ಕನ್ನಡಪ್ರಭ ವಾರ್ತೆ ಐಗಳಿ
ಭಾರತೀಯ ಸಂಸ್ಕೃತಿಯಲ್ಲಿ ಆಚರಿಸುವ ಎಲ್ಲ ಸಂಪ್ರದಾಯಗಳಿಗೂ ಅದರದ್ದೇ ಆದ ವೈಜ್ಞಾನಿಕ ಹಿನ್ನೆಲೆ ಇದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.ಸಮೀಪದ ಕೋಹಳ್ಳಿ ಗ್ರಾಮದ ಕೆಎಎಸ್ ಅಧಿಕಾರಿ ಮಲಗೌಡ ಝರೆ ಅವರ ಪತ್ನಿ ರಕ್ಷಾ ಅವರ ಸೀಮಂತ ಕಾರ್ಯಕ್ರಮದ ನಂತರ ನಡೆದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈಜ್ಞಾನಿಕ ಮೂಲಭೂತ ಕಾರಣಗಳನ್ನು ಅರಿಯದೇ ಕೆಲವರು ಅವುಗಳನ್ನು ಮೂಢನಂಬಿಕೆ ಎಂದು ಜರಿಯುತ್ತಾರೆ. ಆದರೆ, ವಾಸ್ತವವಾಗಿ ಅವು ಮೂಢನಂಬಿಕೆಗಳಲ್ಲ, ಬದಲಿಗೆ ಶತಮಾನಗಳಿಂದ ನಮ್ಮ ಪೂರ್ವಜರು ರೂಪಿಸಿದ ಆಳವಾದ ನಂಬಿಕೆಗಳು ಎಂದರು.ಭಾರತ ಸಂಸ್ಕಾರ ಪ್ರಧಾನವಾದ ದೇಶ. ಇಲ್ಲಿ ಯಾವುದನ್ನೇ ಶುರು ಮಾಡಿದರೂ ಅದನ್ನು ಸಂಸ್ಕಾರದ ಮೂಲಕವೇ ಪ್ರಾರಂಭಿಸುವುದು ನಮ್ಮ ಸಂಪ್ರದಾಯ. ಈ ಗುಣ ಜಗತ್ತಿನ ಬೇರೆ ಯಾವ ದೇಶದಲ್ಲೂ ಕಾಣಸಿಗುವುದು ಅಪರೂಪ. ಸಂಸ್ಕಾರಗಳು ನಮ್ಮೆಲ್ಲರಿಗೂ ಇನ್ನೊಬ್ಬರೊಂದಿಗೆ ಪ್ರೀತಿಯಿಂದ, ಗೌರವದಿಂದ ಬದುಕುವುದನ್ನು ಕಲಿಸಿಕೊಡುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ಯಾವುದಾದರೊಂದು ಸಂಸ್ಕಾರದ ಮಹತ್ವ ಅರಿತುಕೊಂಡು, ಮೌಲ್ಯಯುತ ಜೀವನ ನಡೆಸಬೇಕೆಂಬುವುದು ನಮ್ಮ ನಂಬಿಕೆ. ಇದು ಭಾರತಿಯ ಸಂಸ್ಕೃತಿಯ ವೈಶಿಷ್ಟ್ಯ. ಬೇರೆ ದೇಶಗಳಲ್ಲಿ ಮಗು ಹುಟ್ಟಿದ ನಂತರ ಸಂಸ್ಕಾರಗಳನ್ನು ಕಲಿಸಿದರೇ ಭಾರತೀಯ ಸಂಸ್ಕೃತಿಯಲ್ಲಿ ಮಗು ಗರ್ಭದಲ್ಲಿರುವಾಗಲೇ ಸಂಸ್ಕಾರಗಳನ್ನು ನೀಡಲಾಗುತ್ತದೆ. ಗರ್ಭದಲ್ಲಿರುವ ಶಿಶುವಿನ ಮೇಲೆ ತಾಯಿಯ ಮನಸ್ಸಿನ ಸ್ಥಿತಿಯ ಪ್ರಭಾವ ಬೀರುತ್ತದೆ ಎಂಬುವುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದರು.
