ಮಕ್ಕಳಲ್ಲಿನ ವೈಜ್ಞಾನಿಕ ಬೆಳವಣಿಗೆಗೆ ಸೈನ್ಸ್ ಎಕ್ಸ್‌ಪೋ ಸಹಕಾರಿ: ಗಂಗಾಧರ್‌

KannadaprabhaNewsNetwork | Published : Jan 20, 2024 2:05 AM

ಸಾರಾಂಶ

ಮಕ್ಕಳಲ್ಲಿನ ವಿಜ್ಞಾನ ವಿಷಯಗಳ ಬೆಳವಣಿಗೆಗೆ ಹಾಗೂ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸೈನ್ಸ್ ಎಕ್ಸ್ ಪೋ ಹೆಚ್ಚು ಸಹಕಾರಿಯಾಗಲಿದೆ ಎಂದು ಟೈಮ್ಸ್ ಸಮೂಹ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಮಕ್ಕಳಲ್ಲಿನ ವಿಜ್ಞಾನ ವಿಷಯಗಳ ಬೆಳವಣಿಗೆಗೆ ಹಾಗೂ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸೈನ್ಸ್ ಎಕ್ಸ್ ಪೋ ಹೆಚ್ಚು ಸಹಕಾರಿಯಾಗಲಿದೆ ಎಂದು ಟೈಮ್ಸ್ ಸಮೂಹ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ತಿಳಿಸಿದರು.

ನಗರದ ಸ್ಟೆಲ್ಲಾ ಮೆರಿಸ್ ಶಾಲೆಯಲ್ಲಿ ಟೈಮ್ಸ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಸೈನ್ಸ್ ಎಕ್ಸ್‌ಪೋ-೨೦೨೪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನದ ಬೆಳವಣಿಗೆಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿ ವೈಜ್ಞಾನಿಕ ಮನೋಭಾವ ಹಾಗೂ ಅವರಲ್ಲಿ ಆಸಕ್ತಿ ಮೂಡಿಸುವ ಕೆಲಸವಾಗಬೇಕಿದೆ. ಶಿಕ್ಷಕರು ಕೇವಲ ಪಠ್ಯಕ್ಕೆ ಸೀಮಿತವಾಗದೆ ಇಂದಿನ ತಂತ್ರಜ್ಞಾನ, ಆವಿಷ್ಕಾರ, ವಿಜ್ಞಾನದ ಬೆಳವಣಿಗೆ, ಪ್ರಗತಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಮುಂದಿನ ಶಿಕ್ಷಣಕ್ಕೆ ಅನುಕೂಲವಾಗಲಿದ್ದು ಅವರ ಭವಿಷ್ಯವೂ ಸಹ ಸುಗಮವಾಗಲಿದ್ದು ವಿಜ್ಞಾನ, ತಂತ್ರಜ್ಞಾನ ಬೆಳವಣಿಗೆಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಟೈಮ್ಸ್ ಶಿಕ್ಷಣ ಸಂಸ್ಥೆಯು ಶಾಲೆಗಳಲ್ಲಿ ಸೈನ್ಸ್ ಎಕ್ಸ್‌ಪೋ ಕಾರ್ಯಕ್ರಮವನ್ನು ಆಯೋಜಿಸಿ ಮಕ್ಕಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅರಿವು ಮುಡಿಸುತ್ತಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಟೈಮ್ಸ್ ಕಾಲೇಜಿನ ಆಡಳಿತಾಧಿಕಾರಿ ಅನೂಪ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದ್ದು ಮಕ್ಕಳಲ್ಲಿ ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ಮೂಡಿಸಲು ಕಲಿಕೆಗೆ ಸಹಕಾರಿಯಾಗಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಟೈಮ್ಸ್ ಶಿಕ್ಷಣ ಸಂಸ್ಥೆಯು ಸತತವಾಗಿ ಮೂರು ವರ್ಷಗಳಿಂದ ಪ್ರೌಢಶಾಲೆಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚು ಅರಿವು ಮೂಡಿಸಲು ಪ್ರಯತ್ನ ಮಾಡುತ್ತಿದೆ ಎಂದರು.

ಪ್ರಾಂಶುಪಾಲ ಬಿ. ಪ್ರದೀಪ್ ಮಾತನಾಡಿ, ಮುಂದುವರೆಯುತ್ತಿರುವ ಜಗತ್ತಿನಲ್ಲಿ ತಂತ್ರಜ್ಞಾನದ ಅವಶ್ಯಕತೆ ಇದ್ದು ವಿದ್ಯಾರ್ಥಿಗಳು ಯಾವುದೇ ಒಂದು ವಿಷಯಕ್ಕೆ ಸೀಮಿತರಾಗದೆ ಪಠ್ಯ ಮತ್ತು ಪಠ್ಯೇತರವಾಗಿ ತಿಳಿದುಕೊಳ್ಳುವ ಅಗತ್ಯತೆ ಇದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಜಗತ್ತು ನಿಂತಿದ್ದು ವಿದ್ಯಾರ್ಥಿ ದಿಸೆಯಲ್ಲಿಯೇ ತಂತ್ರಜ್ಞಾನದ ಅರಿವು ಮೂಡಬೇಕು. ನೀವು ಸಹ ಶೈಕ್ಷಣಿಕ ಜೀವನದಲ್ಲಿ ಸಂಶೋಧನೆ, ಆವಿಷ್ಕಾರ ಮಾಡಬೇಕೆಂಬ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಪ್ರೌಢಶಾಲೆಯ ವಿಜ್ಞಾನ ಮಕ್ಕಳಿಗೆ ಈ ಕಾರ್ಯಕ್ರಮ ಆಯೋಜಿಸಿದ್ದು ಸದುಪಯೋಗಪಡಿಸಿಕೊಂಡು ಗುರಿಯೊಂದಿಗೆ ಮುನ್ನಡೆಯಬೇಕೆಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಪಾರ್ಥಸಾರಥಿ ಪ್ರಾತ್ಯಕ್ಷಿಕೆಗಳ ಮೂಲಕ ವಿಜ್ಞಾನದ ಬಗ್ಗೆ ಅರಿವು ಮೂಡಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ರೀಟಾ ಸೇರಿದಂತೆ ಇತರೆ ಶಿಕ್ಷಕರು ಮಕ್ಕಳು ಭಾಗವಹಿಸಿದ್ದರು.

Share this article