ತಾಲೂಕಿನ ಎರಡು ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ. ೧೦೦ಕ್ಕಿಂತ ಕಡಿಮೆ ಬಂದಿದೆ ಎಂದು ಕಾರಣ ಒಡ್ಡಿ ಶಿಕ್ಷಣ ಇಲಾಖೆಯಿಂದ ಹೀಯಾಳಿಕೆಗೆ ಒಳಗಾದ ಪ್ರೌಢಶಾಲೆಯೇ ಮರುಮಾಪನದಲ್ಲಿ ಶೇ. ೧೦೦ ಫಲಿತಾಂಶ ದಾಖಲಿಸಿ ಹೆಮ್ಮೆಗೆ ಪಾತ್ರವಾಗಿದೆ.
ಮರುಮೌಲ್ಯಮಾಪನದ ಬಳಿಕ ಬಯಲಾದ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ
ಶಾಲೆಗಳ ಹೆಸರಿಗೆ ಕಪ್ಪುಚುಕ್ಕೆ ತಂದ ತಪ್ಪು ಫಲಿತಾಂಶ
ರಾಘು ಕಾಕರಮಠ
ಕನ್ನಡಪ್ರಭ ವಾರ್ತೆ ಅಂಕೋಲಾ
ತಾಲೂಕಿನ ಎರಡು ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ. ೧೦೦ಕ್ಕಿಂತ ಕಡಿಮೆ ಬಂದಿದೆ ಎಂದು ಕಾರಣ ಒಡ್ಡಿ ಶಿಕ್ಷಣ ಇಲಾಖೆಯಿಂದ ಹೀಯಾಳಿಕೆಗೆ ಒಳಗಾದ ಪ್ರೌಢಶಾಲೆಯೇ ಮರುಮಾಪನದಲ್ಲಿ ಶೇ. ೧೦೦ ಫಲಿತಾಂಶ ದಾಖಲಿಸಿ ಹೆಮ್ಮೆಗೆ ಪಾತ್ರವಾಗಿದೆ. ಆದರೆ ರಾಜ್ಯ ಶಿಕ್ಷಣ ಇಲಾಖೆಯ ಗಂಭೀರ ನಿರ್ಲಕ್ಷ್ಯ ಮತ್ತು ಮೌಲ್ಯಮಾಪನ ವ್ಯವಸ್ಥೆಯ ಗಂಭೀರ ಲೋಪಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಈಗ ಜಿಜ್ಞಾಸೆಗೆ ಕಾರಣವಾಗಿದೆ.
ತಾಲೂಕಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೯೭.೭೮ ಶೇ. ವಾರ್ಷಿಕ ಫಲಿತಾಂಶ ಬಂದಿತ್ತು. ಮರುಮಾಪನದಲ್ಲಿ ೯೮.೧೪ಕ್ಕೇರಿಕೆಯಾಗಿದೆ. ಅಂಕೋಲಾದ ಕಲ್ಲೇಶ್ವರದ ಸರಕಾರಿ ಪ್ರೌಢಶಾಲೆಗೆ ೯೫ ಶೇ. ಹಾಗೂ ಬೆಳಂಬಾರದ ಮಂಜುನಾಥ ಪ್ರೌಢಶಾಲೆಗೆ ೯೫.೫ ಶೇ. ಫಲಿತಾಂಶ ಬಂದಿತ್ತು. ಕಡಿಮೆ ಫಲಿತಾಂಶ ಬಂದ ಹಿನ್ನೆಲೆ ಕಾರಣ ಕೇಳಿ ನೊಟೀಸ್ ನೀಡಲು ಶಿಕ್ಷಣ ಇಲಾಖೆ ಮುಂದಾಗಿತ್ತು. ಈಗ ಮರುಮೌಲ್ಯಮಾಪನದಲ್ಲಿ ಶೇ. ೧೦೦ರಷ್ಟು ಫಲಿತಾಂಶ ಬಂದಿದ್ದರಿಂದ ಹೀಯಾಳಿಕೆ ಅಸ್ತ್ರ ಪ್ರಯೋಗಿಸಲು ಮುಂದಾದ ಇಲಾಖೆಯೇ ಪ್ರಶಂಸನಾ ಪತ್ರ ನೀಡಲು ಕಾರ್ಯಪ್ರವೃತ್ತರಾಗಿರುವುದು ಸೋಜಿಗವನ್ನು ಉಂಟು ಮಾಡಿದೆ.
