ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಋತುಮತಿ ಆರೈಕೆಯಲ್ಲಿದ್ದ ವಿದ್ಯಾರ್ಥಿನಿಯನ್ನು ಶಾಲಾ ಗೇಟ್ ಹೊರಗೆ ನಿಲ್ಲಿಸಿ, ಶಾಲಾ ಆಡಳಿತ ಮಂಡಳಿ ಅವಮಾನವೀಯ ವರ್ತನೆ ತೋರುವ ಜೊತೆಗೆ ಪ್ರಶ್ನಿಸಲು ಸಂಘಟನೆಯೊಂದಿಗೆ ತೆರಳಿದ್ದ ಪೋಷಕರ ವಿರುದ್ಧವೇ ದೂರು ನೀಡಿರುವ ಘಟನೆ ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಸುಪ್ರೀಂ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ.ತರಗತಿ ಆರಂಭಕ್ಕೂ ಮುನ್ನ ಪ್ರಾರ್ಥನೆಗೆ ತಡವಾಗಿ ಬಂದಿದ್ದಕ್ಕೆ ಮಾನವೀಯತೆ ಮರೆತು ವಿದ್ಯಾರ್ಥಿನಿಯನ್ನು ಗೇಟ್ ನಿಂದ ಆಚೆ ನಿಲ್ಲಿಸಿ ದೌರ್ಜನ್ಯವೆಸಗಿರುವುದಾಗಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ವಿದ್ಯಾರ್ಥಿನಿ ತಂದೆ ಮಹಾಂತೇಶ್ ಪ್ರತಿಕ್ರಿಯಿಸಿ, ಎಂದಿನಂತೆ ನನ್ನ ಮಗಳನ್ನು ಶಾಲೆಗೆ ಬಿಡಲು ಆಗಮಿಸಿದೆ. ಈ ವೇಳೆ ಶಾಲೆ ಆಯಾ ಗೇಟ್ ಬಂದ್ ಮಾಡಿ ಬೀಗ ಹಾಕುತ್ತಿದ್ದರು. ನನ್ನ ಮಗಳನ್ನು ಒಳಗೆ ಕರೆದುಕೊಂಡು ಬೀಗ ಹಾಕಿಕೊಳ್ಳಿ ಎಂದು ಹೇಳಿದೆ. ಅದನ್ನು ಕೇಳದ ಆಯಾ, ಶಾಲಾ ಆಡಳಿತ ಮಂಡಳಿ ನನಗೆ ಬೈಯಲಿದ್ದಾರೆ ಎಂದು ಹೇಳಿ ಹೊರಗೆ ನಿಲ್ಲಿಸಿದ್ದರು.ಶಾಲೆಗೆ ಹೊಂದಿಕೊಂಡಂತಿರುವ ಐಟಿಐ ಕಾಲೇಜಿನ ಹುಡುಗರು ಅಲ್ಲಿದ್ದ ಕಾರಣ ಮಗಳನ್ನು ಗೇಟ್ ನಿಂದ ಹೊರಗಡೆ ನಿಲ್ಲಿಸಬೇಡಿ. ಗೇಟ್ ಒಳಗೆ ಬೇಕಾದರೆ ನಿಲ್ಲಿಸಿ, ಮಗಳೊಬ್ಬಳನ್ನೇ ಬಿಟ್ಟು ಹೇಗೆ ಹೋಗಲು ಸಾಧ್ಯ. ಜೊತೆಗೆ ಶಾಲಾ ಗೇಟ್ ಬಳಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಂಡು ವಿದ್ಯಾರ್ಥಿಗಳಿಗೆ ಭದ್ರತೆ ಒದಗಿಸುವಂತೆ ಒತ್ತಾಯಿಸಿದ್ದೇನೆ. ಜೊತೆಗೆ ಸ್ಥಳೀಯ ಮುಖಂಡರು ಹಾಗೂ ಮಂಡ್ಯ ರಕ್ಷಣಾ ವೇದಿಕೆ ಸಂಘಟನೆಯೊಂದಿಗೆ ಜೊತೆಗೂಡಿ ಶಾಲೆಗೆ ಭದ್ರತಾ ಸಿಬ್ಬಂದಿ ನಿಯೋಜಿಸುವಂತೆ ಆಗ್ರಹಿಸಿದ್ದೇವೆ. ಅವರೊಂದಿಗೆ ಅಸಭ್ಯವಾಗಿ ವರ್ತಿಸಿಲ್ಲ ಎಂದರು.
