ರಾಣಿಬೆನ್ನೂರು: ವಿಜ್ಞಾನವು ಒಂದು ಆಲದ ಮರವಿದ್ದಂತೆ. ಅದರಿಂದ ಎಲ್ಲ ಸಮಾಜದ ಪ್ರಯೋಜನಕ್ಕೆ ಅವಕಾಶವನ್ನು ಕಲ್ಪಿಸಿದೆ ಎಂದು ಆರ್‌ಟಿಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಸ ಸಾವುಕಾರ ತಿಳಿಸಿದರು.ನಗರದ ಆರ್‌ಟಿಇಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸೀತಾ ಕೋಟಿ ಮಾತನಾಡಿ, ಇಂತಹ ವಿಜ್ಞಾನ ವೇದಿಕೆಗಳ ಮೂಲಕ ಕೈಗೊಳ್ಳುವ ಸ್ಪರ್ಧೆ ವಿದ್ಯಾರ್ಥಿಗಳ ಕೀಳರಿಮೆಯನ್ನು ಹೋಗಲಾಡಿಸುತ್ತದೆ ಎಂದರು. ಡಿಆರ್‌ಡಿಒ ವಿಜ್ಞಾನಿ ಡಾ. ಸಿದ್ದಪ್ಪ ಮಾತನಾಡಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಸಾಧನೆಯನ್ನು ಇಸ್ರೋ ಮಾಡಿದ್ದು, ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡರ್ ವಾಹನವನ್ನು ಕಳುಹಿಸಿ ಅಲ್ಲಿನ ಸ್ಥಿತಿಗತಿಯ ಅಧ್ಯಯನ ಕೈಗೊಂಡಿತು. ನಮ್ಮ ದೇಶದ ಹಲವಾರು ಯುವ ವಿಜ್ಞಾನಿಗಳಿಗೆ ಇಸ್ರೋ ಉತ್ತಮ ಅವಕಾಶ ಕಲ್ಪಿಸಿದೆ ಎಂದರು. ಪ್ರಾ. ಸಿ.ಎ. ಹರಿಹರ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಚರ್ಚಾ ಸ್ಪರ್ಧೆಯಲ್ಲಿ ವೈಷ್ಣವಿ ಪ್ರಥಮ(ಜಿಎಚ್ ಕಾಲೇಜು ಹಾವೇರಿ), ರಕ್ಷಿತಾ ಸೊಮಗೊಂಡರ ದ್ವಿತೀಯ(ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹಾನಗಲ್ಲ), ಅಮಿತ್ ಅರವಾರೆ ತೃತೀಯ(ಎಸ್‌ಡಿಎಂ ಕಾಲೇಜು ಹೊನ್ನಾವರ) ಸ್ಥಾನ ಗಳಿಸಿದರು. ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಪುರಸ್ಕಾರ ನೀಡಲಾಯಿತು.
ಹಿರೇಕೆರೂರು: ಹೂವಿಗೆ ಸುಗಂಧ ಹೇಗೆ ಮುಖ್ಯವೋ ಹಾಗೆ ವ್ಯಕ್ತಿಗೆ ವ್ಯಕ್ತಿತ್ವ ಮುಖ್ಯ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳವುದರ ಮೂಲಕ ಸಂಸಾರ, ಸಂಸ್ಥೆ, ಮತ್ತು ಸಮಾಜವನ್ನು ಯಶಸ್ವಿಯಾಗಿ ನಿರ್ವಹಿಸಬಹುದು ಎಂದು ಡಾ. ಪ್ರಶಾಂತ್ ಎನ್.ಎಸ್. ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ವ್ಯಕ್ತಿತ್ವ ವಿಕಸನ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೊ. ರಾಮಚಂದ್ರಪ್ಪ ಬಿ.ಎಂ. ವಹಿಸಿದ್ದರು. ಪ್ರೊ. ಪಿ.ಐ. ಶಿದ್ದನ ಗೌಡರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯುಎಸಿ ಸಂಚಾಲಕರಾದ ಪ್ರೊ. ಪ್ರಸನ್ನಕುಮಾರ್ ಜೆ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರೊ. ಗಂಗರಾಜು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಜೀವ ಗೋಡೇರ ನಿರೂಪಿಸಿದರು. ಡಾ. ಲಿಂಗರಾಜ ಪೂಜಾರ್ ಸ್ವಾಗತಿಸಿದರು. ಕು. ಹೊನ್ನಮ್ಮ ಟಿ. ವಂದಿಸಿದರು.