ಈ ಬಾರಿಯ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯ ಶಿಕ್ಷಣ ಇಲಾಖೆಯ ಗಂಭೀರ ನಿರ್ಲಕ್ಷ್ಯ ಮತ್ತು ಮೌಲ್ಯಮಾಪನ ವ್ಯವಸ್ಥೆಯ ಲೋಪ ಬಯಲಾಗಿದ್ದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಮೊದಲ ಫಲಿತಾಂಶದಲ್ಲಿ ಅನುತ್ತೀರ್ಣರಾಗಿದ್ದ ಅಥವಾ ತೀರಾ ಕಡಿಮೆ ಅಂಕ ಪಡೆದಿದ್ದ ನೂರಾರು ವಿದ್ಯಾರ್ಥಿಗಳು ಮರುಮೌಲ್ಯಮಾಪನ ಬಳಿಕ ಉತ್ತೀರ್ಣರಾಗಿರುವ ಅಥವಾ ಹೆಚ್ಚು ಅಂಕ ಪಡೆದಿರುವುದು ಮೌಲ್ಯ ಮಾಪನದ ಗಂಭೀರತೆ ಬಗ್ಗೆ ಆತಂಕ ಪಡುವಂತಾಗಿದೆ.
ಅನುತ್ತೀರ್ಣರಾದ ಮತ್ತು ಕಡಿಮೆ ಅಂಕ ಬಂದು ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಹಾಕಿದಾಗ ಕೆಲ ವಿದ್ಯಾರ್ಥಿಗಳು ಪಾಸಾದರೆ, ಇನ್ನು ಕೆಲವು ವಿದ್ಯಾರ್ಥಿಗಳಿಗೆ ೨೫ರಿಂದ ೩೦ಕ್ಕೂ ಹೆಚ್ಚು ಅಂಕಗಳು ಹೆಚ್ಚಳವಾಗಿರುವುದು ಸಾಮಾನ್ಯ ತಪ್ಪಲ್ಲ. ಇದು ಮೌಲ್ಯಮಾಪನ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗಿದೆ. ಒಂದೆರಡು ಅಂಕಗಳ ವ್ಯತ್ಯಾಸ ಸಹಜ. ಆದರೆ ೩೦ ಅಂಕಗಳ ಹೆಚ್ಚಳ ಎಂದರೆ ಮೊದಲ ಮೌಲ್ಯಮಾಪನ ಎಷ್ಟು ನಿರ್ಲಕ್ಷ್ಯದಿಂದ ನಡೆದಿರಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.
ಸ್ಥಿತಿವಂತ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಹಾಕಬಹುದು. ಆದರೆ ಸರಕಾರಿ ಶಾಲೆಯಲ್ಲಿ ಓದುವ ಮತ್ತು ಬಡವರ ಮಕ್ಕಳಿಗೆ ಮರು ಮೌಲ್ಯಮಾಪನಕ್ಕೆ ಹಾಕಲು ಆರ್ಥಿಕವಾಗಿ ಸಾಧ್ಯವಾಗುವುದಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ದ್ರೋಹ ಬಗೆದಂತೆ.
