ಹಾವೇರಿ: 2025- 26ನೇ ಶೈಕ್ಷಣಿಕ ವರ್ಷ ಗುರುವಾರದಿಂದ ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಶಾಲೆಗೆ ಬರಮಾಡಿಕೊಳ್ಳಲು ಎಲ್ಲ ತಯಾರಿ ನಡೆಸಲಾಗಿದೆ. ಶಾಲೆ ಪುನಾರಂಭದ ದಿನವೇ ಪಠ್ಯಪುಸ್ತಕ, ಸಮವಸ್ತ್ರ ವಿತರಣೆಗೂ ವ್ಯವಸ್ಥೆ ಮಾಡಲಾಗಿದೆ.
ಶಿಕ್ಷಕರು ಶಾಲಾ ಪ್ರಾರಂಭೋತ್ಸವಕ್ಕೆ ಬೇಕಾದ ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ. ಕಳೆದ 50 ದಿನಗಳಿಂದ ಶಾಲೆಗಳಿಗೆ ರಜೆ ಇದ್ದ ಕಾರಣ ಶಾಲಾ ಕೊಠಡಿ, ಆವರಣವನ್ನು ಸ್ವಚ್ಛಗೊಳಿಸಿ, ತಳಿರು- ತೋರಣಗಳಿಂದ ಸಿಂಗರಿಸಿ ಮಕ್ಕಳನ್ನು ಅದ್ಧೂರಿಯಾಗಿ ಶಾಲೆಗೆ ಬರಮಾಡಿಕೊಳ್ಳಲು ತಯಾರಿ ನಡೆಸಿದ್ದಾರೆ. ಮತ್ತೆ ಶಾಲೆಗಳಲ್ಲಿ ಮಕ್ಕಳ ಕಲರವ ಶುರುವಾಗಲಿದೆ.ವಿದ್ಯಾರ್ಥಿಗಳು ಶಾಲೆಗಳಿಗೆ ಮರಳುವ ಹಿನ್ನೆಲೆಯಲ್ಲಿ ಶಾಲಾ ಕಟ್ಟಡ, ಅಡಿಗೆ ಕೋಣೆ ಸ್ವಚ್ಛಗೊಳಿಸಿ ಸುಣ್ಣ- ಬಣ್ಣ ಬಳಿದು, ತಳಿರು ತೋರಣಗಳಿಂದ ಸಿಂಗರಿಸುವ ಕಾರ್ಯ ನಡೆದಿದೆ. ಆ ದಿನ ಶಾಲೆಗೆ ಬರುವ ಮಕ್ಕಳಿಗೆ ಸಿಹಿ ತಿನಿಸು ಹಾಗೂ ಗುಲಾಬಿ ಹೂವು ನೀಡುವ ಮೂಲಕ ಸಂಭ್ರಮದಿಂದ ಸ್ವಾಗತಿಸಲು ಸಿದ್ಧತೆ ನಡೆದಿದ್ದು, ಮೊದಲ ದಿನವೇ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ಈಗಾಗಲೇ ಬಹುತೇಕ ಶೈಕ್ಷಣಿಕ ವಲಯಗಳಲ್ಲಿ ಮಕ್ಕಳ ಪಠ್ಯಪುಸ್ತಕ, ಸಮವಸ್ತ್ರ ಪೂರೈಕೆ ಮಾಡಲಾಗಿದೆ. ಜತೆಗೆ ಪರಿಹಾರ ಬೋಧನಾ ತರಗತಿಗಳನ್ನು ಆರಂಭಿಸಲು ಶಿಕ್ಷಕರು ಸಕಲ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಜೂನ್ನಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ನಡೆಯಲಿದೆ. ಜತೆಗೆ ಪರಿಹಾರ ಬೋಧನೆಗೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲ ಖಾಸಗಿ ಶಾಲೆಗಳಲ್ಲಿ ತರಗತಿಗಳನ್ನು ಆರಂಭಿಸಿದ್ದು, ಕೆಲ ಶಾಲೆಗಳು ಶಾಲಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಜಿಲ್ಲೆಯಲ್ಲಿ ಒಟ್ಟು 1130 ಪ್ರಾಥಮಿಕ ಹಾಗೂ 154 ಪ್ರೌಢ ಶಾಲೆಗಳು ಸೇರಿದಂತೆ 1284 ಶಾಲೆಗಳಿದ್ದು, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಸುಮಾರು 1.75 