ಕಡಿಮೆ ಶ್ರಮ, ಅಧಿಕ ಇಳುವರಿ ಪಡೆಯಲು ವೈಜ್ಞಾನಿಕ ಕೃಷಿ ಪದ್ಧತಿ ಪೂರಕ: ಬಿ.ಪುಂಡಲೀಕ ಮರಾಠೆ

KannadaprabhaNewsNetwork |  
Published : Aug 20, 2026, 02:30 AM IST
19ಕೃಷಿ | Kannada Prabha

ಸಾರಾಂಶ

ನಮ್ಮ ಹಿರಿಯರು ಕಠಿಣ ಶ್ರಮಿಕವಾಗಿದ್ದು, ಕೃಷಿಯೇ ಜೀವನಾಧಾರವಾಗಿತ್ತು. ವಿವಿಧ ಕಾರಣಗಳಿಂದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿರಲಿಲ್ಲ ಎಂದು ನಿವೃತ್ತ ಶಿಕ್ಷಕ, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂ

ಕಾಪು: ನಮ್ಮ ಹಿರಿಯರು ಕಠಿಣ ಶ್ರಮಿಕವಾಗಿದ್ದು, ಕೃಷಿಯೇ ಜೀವನಾಧಾರವಾಗಿತ್ತು. ವಿವಿಧ ಕಾರಣಗಳಿಂದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿರಲಿಲ್ಲ. ಈಗ ಆಧುನಿಕ ಕಾಲಘಟ್ಟದಲ್ಲಿ ಯಂತ್ರೋಪಕರಣಗಳ ಬಳಕೆ, ವಿವಿಧ ರಸಗೊಬ್ಬರಗಳು, ಕೃಷಿ ಇಲಾಖೆಯಿಂದ ಉಚಿತವಾಗಿ ಸಕಾಲಿಕ ಮಾಹಿತಿ ಹಾಗೂ ಪ್ರೋತ್ಸಾಹ ಸಿಗುತ್ತಿದ್ದು, ಕಡಿಮೆ ಶ್ರಮ, ಅಧಿಕ ಇಳುವರಿ ಪಡೆಯಲು ವೈಜ್ಞಾನಿಕ ಕೃಷಿ ಪದ್ಧತಿ ಪೂರಕವಾಗಿದೆ ಎಂದು ನಿವೃತ್ತ ಶಿಕ್ಷಕ, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ನುಡಿದರು. ಅವರು ಬುಧವಾರ ಪಂಜಿಮಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಂಗಣದಲ್ಲಿ ಉಡುಪಿ ಜಿಪಂ, ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ಕಾಪು, ವಳದೂರು ವೆಲ್ಫೇರ್ ಅಸೋಸಿಯೇಶನ್ಸ್ ಸಹಭಾಗಿತ್ವದಲ್ಲಿ ಜರುಗಿದ ಮಲ್ಲಿಗೆ ಕೃಷಿ, ಅಡಿಕೆ ಹಾಗೂ ಭತ್ತದ ಕೃಷಿ ಕುರಿತ ಮಾಹಿತಿ ಕಾಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಬ್ರಹ್ಮಾವರ ಕೆವಿಕೆಯ ಹಿರಿಯ ವಿಜ್ಞಾನಿ ಭೂಮಿಕಾ ಎಚ್.ಆರ್, ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ ನೀಡುತ್ತಾ, ಕರಾವಳಿ ಭಾಗದಲ್ಲಿ ಶಂಕರಪುರ ಮಲ್ಲಿಗೆ, ಮಂಗಳೂರು, ಕುಂದಾಪುರ, ಭಟ್ಕಳ ಮಲ್ಲಿಗೆ ಪ್ರಸಿದ್ಧವಾಗಿದ್ದು, ಸ್ಥಳದಿಂದ ಸ್ಥಳಕ್ಕೆ ಅದರ ಪರಿಮಳ, ಇಳುವರಿಯಲ್ಲಿ ವೈವಿಧ್ಯತೆಗಳಿವೆ. ಪರಿಸರಕ್ಕೆ ಹೊಂದಿಕೊಂಡು ಅಯಾ ಪ್ರದೇಶಕ್ಕೆ ಅನುಗುಣವಾಗಿ ವೈಜ್ಞಾನಿಕ ಕ್ರಮದಲ್ಲಿ ಕೃಷಿ ಪದ್ದತಿ, ಗೊಬ್ಬರದ ಬಳಕೆ, ನಿರ್ವಹಣೆ, ರೋಗಾಣುಗಳ ನಿಯಂತ್ರಣ, ಮಳೆ, ಬೇಸಿಗೆ, ಚಳಿಗಾಲದಲ್ಲಿ ಕೃಷಿಕರು ಗಮನಿಸಬೇಕಾದ ಅಂಶಗಳ ಬಗ್ಗೆ ಮಾಹಿತಿ ನೀಡಿ ಕೃಷಿಕರೊಂದಿಗೆ ಸಂವಾದ ನಡೆಸಿದರು. ಪ್ರಗತಿಪರ ರೈತರಾದ ನಿತ್ಯಾನಂದ ನಾಯಕ್ ಪಾಲಮೆ ಪಾದೂರು ಇವರು ಸಾವಯವ ಭತ್ತದ ಬೆಳೆಯ ಬಗ್ಗೆ ಮಾಹಿತಿ ನೀಡಿ, ಜೀವಾಮೃತ ಸಿದ್ಧ ಪಡಿಸುವುದು, ಬಳಕೆ, ಹಸಿರೆಲೆ ಗೊಬ್ಬರ, ಸೆಣಬು, ಡಯಾಂಚ ಗೊಬ್ಬರ, ಗದ್ದೆ ಹದಗೊಳಿಸುವ ಕ್ರಮದ ಬಗ್ಗೆ ಮಾಹಿತಿಯೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪಂಜಿಮಾರು ಹಾಲು ಉತ್ಪಾದಕರ ಸಹಕಾರಿ ಸಂಘ ವತಿಯಿಂದ ಸಾಂಪ್ರದಾಯಿಕ ಹಿರಿಯ ಕೃಷಿಕರಾದ ಗೋಪಾಲ ರಾವ್ ಪಾಲಮೆ, ಸೆವ್ರಿನ್ ಕಸ್ತಲಿನೊ ವಲದೂರು ಇವರನ್ನು ಸನ್ಮಾನಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶ್ ಪೂಜಾರಿ ವಲದೂರು ಸನ್ಮಾನಿತರನ್ನು ಪರಿಚಯಿಸಿ ಅಭಿನಂದಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಮಾಜಿ ಅಧ್ಯಕ್ಷೆ ಹರೀಣಾಕ್ಷಿ ಶೆಟ್ಟಿ ವಹಿಸಿದ್ದರು. ವಲದೂರು ವೆಲ್ಫೇರ್ ಎಸೋಸಿಯೇಶನ್ ಕಾರ್ಯದರ್ಶಿ ಅಜಿತ್ ಪೂಜಾರಿ, ಕೃಷಿಸಖಿ ಪ್ರಜ್ಞಾ ವೇದಿಕೆಯಲ್ಲಿದ್ದರು. ಕಾಪು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪುಷ್ಪಲತಾ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಸುಮಾರು 95 ಕೃಷಿಕರು ಪಾಲ್ಗೊಂಡಿದ್ದರು. ಕೃಷಿ ಕೇಂದ್ರದಿಂದ ಪ್ರತೀಯೊಬ್ಬರಿಗೂ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಡಿಎಂಎ ಕಾಲೇಜಿನಿಂದ ಸ್ತನ್ಯಪಾನ ಜಾಗೃತಿ ಬೀದಿನಾಟಕ
ಸಂಸ್ಕೃತಿ ಆಸ್ತಿಗಿಂತಲೂ ಮೌಲ್ಯಯುತ: ಚೇತನ್ ನೈಲಾಡಿ