ತಾಯಿ ಏನನ್ನು ನೋಡುತ್ತಾಳೆ, ಕೇಳುತ್ತಾಳೆ, ಅನುಭವಿಸುತ್ತಾಳೆ ಅದು ಮಗುವಿನ ಬೆಳವಣಿಗೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಾಗಾಗಿ ಗರ್ಭಿಣಿ ತಾಯಂದಿಯರಿಗೆ ಉತ್ತಮ ವಿಚಾರಗಳನ್ನು ಕೇಳಿಸುವುದು, ಸಕಾರಾತ್ಮಕ ವಾತಾವರಣದಲ್ಲಿ ಇರಿಸುವುದು ನಮ್ಮ ಸಂಪ್ರದಾಯ. ಸೀಮಂತ ಕಾರ್ಯವೂ ಸಹ ಇಂತಹ ಒಂದು ವಿಶಿಷ್ಟ ಸಂಸ್ಕಾರ. ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಸಂಪ್ರದಾಯದ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಈ ಸಂದರ್ಭದಲ್ಲಿ ಗರ್ಭಿಣಿ ತಾಯಿಗೆ ಪುಣ್ಯ ಪುರುಷರ ದರ್ಶನ ಮಾಡಿಸುವುದು, ಅವರ ಕಥೆಗಳನ್ನು ಕೇಳಿಸುವುದು, ಮಗುವಿಗೆ ಉತ್ತಮ ಸಂಸ್ಕಾರಗಳನ್ನು ನೀಡುವ ಉದ್ದೇಶದಿಂದಲೇ ವೀರಶೈವ ಧರ್ಮದಲ್ಲಿ, ಗರ್ಭಿಣಿಯ 8ನೇ ತಿಂಗಳಲ್ಲಿ ಗರ್ಭಕ್ಕೆ ಲಿಂಗಧಾರಣೆ ಮಾಡುವ ಸಂಪ್ರದಾಯವಿದೆ. ಇದು ಕೇವಲ ಧಾರ್ಮಿಕ ಆಚರಣೆಯಲ್ಲ, ಬದಲಿಗೆ ಹುಟ್ಟುವ ಮಗುವಿಗೆ ಆಧ್ಯಾತ್ಮಿಕ ಶಕ್ತಿಯನ್ನು ತುಂಬುವ ಒಂದು ಪ್ರಕ್ರಿಯೆ. ಹಾಗಾಗಿ, ಗರ್ಭಾವಸ್ಥೆಯಲ್ಲಿ ತಾಯಿ ಸದಾ ಒಳ್ಳೆಯದನ್ನೇ ನೋಡಬೇಕು, ಕೇಳಬೇಕು, ಯೋಚಿಸಬೇಕು. ಆಗಲೇ ನಾಳೆ ಹುಟ್ಟುವ ಮಗು ಈ ದೇಶದ ಸತ್ಪ್ರಜೆ ಆಗಿ ಬೆಳೆಯುತ್ತದೆ. ನಮ್ಮ ಭಕ್ತಿ ಮತ್ತು ಅಚಲವಾದ ನಂಬಿಕೆಗಳೇ ಸಕಾರಾತ್ಮಕ ಶಕ್ತಿಯನ್ನು ನಿರ್ಮಿಸುತ್ತವೆ. ನಮ್ಮ ದೇಶದ ಸಂಸ್ಕೃತಿಯ ಮೂಲ ತತ್ವಗಳನ್ನು ಅರ್ಥ ಮಾಡಿಕೊಂಡು ಅವುಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮೆಲ್ಲರ ಕರ್ತವ್ಯ ಎಂದರು.ವಿಜಯಪುರದ ಶಂಕರಾನಂದ ಸ್ವಾಮೀಜಿ ಅವರು ಲಿಂ.ಸಿದ್ದೇಶ್ವರ ಮಹಾಸ್ವಾಮಿಗಳ ಸ್ವರಚಿತ ಭಕ್ತಿಗೀತೆಗಳನ್ನು ಹಾಡಿ ಜನ-ಮನ ಸೆಳೆದರು. ಕೆಎಎಸ್ ಅಧಿಕಾರಿ ಮಲಗೌಡ ಝರೆ ಪ್ರಾಸ್ತಾವಿಕ ಮಾತನಾಡಿದರು. ಕಕಮರಿಯ ಆತ್ಮಾರಾಮ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಬಾಸ್ಕರ ಸ್ವಾಮಿಜಿ, ಗುರುಸಿದ್ದೇಶ ಸ್ವಾಮೀಜಿ, ಮಾಜಿ ಶಾಸಕ ಶಹಜಾನ ಡೊಂಗರಗಾಂವ್, ಡಾ.ಎಸ್.ಎಂ.ಜೋಶಿ, ಸಿದ್ಧರಾಮೇಶ್ವರ ಉಕ್ಕಲಿ, ಎಸ್.ಕೆ.ಬುಟಾಳೆ, ನೂರಅಹ್ಮದ್ ಡೊಂಗರಗಾಂವ, ಸಿ.ಎಸ್.ನೇಮಗೌಡ, ಬಸವಲಿಂಗ ಹಿರೇಮಠ, ಅಪ್ಪಾಸಾಬ ನಾಮದ, ನಿಂಗನಗೌಡ ಪಾಟೀಲ ಎಂ.ಕೆ.ಐಗಳಿ, ಅಲ್ಲದೇ ಕೋಹಳ್ಳಿ ಗ್ರಾಮದ ಹಿರಿಯರು ಗ್ರಾಪಂ ಸದಸ್ಯರು ಸೇರಿದಂತೆ ಇತರರು ಇದ್ದರು. ಮಲ್ಲಪ್ಪ ಸಿಂಧೂರ ಸ್ವಾಗತಿಸಿದರು. ರಾಶ್ರೀ ಝರೆ ವಂದಿಸಿದರು.