ಇಂದಿನಿಂದ ಶಾಲೆ ಶುರು, ಜೂನ್‌ 1ಕ್ಕೆ ಶಾಲಾ ಪ್ರಾರಂಭೋತ್ಸವ

KannadaprabhaNewsNetwork |  
Published : May 29, 2026, 02:00 AM IST
ವಿದ್ಯಾರ್ಥಿಗಳು | Kannada Prabha

ಸಾರಾಂಶ

ಮಳೆಗಾಲದ ಹಿನ್ನೆಲೆಯಲ್ಲಿ ಶಾಲಾ ಕೊಠಡಿಗಳ ಸುರಕ್ಷತೆಗೆ ಆದ್ಯತೆ ನೀಡಲು ಶಿಕ್ಷಕರಿಗೆ ಸೂಚಿಸಿರುವ ಶಿಕ್ಷಣ ಇಲಾಖೆಯು, ಲಭ್ಯ ಇರುವ ಅನುದಾನ ಬಳಸಿಕೊಂಡು ಶಾಲಾ ಕೊಠಡಿಗಳ ದುರಸ್ತಿಗೆ ತಿಳಿಸಿದೆ.

ಧಾರವಾಡ:

ಅಂದಾಜು ಎರಡು ತಿಂಗಳ ಕಾಲ ಬೇಸಿಗೆ ರಜೆಯ ಮಜೆ ಮುಗಿಸಿದ ಶಾಲಾ ಮಕ್ಕಳು ಇದೀಗ ಮತ್ತೆ ಶಾಲೆಯ ಹೊಸ್ತಿಲು ತುಳಿಯಲು ಸಿದ್ಧರಾಗಿದ್ದಾರೆ.

ಶಿಕ್ಷಣ ಇಲಾಖೆಯು 2026-27ನೇ ಶೈಕ್ಷಣಿಕ ಸಾಲಿನ ಶಾಲೆಗಳನ್ನು ಶುರು ಮಾಡಲು ಆದೇಶಿಸಿದ್ದು, ಮೇ 29ರಂದು ಪೂರ್ವ ಸಿದ್ಧತೆ ಹಾಗೂ ಜೂ. 1ರಿಂದ ಶಾಲಾ ಪ್ರಾರಂಭೋತ್ಸವಕ್ಕೆ ಶಾಲೆಗಳು ಹಾಗೂ ಶಿಕ್ಷಕರು ಅಣಿಯಾಗಿದ್ದಾರೆ.

ಬಹಳ ದಿನಗಳ ಕಾಲ ಶಾಲೆಗಳ ಕೀಲಿ ಹಾಕಿದ ಪರಿಣಾಮ ಮೇ 29ರ ಶುಕ್ರವಾರ ಪೂರ್ವ ಸಿದ್ಧತೆಗೊಸ್ಕರ ನಿಗದಿ ಮಾಡಲಾಗಿದೆ. ಶುಕ್ರವಾರ ಶಾಲಾ ಆವರಣ, ಕೊಠಡಿ ಹಾಗೂ ಶೌಚಾಲಯಗಳ ಸ್ವಚ್ಛತೆ, ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛತೆ, ಅಡುಗೆ ಮನೆ, ಪಾತ್ರೆ ಸ್ವಚ್ಛಗೊಳಿಸುವುದು, ಶಾಲಾ ವೇಳಾಪಟ್ಟಿ ಸಿದ್ಧತೆ, ಎಸ್‌ಡಿಪಿ ಕ್ರಿಯಾಯೋಜನೆ, ಶಿಕ್ಷಕರಿಗೆ ವಿಷಯಗಳ ಹಂಚಿಕೆ ಸೇರಿದಂತೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರು ಇರುವಂತೆ ನೋಡಿಕೊಳ್ಳಲು ಇಲಾಖೆಯು ಆಯಾ ಶಾಲೆಯ ಮುಖ್ಯಶಿಕ್ಷಕರಿಗೆ ಸೂಚಿಸಿದೆ.

ಸೋಮವಾರ ಪ್ರಾರಂಭೋತ್ಸವ:

ಮೇ 29 ಹಾಗೂ 30ರಂದು ಶಾಲೆಯ ಮಕ್ಕಳನ್ನು ಕರೆಯಿಸುವುದಲ್ಲದೇ ಜೂ. 1ರಂದು ಉತ್ಸವದ ರೀತಿಯಲ್ಲಿ ಶಾಲೆಗಳನ್ನು ಪ್ರಾರಂಭಿಸಲು ಇಲಾಖೆ ಸೂಚಿಸಿದ್ದು, ಶಾಲೆಗೆ ತಳಿರು-ತೋರಣ ಕಟ್ಟಿ ಡೋಲು, ನಗಾರಿ ಮೂಲಕ ಮಕ್ಕಳನ್ನು ಕರೆ ತಂದು ಗುಬಾಬಿ ಹೂ ನೀಡಿ ಸ್ವಾಗತಿಸಲು ಶಾಲೆಗಳು ಕಾರ್ಯೋನ್ಮುಖವಾಗಿವೆ. ಬಿಸಿಯೂಟ ಸಿಹಿಯೊಂದಿಗೆ ಪ್ರಾರಂಭಿಸುವುದು, ಶಾಲಾ ಸಮವಸ್ತ್ರ, ಪುಸ್ತಕಗಳ ಹಂಚಿಕೆಯೂ ಅಂದೇ ಆಗಲಿದೆ ಎಂದು ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು.

ಮಳೆಗಾಲದ ಹಿನ್ನೆಲೆಯಲ್ಲಿ ಶಾಲಾ ಕೊಠಡಿಗಳ ಸುರಕ್ಷತೆಗೆ ಆದ್ಯತೆ ನೀಡಲು ಶಿಕ್ಷಕರಿಗೆ ಸೂಚಿಸಿರುವ ಶಿಕ್ಷಣ ಇಲಾಖೆಯು, ಲಭ್ಯ ಇರುವ ಅನುದಾನ ಬಳಸಿಕೊಂಡು ಶಾಲಾ ಕೊಠಡಿಗಳ ದುರಸ್ತಿಗೆ ತಿಳಿಸಿದೆ. ಯಾವುದೇ ಕಾರಣಕ್ಕೂ ಅಸುರಕ್ಷಿತ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸುವಂತಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ತೊಂದರೆ ಇದ್ದಲ್ಲಿ ದೂರು ನೀಡುವುದು ಸೇರಿದಂತೆ ಮಕ್ಕಳ ವಿಷಯದಲ್ಲಿ ಅಲಕ್ಷ್ಯ ತೋರಿದಲ್ಲಿ ಅನಾಹುತ ಸಂಭವಿಸಿದರೆ ಶಿಕ್ಷಕರನ್ನೇ ಹೊಣೆಗಾರಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಪತ್ರಿಕೆಗೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾಸೋಹಕ್ಕೆ ನೀಡಿದ ದಾನ ಎಂದಿಗೂ ವ್ಯರ್ಥವಾಗದು: ಚನ್ನವೀರ ಸ್ವಾಮಿಗಳು
ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ರಾಜಶ್ರೀ ಸಜ್ಜೇಶ್ವರ