- ಹರಿಹರ ತಾ. ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಸ್ಕೂಲ್‌ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಕನ್ನಡಪ್ರಭ ವಾರ್ತೆ ಹರಿಹರ
ವಿಜ್ಞಾನ ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಲ್ಲ. ಇಂದಿನ ಈ ಜ್ಞಾನ ನಾಳಿನ ತಂತ್ರಜ್ಞಾನದ ಬೆಳವಣಿಗೆಗೆ ಪೂರಕವಾಗಬೇಕು ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಹೇಳಿದರು.ತಾಲೂಕಿನ ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ವಿಜ್ಞಾನವನ್ನು ಕೇವಲ ಪರೀಕ್ಷೆಗೆ ಮಾತ್ರ ಓದದೇ, ಪ್ರಶ್ನಿಸುವ ಮನೋಭಾವ ಮತ್ತು ಸಂಶೋಧನಾ ಚಿಂತನೆ ಬೆಳೆಸಿಕೊಳ್ಳಲು ಬಳಸಿಕೊಳ್ಳಬೇಕು. ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ. ಮಕ್ಕಳಲ್ಲಿ ಕುತೂಹಲ, ಪರಿಶ್ರಮ, ಸತ್ಯನಿಷ್ಠೆ ಹಾಗೂ ಪೋಷಕರನ್ನು ಗೌರವಿಸುವ ಮನೋಭಾವ ಇರಬೇಕು ಎಂದರು.
ಮುಖ್ಯ ಅತಿಥಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಲಿಂಗರಾಜ್ ಮಾತನಾಡಿ, ಇಂದು ನಾವು ಆಚರಿಸುತ್ತಿರುವ ವಿಜ್ಞಾನ ದಿನಾಚರಣೆ ಕೇವಲ ಒಂದು ದಿನಾಚರಣೆ ಅಲ್ಲ. ಭಾರತದ ಮಹಾನ್ ಭೌತಶಾಸ್ತ್ರಜ್ಞ, ಜಗತ್ ಪ್ರಸಿದ್ಧ ಸರ್ ಸಿ.ವಿ.ರಾಮನ್ ಅವರು ಫೆ.28ರಂದು ಅವರ ರಾಮನ್ ಪರಿಣಾಮ ಕಂಡುಹಿಡಿದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸಲಾಗುತ್ತದೆ. ಇದು ಅವರ ಜ್ಞಾನಕ್ಕೆ, ಸಂಶೋಧನೆಗೆ ಹಾಗೂ ಚಿಂತನೆಗೆ ನೀಡುವ ಗೌರವವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಡಿಎಆರ್ ಪೊಲೀಸ್ ಉಪಾಧೀಕ್ಷ ಪ್ರಕಾಶ್ ಪಿ.ಬಿ., ಪ್ರಾಂಶುಪಾಲೆ ಚಂಪಾ ಸತೀಶ್, ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.
-01HRR.01 & 01 A: