ಕಳೆದ ವಿಧಾನಸಭಾ ಚಳಿಗಾಲದ ಅಧಿವೇಶನದ ಸಮಯದಲ್ಲೂ ಬೆಂಬಲ ಬೆಲೆ, ಕಬ್ಬು ಬೆಳೆಗಾರರ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳ ವಿರುದ್ದ ರೈತಸಂಘ ಹೋರಾಟ ಕೈಗೊಂಡಿತ್ತು. ಅದರಂತೆ ಇದೀಗ ಡಿ.10 ರಂದು ಮೆಕ್ಕೇಜೋಳ ಖರೀದಿ ಸೇರಿದಂತೆ ಹಲವಾರು ರೈತ ಸಮಸ್ಯೆಗಳ ಪರಿಹಾರಕ್ಕಾಗಿ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ

ಕನ್ನಡಪ್ರಭ ವಾರ್ತೆ ಗುಡಿಬಂಡೆ

ರಾಜ್ಯದಾದ್ಯಂತ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಸದಾ ಸಿದ್ದವಾಗಿದ್ದು, ಡಿ.10 ರಂದು ವಿವಿಧ ಸಮಸ್ಯೆಗಳ ಈಡೇರಿಕೆಗಾಗಿ ಬೆಳಗಾವಿ ಚಲೋ ಚಳವಳಿಯನ್ನು ಹಮ್ಮಿಕೊಂಡಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ.ರಾಮನಾಥ್ ತಿಳಿಸಿದರು.

ಈ ಕುರಿತು ಪಟ್ಟಣದಲ್ಲಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಚೇರಿಯಲ್ಲಿ ಪತ್ರಿಕಾಗೋಷ್ಖಿ ನಡೆಸಿದ ಅವರು, ಸರ್ಕಾರಗಳು ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಸದಾ ಹೋರಾಟಗಳ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ರೈತ ಸಂಘ ಮಾಡುತ್ತಿದೆ. ಆದರೂ ಸಹ ಸರ್ಕಾರಗಳು ಮೊಂಡುತನ ಪ್ರದರ್ಶನ ಮಾಡುತ್ತಿವೆ ಎಂದರು.

ಮೆಕ್ಕೇಜೋಳ ಖರೀದಿಗೆ ಆಗ್ರಹ

ಕಳೆದ ವಿಧಾನಸಭಾ ಚಳಿಗಾಲದ ಅಧಿವೇಶನದ ಸಮಯದಲ್ಲೂ ಬೆಂಬಲ ಬೆಲೆ, ಕಬ್ಬು ಬೆಳೆಗಾರರ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳ ವಿರುದ್ದ ಹೋರಾಟ ಕೈಗೊಳ್ಳಲಾಗಿತ್ತು. ಅದರಂತೆ ಇದೀಗ ಡಿ.10 ರಂದು ಮೆಕ್ಕೇಜೋಳ ಖರೀದಿ ಸೇರಿದಂತೆ ಹಲವಾರು ರೈತ ಸಮಸ್ಯೆಗಳ ಪರಿಹಾರಕ್ಕಾಗಿ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗಿಯಾಗಬೇಕು ಎಂದು ಮನವಿ ಮಾಡಿದರು.

ಇನ್ನೂ ಟಿಎಪಿಸಿಎಂಎಸ್ ಚುನಾವಣೆಯ ಫಲಿತಾಂಶದ ಕುರಿತು ಮಾತನಾಡಿದ ಅವರು, ಕಳೆದೆರಡು ದಿನಗಳ ಹಿಂದೆಯಷ್ಟೆ ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ನಮ್ಮ ಸಂಘದ ವತಿಯಿಂದ ಎಲ್ಲ ವರ್ಗಗಳಿಂದ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿತ್ತು. ಆದರೆ ಬೆಂಗಳೂರಿನಿಂದ ಬಂದ ರಿಯಲ್ ಎಸ್ಟೇಟ್ ಉದ್ಯಮಿಗಳು ಹಣದ ಹೊಳೆ ಹರಿಸಿದ್ದರಿಂದ ನಮಗೆ ಸೋಲಾಯಿತು ಎಂದರು.

ಅಕ್ರಮ ಕಲ್ಲು ಗಣಿಗಾರಿಕೆ

ಇನ್ನೂ ತಾಲೂಕಿನಾದ್ಯಂತ ಹಲವು ಕಡೆ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ಸಾಗುತ್ತಿದೆ. ಸಂಜೆ ಸಮಯದಲ್ಲಿ ಅತಿಯಾಗಿ ಬ್ಲಾಸ್ಟ್ ಸಹ ಮಾಡುತ್ತಿದ್ದು, ಈ ಕುರಿತು ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ಆದಷ್ಟು ಶೀಘ್ರದಲ್ಲೇ ಹೋರಾಟಕ್ಕೆ ಮುಂದಾಗುತ್ತೇವೆ. ಈ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ಸಾಗಲು ಜಿಲ್ಲಾಡಳಿತದ ಭ್ರಷ್ಟಾಚಾರವೇ ಕಾರಣವಾಗಿದೆ. ರೈತರೂ ಸಹ ಈ ಸಂಬಂಧ ಎಚ್ಚರಿಕೆ ವಹಿಸಿ ನಮ್ಮ ಹೋರಾಟಕ್ಕೆ ಸಾಥ್ ಕೊಡಬೇಕು ಎಂದರು.

ಈ ಸಮಯದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷ ರವಿಂದ್ರರೆಡ್ಡಿ, ಮುಖಂಡರಾದ ಆದಿನಾರಾಯಣಪ್ಪ, ಚೌಡರೆಡ್ಡಿ, ಶ್ರೀನಿವಾಸ್, ಸುದರ್ಶನ್, ರಾಮರೆಡ್ಡಿ, ಲಕ್ಷ್ಮೀನಾರಾಯಣಪ್ಪ, ನರಸಿಂಹರೆಡ್ಡಿ ಸೇರಿದಂತೆ ಹಲವರು ಇದ್ದರು.