ಸಾಮಾನ್ಯವಾಗಿ ಶಾಲೆಗಳು ಆರಂಭವಾದ ನಂತರವೂ ತಿಂಗಳುಗಳ ಕಾಲ ಪುಸ್ತಕಗಳಿಗಾಗಿ ವಿದ್ಯಾರ್ಥಿಗಳು ಕಾಯಬೇಕಾಗುತ್ತಿದ್ದ ಪರಿಸ್ಥಿತಿ ಈ ಬಾರಿ ಬಹುತೇಕ ತಪ್ಪುವ ಸಾಧ್ಯತೆ ಇದೆ.
ರಿಯಾಜಅಹ್ಮದ ಎಂ. ದೊಡ್ಡಮನಿ
ಡಂಬಳ: 2026ರ ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೆ ಮುಂಡರಗಿ ತಾಲೂಕಿನಾದ್ಯಂತ ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ ಕೈಗೊಂಡಿದ್ದು, ವಿದ್ಯಾರ್ಥಿಗಳಿಗೆ ಶಾಲೆಯ ಆರಂಭದ ಮೊದಲ ದಿನವೇ ಹೊಸ ಪಠ್ಯಪುಸ್ತಕ ವಿತರಿಸಲು ಇಲಾಖೆ ಸಜ್ಜಾಗಿದೆ.
ತಾಲೂಕಿಗೆ ಈಗಾಗಲೇ ಶೇ. 70ರಷ್ಟು ಪಠ್ಯಪುಸ್ತಕಗಳು ಸರಬರಾಜಾಗಿದ್ದು, ಉಳಿದ ಪುಸ್ತಕಗಳೂ ಶಾಲಾರಂಭಕ್ಕೂ ಮುನ್ನವೇ ತಲುಪಲಿವೆ ಎಂದು ಶಿಕ್ಷಣ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.
ಸಾಮಾನ್ಯವಾಗಿ ಶಾಲೆಗಳು ಆರಂಭವಾದ ನಂತರವೂ ತಿಂಗಳುಗಳ ಕಾಲ ಪುಸ್ತಕಗಳಿಗಾಗಿ ವಿದ್ಯಾರ್ಥಿಗಳು ಕಾಯಬೇಕಾಗುತ್ತಿದ್ದ ಪರಿಸ್ಥಿತಿ ಈ ಬಾರಿ ಬಹುತೇಕ ತಪ್ಪುವ ಸಾಧ್ಯತೆ ಇದೆ.
ಮುಂಡರಗಿ ತಾಲೂಕಿನಲ್ಲಿ 106 ಕಿರಿಯ ಹಿರಿಯ ಪ್ರಾಥಮಿಕ ಹಾಗೂ 40 ಪ್ರೌಢಶಾಲೆಗಳು ಸೇರಿ ಒಟ್ಟು 146 ಶಾಲೆಗಳಿವೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸಲಾಗುತ್ತಿದ್ದು, ಖಾಸಗಿ ಶಾಲೆಗಳಿಗೆ ಬೇಡಿಕೆಯ ಅನುಗುಣವಾಗಿ ಹಣ ಪಡೆದು ಪುಸ್ತಕಗಳನ್ನು ನೀಡಲಾಗುತ್ತದೆ.
ಹೆಚ್ಚುವರಿ ಕಾರ್ಯದ ಹೊರೆ: ಪ್ರತಿವರ್ಷವೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಪ್ರತಿ ಶಾಲೆಗಳಿಗೆ ಪುಸ್ತಕ ಪೂರೈಸಲಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಶಿಕ್ಷಣ ಇಲಾಖೆಯ ವ್ಯವಸ್ಥಾಪಕರ ಆದೇಶದಂತೆ ಆಯಾ ಮುಖ್ಯ ಶಿಕ್ಷಕರೇ ಗೋದಾಮುಗಳಿಗೆ ತೆರಳಿ ಪಠ್ಯಪುಸ್ತಕ ತೆಗೆದುಕೊಂಡು ಬರಬೇಕು. ಸಾಗಾಣಿಕಾ ವೆಚ್ಚವನ್ನು ಮುಖ್ಯಾಧ್ಯಾಪಕರ ಡಿಬಿಟಿ ಖಾತೆಗೆ ಜಮಾ ಮಾಡಲಾಗುವುದು ಎಂದು ಆದೇಶ ಮಾಡಲಾಗಿದೆ. ಇದರಿಂದಾಗಿ ಮುಖ್ಯಾಧ್ಯಾಪಕರು ಕಾರ್ಯವಾಗಿದೆ.
ವಿದ್ಯಾರ್ಥಿಗಳಿಗೆ ಪುಸ್ತಕಗಳು: ತಾಲೂಕಿನ ಒಟ್ಟು 26 ಸಾವಿರ ಸಂಭವನೀಯ ವಿದ್ಯಾರ್ಥಿಗಳಿದ್ದು, (ದಾಖಲಾತಿ ಪ್ರಗತಿಯಲ್ಲಿದೆ) ಬೇಡಿಕೆಗೆ ಅನುಗುಣವಾಗಿ ಪಠ್ಯಪುಸ್ತಕಗಳ ಅಗತ್ಯವಿದ್ದು, ಈ ವರೆಗೆ ಶೇ. 80ರಷ್ಟು ಪುಸ್ತಕಗಳು ತಲುಪಿವೆ. ಮೇ 29ರಂದು ಶಾಲೆಗಳು ಆರಂಭವಾಗುವ ವೇಳೆಗೆ ಶೇ. 100ರಷ್ಟು ಪೂರೈಕೆಯಾಗಲಿವೆ.
ಪೂರ್ಣಗೊಳಿಸಲು ಇಲಾಖೆ ಪಣ: ಸರಬರಾಜಾಗಿರುವ ಪುಸ್ತಕಗಳನ್ನು ಮುಂಡರಗಿಯ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯ ಕೊಠಡಿಯಲ್ಲಿ ದಾಸ್ತಾನು ಇಡಲಾಗಿದ್ದು, ವಿದ್ಯಾರ್ಥಿಗಳ ಹಿತಕ್ಕಾಗಿ ತಾಲೂಕು ಶಿಕ್ಷಣ ಸಂಯೋಜಕರು ಮನೋಹರ ಎಸ್. ಅವರು ವಿವಿಧ ಶಾಲೆಗಳ ಮುಖ್ಯ ಶಿಕ್ಷಕರಿಗೆ ಪುಸ್ತಕ ಹಸ್ತಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಶಾಲೆ ಆರಂಭವಾಗುವ ದಿನವೇ ಮಕ್ಕಳಿಗೆ ಪುಸ್ತಕ ವಿತರಿಸಲು ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿದೆ.
ಮುಂಡರಗಿ ತಾಲೂಕಿಗೆ ಶೇ. 70ರಷ್ಟು ಪಠ್ಯಪುಸ್ತಕಗಳು ತಾಲೂಕಿಗೆ ಬಂದಿವೆ. ಶಾಲಾರಂಭಕ್ಕೂ ಮುನ್ನ ಉಳಿದ ಪುಸ್ತಕಗಳೂ ತಲುಪಲಿದ್ದು, ಮೊದಲ ದಿನವೇ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುವುದು ಎಂದು ಕ್ಷೇತ್ರ ಶಿಕ್ಷಾಣಾಧಿಕಾರಿ ಗಂಗಾಧರ ಅಣ್ಣಿಗೇರಿ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.