ಶಾಲೆಗೆ ತೆರಳಿ ಪ್ರಶ್ನೆ ಮಾಡಿದ್ದಕ್ಕೆ ನಮ್ಮ ವಿರುದ್ಧವೇ ಠಾಣೆಯಲ್ಲಿ ದೂರು ನೀಡಿ ಆಡಳಿತ ಮಂಡಳಿ ದಬ್ಬಾಳಿಕೆ ನಡೆಸುತ್ತಿದೆ. ನಾವೂ ಸಹ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಈ ಬಗ್ಗೆ ಮಾಹಿತಿ ತಿಳಿದ ಬಿಇಒ ಮಹೇಶ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲಾ ಆಡಳಿತ ಮಂಡಳಿಗೆ ಕಾರಣ ಕೇಳಿ ಷೋಕಾಸ್ ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿದ್ದಾರೆ.
ಶಾಲಾ ಆಡಳಿತ ಮಂಡಳಿ ಮುಖ್ಯಸ್ಥ ಬಾಲುಸುಬ್ರಹ್ಮಣ್ಯ ಪ್ರತಿಕ್ರಿಯಿಸಿ, ಶಾಲೆಯಲ್ಲಿ ನಾಡ ಹಾಗೂ ರಾಷ್ಟ್ರಗೀತೆ ನಡೆಯುವ ಸಮಯದಲ್ಲಿ ಗೌರವ ಸೂಚಿಸುವ ಸಲುವಾಗಿ ಯಾರೇ ತಡವಾಗಿ ಬಂದರೂ ಸಹ ಅವರನ್ನು ಗೇಟ್‌ನಿಂದ ಹೊರಗೆ ನಿಲ್ಲಿಸುವುದು ಪ್ರತೀತಿ. ಒಂದು ವೇಳೆ ಶಿಕ್ಷಕರು ಅಥವಾ ನಾನೇ ತಡವಾಗಿ ಬಂದರೂ ಸಹ ಅದನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ ಎಂದರು.ಈ ಹುಡುಗಿ ಋತುಮತಿ ಆರೈಕೆಯಲ್ಲಿದೆ ಎಂಬ ಕಾರಣಕ್ಕೆ ಶಾಲೆಗೆ ತಡವಾಗಿ ಕರೆದುಕೊಂಡು ಬರುವಂತೆ ಅವಕಾಶ ಸಹ ಕಲ್ಪಿಸಿದ್ದೇವೆ. ಆ ದಿನ ಶಾಲೆಗೆ ಬೇಗನೆ ಕರೆದುಕೊಂಡು ಬಂದು ಉದ್ದೇಶ ಪೂರ್ವಕವಾಗಿ ಗಲಾಟೆ ನಡೆಸಿದ್ದಾರೆ. ಅಲ್ಲದೆ ಅದೇ ದಿನ ರಾತ್ರಿ ವೇಳೆ ಶಾಲಾ ಕಾಂಪೌಡ್ ಒಳಗಿನ ತೆಂಗಿನ ಮರಕ್ಕೆ ಬೆಂಕಿ ಹಚ್ಚಲಾಗಿದೆ. ಈ ಸಂಬಂಧ ಠಾಣೆಯಲ್ಲಿ ದೂರು ನೀಡಿದ್ದು, ಕಾನೂನು ಹೋರಾಟ ನಡೆಸುತ್ತೇವೆ ಎಂದರು.