ಎಸ್‌ಸಿ, ಎಸ್‌ಟಿಗೆ ವರ್ಗಕ್ಕೆ ಸರ್ಕಾರ ಘೋರ ಅನ್ಯಾಯ

KannadaprabhaNewsNetwork |  
Published : Mar 04, 2026, 02:00 AM IST
ಚಿತ್ರ 2 | Kannada Prabha

ಸಾರಾಂಶ

ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಂತ್ರಿಮಂಡಲದ ಸಭೆಯಲ್ಲಿ ಕರ್ನಾಟಕ ಸರ್ಕಾರ 56,432 ಹುದ್ದೆಗಳ ಭರ್ತಿಗೆ ಮುಂದಿನ 30ದಿನಗಳಲ್ಲಿ ಪ್ರಕ್ರಿಯೆ ಆರಂಭಿಸುವುದಾಗಿ ಪ್ರಕಟಿಸಿದೆ. ಆದರೆ ಈ ಪ್ರಕ್ರಿಯೆಯನ್ನು ಶೇ.56ರ ಮೀಸಲಾತಿಯನ್ನು ಹೊರಗಿಟ್ಟು ಮಾಡುತ್ತಿರುವುದು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ. ಸರ್ಕಾರ ಈ ಹಿಂದಿನ ಮಾದರಿಯಲ್ಲಿಯೇ ನೇಮಕಾತಿಯನ್ನು ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಎಚ್ಚರಿಕೆಯನ್ನು ನೀಡಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಒಳ ಮೀಸಲಾತಿಗಾಗಿ ಮಸೂದೆ ಮಂಡಿಸಿ ರಾಜ್ಯಪಾಲರ ಅನುಮೋದನೆ ಪಡೆಯುವಾಗಲೂ ಶೇ.56ರ ಮೀಸಲಾತಿಯೇ ಇತ್ತು. ಈಗ ಏಕಾಏಕಿ ಶೇ.56ರ ಮೀಸಲಾತಿಯನ್ನು ಶೇ.50ಕ್ಕೆ ಇಳಿಸುವಾಗ ಇಡೀ ಪರಿಶಿಷ್ಟ ವರ್ಗದ ನಾಯಕರನ್ನು, ಹೋರಾಟಗಾರರನ್ನು ಕತ್ತಲಲ್ಲಿ ಇರಿಸಲಾಗಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ಸಿದ್ಧರಾಮಯ್ಯನವರ ಸರ್ಕಾರ ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರಿಂದ ಹಿಡಿದು ಅನೇಕ ಇಲಾಖೆಗಳ ಉದ್ಯೋಗಿಗಳಿಗೆ ತಿಂಗಳ ಸಂಬಳ ಕೊಡಲಾಗದೆ ಪರದಾಡುತ್ತಿದೆ. ಸಾರಿಗೆ, ಆರೋಗ್ಯ ಇಲಾಖೆಯ ನೌಕರರಿಗೆ ಪಾವತಿಸಬೇಕಾದ ಬಾಬತ್ತಿನಲ್ಲಿ ನೂರಾರು ಕೋಟಿ ರು. ಬಾಕಿ ಉಳಿಸಿಕೊಂಡಿದೆ. ತನ್ನ ದಿವಾಳಿಯಾದ ಖಜಾನೆಯನ್ನು ಮುಚ್ಚಿಕೊಳ್ಳಲು ಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸಿ ವಿದ್ಯಾರ್ಥಿಗಳ ಯುವಜನರ ಕನಸು, ನಿರೀಕ್ಷೆಗಳಿಗೆ ಮಣ್ಣು ಸುರಿಯುತ್ತಿದೆ ಎಂದರು.

ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, 2022ರಿಂದ ಕರ್ನಾಟಕದಲ್ಲಿ ಎಸ್.ಸಿ. 17% ಮತ್ತು ಎಸ್.ಟಿ. 7% ಮೀಸಲಾತಿ ಜಾರಿಯಲ್ಲಿದೆ. ಸತತ ಮೂರು ವರ್ಷ ಸಿಇಟಿ, ನೀಟ್ ಪರೀಕ್ಷೆಗಳೂ ಸೇರಿದಂತೆ ಸಾವಿರಾರು ನೇಮಕಾತಿಗಳು ಶೇ.56ರ ಮೀಸಲಾತಿ ಪ್ರಮಾಣದಲ್ಲಿ ಸುಗಮವಾಗಿ ನಡೆದಿದೆ. ಆದರೆ ಈಗ ಸರ್ಕಾರ ಮೀಸಲಾತಿಯನ್ನು ಶೇ.50ಕ್ಕೆ ಇಳಿಸಿ ಸಾವಿರಾರು ಜನರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ.2025ರ ಅಕ್ಟೋಬರ್ ನಲ್ಲಿ ಹೈಕೋರ್ಟ್ ಶೇ.56ರ ಮೀಸಲಾತಿಗೆ ಮಧ್ಯಂತರ ತಡೆ ನೀಡಿರುವುದು ನಿಜ. ಆದರೆ ಸರ್ಕಾರ ನ್ಯಾಯಾಲಯದಲ್ಲಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಮತ್ತು ಪೂರಕ ದಾಖಲೆಗಳನ್ನು ಸಲ್ಲಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಜಾರ್ಖಂಡ್ ಮತ್ತು ಛತ್ತೀಸ್‍ಗಢ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಶೇ.50 ದಾಟಿದ್ದರೂ ಅಲ್ಲಿನ ಸರ್ಕಾರಗಳು ಅದನ್ನು ಊರ್ಜಿತಗೊಳಿಸಿವೆ. ಇಲ್ಲಿನ ಸರ್ಕಾರಕ್ಕೆ ಅಂತಹ ಬದ್ಧತೆ ಇಲ್ಲದಂತಾಗಿದೆ. ಬಸವರಾಜ ಬೊಮ್ಮಾಯಿ ಸರ್ಕಾರ ವಾಲ್ಮೀಕಿ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ಶೇ.3 ರಿಂದ 7ಕ್ಕೆ ಹೆಚ್ಚಿಸಿತು. ಬೇರೆ ಬೇರೆ ರಾಜ್ಯಗಳಲ್ಲಿ ಶೇ.50ರ ಗಡಿದಾಟಿದೆ. ಆದರೆ ಇಲ್ಲಿನ ನ್ಯಾಯಾಲಯದಲ್ಲಿ ಸರಿಯಾಗಿ ದಾಖಲಾತಿ ಸಲ್ಲಿಸದೆ ಪರಿಶಿಷ್ಟ ಜಾತಿಗಳಿಗೆ ಮೋಸ ಮಾಡಲು ಮುಂದಾಗಿದ್ದಾರೆ ಎಂದರು. ಎಸ್.ಟಿ.ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಮಾಜಿ ಸದಸ್ಯ ಪಾಪೇಶ ನಾಯಕ ಮಾತನಾಡಿ, ರಾಜನಹಳ್ಳಿ ವಾಲ್ಮೀಕಿ ಶ್ರೀಗಳು ಮೀಸಲಾತಿಗಾಗಿ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ 250 ದಿನ ಸತ್ಯಾಗ್ರಹ ನಡೆಸಿದ್ದಾರೆ. ಈ ವೇಳೆ ಅಂದಿನ ಬಿಜೆಪಿ ನೇತೃತ್ವದ ಸರ್ಕಾರ ಜೇನುಗೂಡಿಗೆ ಕೈ ಹಾಕಿ ಮೀಸಲಾತಿ ಜಾರಿ ಮಾಡಿದೆ. ಈಗ ಮೀಸಲಾತಿಯಲ್ಲಿ ಅನ್ಯಾಯ ಮಾಡಿ ಹುದ್ದೆ ಭರ್ತಿ ಮಾಡಿದರೆ ಎಸ್‌ಟಿ ಸಮುದಾಯಕ್ಕೆ ಅನ್ಯಾಯ ಆಗಲಿದೆ. ಇದರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು. ತನ್ನ ಆರ್ಥಿಕ ವೈಫಲ್ಯವನ್ನು ಮುಚ್ಚಿಕೊಳ್ಳಲು ಸರ್ಕಾರ ಮೀಸಲಾತಿ ಗೊಂದಲ ಸೃಷ್ಟಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಸುಗಮವಾಗಿ ನಡೆಯುತ್ತಿದ್ದ ಶೇ.56ರ ಮೀಸಲಾತಿಯನ್ನು ಏಕಾಏಕಿ ಬದಲಿಸುವ ಮೂಲಕ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಸರ್ಕಾರ ಅಹಂಕಾರ ಬಿಟ್ಟು ತಕ್ಷಣವೇ ಸರ್ವಪಕ್ಷಗಳ ಪ್ರಮುಖರು, ಕಾನೂನು ತಜ್ಞರು ಮತ್ತು ಹೋರಾಟಗಾರರ ಸಭೆ ಕರೆದು ಚರ್ಚಿಸಬೇಕು. ರಾಜ್ಯಪಾಲರು ಕೇಳಿದ ಪ್ರಶ್ನೆಗಳಿಗೆ ಮತ್ತು ಮಸೂದೆಯ ಆಶಯಕ್ಕೆ ವಿರುದ್ಧವಾಗಿ ಸಂಪುಟ ನಿರ್ಧಾರ ಕೈಗೊಳ್ಳುವುದನ್ನು ನಿಲ್ಲಿಸಬೇಕು ಎಂದರು.

