಕೀಲ್, ಹರೀಶ್ ಹಾಗೂ ಪ್ರದೀಪ್ ಇದ್ದರು.

- - -

-4ಎಚ್.ಎಲ್.ಐ2.ಜೆಪಿಜಿ:

ಶಾಲೆ ಅಧ್ಯಕ್ಷ ರೇವಣಸಿದ್ದಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article