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜೂನ್ನಲ್ಲಿ ಜಿಲ್ಲಾದ್ಯಂತ ಪರಿಹಾರ ಬೋಧನೆಯ ತರಗತಿಗಳು ನಡೆಯಲಿದ್ದು, ಹಿಂದಿನ ತರಗತಿಯ ವಿಷಯವನ್ನು ಮಕ್ಕಳಿಗೆ ಪುನರಾವರ್ತನೆಯನ್ನು ಶಿಕ್ಷಕರು ಮಾಡಲಿದ್ದಾರೆ. ನಂತರ ಆ ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಲಾಗುತ್ತದೆ. ಇದರ ಫಲಿತಾಂಶದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯದ ಬಗ್ಗೆ ತಿಳಿದು ಅದರನುಸಾರ ಮಕ್ಕಳ ಕಲಿಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಶೇ.70ರಷ್ಟು ಪಠ್ಯಪುಸ್ತಕ ಪೂರೈಕೆಜಿಲ್ಲೆಗೆ 2025- 26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ 1ರಿಂದ 10ನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ಒಟ್ಟು 33,81,354 ಪಠ್ಯ ಪುಸ್ತಕಗಳ ಬೇಡಿಕೆಯಿದ್ದು, ಈಗಾಗಲೇ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು 24,19,281 ಪಠ್ಯಪುಸ್ತಕಗಳನ್ನು ಸ್ವೀಕರಿಸಿದ್ದು, ಶೇ. 70ರಷ್ಟು ಪಠ್ಯಪುಸ್ತಕಗಳು ಪೂರೈಕೆ ಆಗಿವೆ. ಬ್ಯಾಡಗಿ ತಾಲೂಕಿಗೆ 1,16,238, ಹಾನಗಲ್ಲ 4,06,859, ಹಾವೇರಿ 4,79,219, ಹಿರೇಕೆರೂರು 2,91,568, ರಾಣಿಬೆನ್ನೂರು 4,64,857, ಸವಣೂರು 2,67,409, ಶಿಗ್ಗಾಂವಿ 2,93,131 ಪಠ್ಯಪುಸ್ತಕಗಳು ಪೂರೈಕೆಯಾಗಿವೆ.ಅಗತ್ಯ ಸಿದ್ಧತೆ: ಪ್ರಸಕ್ತ 2025- 26ನೇ ಶೈಕ್ಷಣಿಕ ಸಾಲಿನ ಶಾಲಾ ಪುನರಾರಂಭಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದ್ದು, ಮಕ್ಕಳನ್ನು ಸಂಭ್ರಮದಿಂದ ಶಾಲೆಗಳಿಗೆ ಸ್ವಾಗತಿಸಲಾಗುವುದು. ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಆವರಣ, ಕೊಠಡಿಗಳು, ಅಡುಗೆ ಕೋಣೆ, ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಜಿಲ್ಲೆಗೆ ಶೇ. 70ರಷ್ಟು ಪಠ್ಯಪುಸ್ತಗಳು ಪೂರೈಕೆಯಾಗಿದ್ದು, ಶಾಲಾ ಆರಂಭದ ದಿನವೇ ಮಕ್ಕಳಿಗೆ ಪಠ್ಯಪುಸಕ್ತ, ಸಮವಸ್ತ್ರ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಡಿಡಿಪಿಐ ಸುರೇಶ ಹುಗ್ಗಿ ತಿಳಿಸಿದರು.