ಚಿತ್ರದುರ್ಗ ಎಸ್‌ಟಿ ಮೋರ್ಚಾದ ಅಧ್ಯಕ್ಷ ರಾಜು ಮಾತನಾಡಿ, ಈಗ ಸರ್ಕಾರ ಭರ್ತಿ ಮಾಡಲು ಹೊರಟಿರುವ 53 ಸಾವಿರ ರು. ನೇಮಕಾತಿಯಲ್ಲಿ ಸರ್ಕಾರದ ಬೇಜವಾಬ್ದಾರಿ ನಡೆಯಿಂದ ನಾಲ್ಕು ಸಾವಿರಕ್ಕೂ ಮಿಕ್ಕ ಯುವಜನರಿಗೆ ಅನ್ಯಾಯವಾಗಲಿದೆ. ರಾಜ್ಯಪಾಲರು ಕೇಳಿದ ಪ್ರಶ್ನೆಗಳಿಗೆ ಸರ್ಕಾರ ಸರಿಯಾದ ಸ್ಪಷ್ಟನೆ ಕೊಡಲಿಲ್ಲ. ಈಗ ರಾಜ್ಯಪಾಲರು ಸಹಿ ಹಾಕಿದ ಮಸೂದೆಯ ಆಶಯಕ್ಕೂ, ಸಚಿವ ಸಂಪುಟದ ನಿರ್ಧಾರಕ್ಕೂ ಯಾವುದೇ ಸಂಬಂಧ ಇಲ್ಲದಂತೆ ಆಗಿದೆ ಸರ್ಕಾರ ತನ್ನ ಅಹಂಕಾರ ಪ್ರದರ್ಶಿಸುವುದನ್ನು ನಿಲ್ಲಿಸಲಿ, ಸರ್ವಪಕ್ಷಗಳ ಪ್ರಮುಖರ ಸಭೆ ಕರೆದು ಚರ್ಚಿಸಲಿ. ಹೋರಾಟಗಾರರ, ಕಾನೂನು ತಜ್ಞರ ಸಭೆ ಕರೆದು ಚರ್ಚಿಸಲಿ ಎಂದು ಸರ್ಕಾರವನ್ನು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಾಳೆಕಾಯಿ ರಾಮದಾಸ್, ಜಿಪಂ ಮಾಜಿ ಸದಸ್ಯೆ ರಾಜೇಶ್ವರಿ, ಜಿಲ್ಲಾ ಕಾರ್ಯದರ್ಶಿ ಪಾಲಯ್ಯ, ವಕ್ತಾರ ನಾಗರಾಜ್ ಬೇದ್ರೆ ಗ್ರಾಮಾಂತರ ಎಸ್.ಟಿ. ಅಧ್ಯಕ್ಷ ಬಾಬು ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜ್ಞಾನ ಮಾನವನ ಏಳಿಗೆಯ ರಹದಾರಿ: ಎಸ್‌ಪಿ ಶೇಖರ್
ಕೋಲಾರ ಜಿಲ್ಲೆಗೆ ಕೃಷ್ಣಾನದಿ ನೀರು ಕೊಡಿ: ರೈತ ಸಂಘ