ಪರೀಕ್ಷೆಯಲ್ಲಿ ಅನುತ್ತೀರ್ಣ ಎಂಬ ಸುದ್ದಿ ಕೇಳಿದ ಕ್ಷಣದಿಂದಲೇ ಅನೇಕ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗುತ್ತಾರೆ. ಕೆಲವರು ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ಸಮಾಜದ ಒತ್ತಡ, ಸಂಬಂಧಿಕರ ಪ್ರಶ್ನೆ, ಸ್ನೇಹಿತರ ನಡುವೆ ಆಗುವ ಅವಮಾನ ಇವೆಲ್ಲವು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಭಾರಿ ಪರಿಣಾಮ ಬೀರುತ್ತವೆ. ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ದುರಂತ ನಿರ್ಧಾರಕ್ಕೂ ಮುಂದಾಗುವ ಸಾಧ್ಯತೆ ಇದೆ.
ನಂತರ ಮರುಮೌಲ್ಯಮಾಪನದಲ್ಲಿ ಅವರು ಪಾಸ್ ಆಗಿದ್ದಾರೆ ಎಂಬುದು ಗೊತ್ತಾದರೂ, ಕಳೆದು ಹೋದ ಮಾನಸಿಕ ಶಾಂತಿ ಅಥವಾ ಜೀವ ಮರಳಿ ತರಲು ಸಾಧ್ಯವೇ?
ಮಗುವಿನ ಫಲಿತಾಂಶ ನೋಡಿ ಅನೇಕ ಪೋಷಕರು ನಮ್ಮ ಮಗು ಓದಿಲ್ಲವೇ? ಎಂಬ ಆತಂಕದಿಂದ ಸಮಾಜದ ಮುಂದೆ ತಲೆತಗ್ಗಿಸುವ ಪರಿಸ್ಥಿತಿ ಎದುರಾಗುತ್ತದೆ. ಇದಕ್ಕೂ ಮೀರಿ, ಇಲಾಖೆಯ ತಪ್ಪನ್ನು ಸರಿಪಡಿಸಿಕೊಳ್ಳಲು ಮತ್ತೆ ಮರುಮೌಲ್ಯಮಾಪನ ಶುಲ್ಕ, ಉತ್ತರ ಪತ್ರಿಕೆ ಜೆರಾಕ್ಸ್ ವೆಚ್ಚ ಸೇರಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತಿದೆ. ಬಡ ಕುಟುಂಬಗಳಿಗೆ ಇದು ಆರ್ಥಿಕ ಹೊರೆ ಮಾತ್ರವಲ್ಲ, ಅನ್ಯಾಯವೂ ಸಹ ಆಗಿದೆ.ಶಾಲೆಗಳಿಗೂ ಕಪ್ಪುಚುಕ್ಕೆ
ಶಾಲೆಗಳಿಗೂ ನೂರಕ್ಕೆ ನೂರು ಫಲಿತಾಂಶಕ್ಕಾಗಿ ವರ್ಷಪೂರ್ತಿ ಶ್ರಮಿಸುವ ಶಾಲೆಗಳಿಗೂ ಇಂತಹ ತಪ್ಪು ಮೌಲ್ಯಮಾಪನ ದೊಡ್ಡ ಹೊಡೆತ ನೀಡುತ್ತಿದೆ. ಆರಂಭಿಕ ಫಲಿತಾಂಶದಲ್ಲಿ ಶಾಲೆಯ ಫಲಿತಾಂಶ ಕುಸಿದಂತೆ ಕಾಣುವುದು, ದಾಖಲಾತಿ ಸಮಯದಲ್ಲಿ ಶಾಲೆಯ ಹೆಸರಿಗೆ ಕಪ್ಪುಚುಕ್ಕೆ ತರುವಂತಾಗಿದೆ. ವಿದ್ಯಾರ್ಥಿಗಳಿಗೆ ಕಷ್ಟಪಟ್ಟು ತರಬೇತಿ ನೀಡಿದ ಶಿಕ್ಷಕರ ಶ್ರಮವೂ ಇಲಾಖೆ ಮಟ್ಟದ ಬೇಜವಾಬ್ದಾರಿತನದಿಂದ ಮಸುಕಾಗುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.