ದೊಡ್ಡಬಳ್ಳಾಪುರ: ಇಲ್ಲಿನ ಪೊಲೀಸ್ ಇಲಾಖೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ, ಯುವ ಸಂಚಲನ ಚಾರಿಟಬಲ್ ಟ್ರಸ್ಟ್, ಚೈಲ್ಡ್ ರೈಟ್ಸ್ ಟ್ರಸ್ಟ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೋಜಿಪುರ ಸಹಯೋಗದಲ್ಲಿ ತೆರೆದ ಮನೆ ಕಾರ್ಯಕ್ರಮ ನಡೆಸಲಾಯಿತು.
ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ಹಾಗೂ ಚೈಲ್ಡ್ ರೈಟ್ಸ್ ಟ್ರಸ್ಟ್ ನಿಂದ ಎಲ್ಲಾ ಮಕ್ಕಳಿಗೂ, ಎಲ್ಲಾ ಹಕ್ಕುಗಳು (ಹಕ್ಕಿನೊಂದಿಗೆ ಜವಾಬ್ದಾರಿ)- ಅಭಿಯಾನದಡಿ
ಮಕ್ಕಳ ಬದುಕು, ರಕ್ಷಣೆ, ಅಭಿವೃದ್ಧಿ ಹಾಗೂ ಭಾಗವಹಿಸುವಿಕೆಯ ಹಕ್ಕುಗಳನ್ನು ಎಲ್ಲರಿಗೂ ತಲುಪಿಸಲು ಹಾಗೂ ಮಕ್ಕಳಿಗಾಗಿ ಇರುವ ಕಾರ್ಯಕ್ರಮಗಳು ಮತ್ತು ಯೋಜನೆಗಳು ತಲುಪುವಂತೆ ಮಾಡುವುದು ಮತ್ತು ಮಕ್ಕಳ ಹಕ್ಕುಗಳ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ.ಆರಕ್ಷಕ ನಿರೀಕ್ಷಕ ಅಮರೇಶ್‌ಗೌಡ, ಠಾಣೆಯ ತನಿಖಾ ಸಹಾಯಕ ಮುನಿರಾಜು, ಮಕ್ಕಳಿಗೆ ಠಾಣೆಯ ಬೇರೆ ಬೇರೆ ವಿಭಾಗಗಳು, ಎಫ್ ಐ ಆರ್ ನೋಂದಣಿ ಪ್ರಕ್ರಿಯೆ, ಮಹಿಳಾ ಸಹಾಯವಾಣಿ, ಉಪಯೋಗಿಸುವ ಶಸ್ತ್ರಗಳು ಇತ್ಯಾದಿ ಮಾಹಿತಿಯನ್ನು ನೀಡಿದರು.
ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳು ಮಕ್ಕಳಿಗೆ ಬಾಲ್ಯ ವಿವಾಹ, ಬಾಲಕಾರ್ಮಿಕತೆ ಹಾಗೂ ಮಾದಕ ವಸ್ತುಗಳ ಬಗ್ಗೆ ಜಾಗೃತಿ ನೀಡಿ ನೇರ ಸಂವಾದ ಹಾಗೂ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಿದರು.ಕಾರ್ಯಕ್ರಮದಲ್ಲಿ ರೋಜಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 58 ಮಕ್ಕಳು ಹಾಗೂ ಶಿಕ್ಷಕರು, ಟೌನ್ ಪೊಲೀಸ್ ಠಾಣೆಯ ಆರಕ್ಷಕ ಸಿಬ್ಬಂದಿ, ಯುವ ಸಂಚಲನ ಅಧ್ಯಕ್ಷ ಚಿದಾನಂದಮೂರ್ತಿ, ಸಂಚಾಲಕ ನವೀನ್, ಸ್ವಯಂಸೇವಕರಾದ ರತ್ನ, ಕೀರ್ತಿ ಮತ್ತು ಲಾವಣ್ಯ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ-7ಕೆಡಿಬಿಪಿ9- ದೊಡ್ಡಬಳ್ಳಾಪುರದಲ್ಲಿ ತೆರೆದ ಮನೆ ಅಭಿಯಾನದ ಅಂಗವಾಗಿ ರೋಜಿಪುರ ಸರ್ಕಾರಿ ಶಾಲೆ ಮಕ್ಕಳು ಟೌನ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಕಾರ್ಯಪ್ರಕ್ರಿಯೆಗಳ ವೀಕ್ಷಣೆ ನಡೆಸಿದರು.