ಮೂಡುಬಿದಿರೆ: ವಿಜ್ಞಾನವೆಂಬುದು ನಿನ್ನೆ, ಇಂದಿನ ಮತ್ತು ನಾಳೆಯ ನಡುವೆ ಸೇತುವೆಯಾಗಿರುವ ಶಕ್ತಿ. ಪ್ರಕೃತಿಯ ಸೌಂದರ್ಯವನ್ನು ಅರಿತು ಅನುಭವಿಸುವುದೇ ವಿಜ್ಞಾನ. ಶ್ರಮ, ಸಮರ್ಪಣೆ ಮತ್ತು ಕ್ರಮಬದ್ಧ ಅಧ್ಯಯನದ ಮೂಲಕ ಯಾವುದೇ ವಿದ್ಯಾರ್ಥಿಯೂ ಉತ್ತಮ ವಿಜ್ಞಾನಿಯಾಗಬಹುದು ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಪರಿಷತ್ತಿನ ಬೆಂಗಳೂರಿನ ಶಾಖೆಯ ಗೌರವ ಕಾರ್ಯದರ್ಶಿ ಡಾ. ಎಸ್ . ಅನಂತ ಪದ್ಮನಾಭ ಭಟ್ ಅಭಿಪ್ರಾಯಪಟ್ಟರು.ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗಗಳು ಕುವೆಂಪು ಸಭಾಂಗಣದಲ್ಲಿ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿದರು.
ಪ್ರಾಚೀನ ಭಾರತದ ಮಹರ್ಷಿಗಳಾದ ಆರ್ಯಭಟ, ವರಹಮಿಹಿರ ಹಾಗೂ ಪತಂಜಲಿಯವರ ವಿಜ್ಞಾನ ಕ್ಷೇತ್ರದ ಕೊಡುಗೆ ಅಪಾರ. ಖಗೋಳಶಾಸ್ತ್ರ, ಗಣಿತ ಮತ್ತು ವಾಸ್ತುಶಿಲ್ಪದ ಸಮ್ಮಿಲನವನ್ನು ಕೊನಾರ್ಕದ ಸೂರ‍್ಯ ದೇವಸ್ಥಾನ, ಮೋಧೇರಾ ಸೂರ್ಯ ದೇವಾಲಯಗಳ ಸ್ಮಾರಕಗಳಲ್ಲಿ ಕಾಣಬಹುದು. ಇಂದಿಗೂ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ವಿಜ್ಞಾನಿಗಳ ಹಗಲಿರುಳಿನ ಪರಿಶ್ರಮದಿಂದ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದೆ ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಿಜವಾದ ರಾಷ್ಟ್ರೀಯತೆ ಕೇವಲ ಮಾತುಗಳಲ್ಲಿ ವ್ಯಕ್ತವಾಗುವುದಲ್ಲ. ಅದು ಸಂಶೋಧನೆ ಮತ್ತು ಆವಿಷ್ಕಾರಗಳ ಮೂಲಕ ರೂಪುಗೊಳ್ಳಬೇಕು. ದೇಶದ ಭವಿಷ್ಯವು ವಿಜ್ಞಾನದ ಬೆಳವಣಿಗೆಯನ್ನು ಅವಲಂಬಿಸಿದೆ. ಜ್ಞಾನವನ್ನು ಎಷ್ಟು ಆಳವಾಗಿ ಅನ್ವೇಷಿಸುತ್ತೇವೋ ಅಷ್ಟೇ ಹೊಸ ಸಾಧನೆಗಳು ಮತ್ತು ಅನ್ವೇಷಣೆಗಳು ಹೊರಹೊಮ್ಮುತ್ತವೆ ಎಂದು ಅಭಿಪ್ರಾಯಪಟ್ಟರು.ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ವಿಜ್ಞಾನವು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಿರದೆ ಜನಜೀವನದಲ್ಲಿ ಅನ್ವಯವಾಗಬೇಕು. ಶಿಕ್ಷಣವು ವೈಜ್ಞಾನಿಕ ಮನೋಭಾವ, ವಿಚಾರಶೀಲತೆ ಹಾಗೂ ಪ್ರಶ್ನಿಸುವ ಧೈರ್ಯವನ್ನು ಬೆಳೆಸುವಂತಿರಬೇಕು ಎಂದರು.
ಈ ಸಂದರ್ಭದಲ್ಲಿ ಸ್ನಾತಕೋತ್ತರ ವಿಜ್ಞಾನ ವಿಭಾಗಗಳಿಂದ ಆಯೋಜಿಸಲ್ಪಟ್ಟ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುಕೇಶ್, ವಿವಿಧ ವಿಭಾಗಗಳ ಉಪನ್ಯಾಸಕರು, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.