ಕಂಪ್ಲಿ: 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭದ ಅಂಗವಾಗಿ ತಾಲೂಕಿನ ಎಲ್ಲೆಡೆ ಸರ್ಕಾರಿ ಶಾಲೆಗಳಲ್ಲಿ ಸೋಮವಾರ ಶಾಲಾರಂಭೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಬೇಸಿಗೆ ರಜೆಯ ಬಳಿಕ ಶಾಲೆಗೆ ಮರಳಿದ ಮಕ್ಕಳನ್ನು ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿದರು.
ಪಟ್ಟಣದ ಸತ್ಯನಾರಾಯಣಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾರಂಭೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಹಾಗೂ ಇಸಿಒ ಎಂ. ರೇವಣ್ಣ ಮಾತನಾಡಿ, ಹೊಸ ಶೈಕ್ಷಣಿಕ ವರ್ಷದ ಮೊದಲ ದಿನ ವಿದ್ಯಾರ್ಥಿಗಳ ಹಾಜರಾತಿ ತೃಪ್ತಿಕರವಾಗಿದ್ದು, ಶಾಲೆಗೆ ಆಗಮಿಸಿದ ಮಕ್ಕಳಿಗೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿವೇತನ ಸೇರಿದಂತೆ ಹಲವು ಸೌಲಭ್ಯಗಳು ದೊರೆಯುತ್ತವೆ. ಈ ಬಗ್ಗೆ ಪಾಲಕರು ಹೆಚ್ಚಿನ ಅರಿವು ಹೊಂದಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಮನವಿ ಮಾಡಿದರು.ಎಲ್‌ಕೆಜಿ ಹಾಗೂ ಪ್ರಥಮ ತರಗತಿಗೆ ಮೊದಲ ದಿನವೇ ಹತ್ತು ಮಕ್ಕಳು ಹೊಸದಾಗಿ ಪ್ರವೇಶ ಪಡೆದಿರುವುದು ಸಂತಸದ ವಿಷಯವಾಗಿದೆ. ಶಾಲೆಗೆ ಆಗಮಿಸಿದ ಪಾಲಕರೊಂದಿಗೆ ಸಭೆ ನಡೆಸಿ, ಶಿಕ್ಷಣದ ಮಹತ್ವ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಸಕ್ಕರೆ ಕಾರ್ಖಾನೆ ಆವರಣದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಶಾಲಾರಂಭೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು. ಶಾಲೆಗೆ ಬಂದ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿ, ಉಚಿತ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ನೋಟುಪುಸ್ತಕಗಳನ್ನು ವಿತರಿಸಲಾಯಿತು. ಮಕ್ಕಳಿಗೆ ಸಿಹಿ ಹಂಚುವ ಮೂಲಕ ಹೊಸ ಶೈಕ್ಷಣಿಕ ವರ್ಷದ ಸಂಭ್ರಮವನ್ನು ಹೆಚ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಮಲಿಂಗ, ಪ್ರಮುಖರಾದ ಬಿ. ಶೇಖರ್, ನಾಗರಾಜ, ಆದಿನಾರಾಯಣ, ಮರಿಯಸ್ವಾಮಿ ಹಾಗೂ ಶಾಲೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು.