ಹೊಸಕೋಟೆ: ಇದೀಗ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಳದ ಜತೆಗೆ ಗುಣಮಟ್ಟ ಕಾಪಾಡುವುದು ಮುಖ್ಯ. ಪಶುವೈದ್ಯರು ರೈತರಿಗೆ ವೈಜ್ಞಾನಿಕ ಪಶುಸಂಗೋಪನೆ, ಹಸುಗಳ ಪೋಷಣೆ, ತಳಿ ಅಭಿವೃದ್ಧಿ ಹಾಗೂ ಹಾಲಿನ ಉತ್ಪಾದನೆ ಹೆಚ್ಚಿಸುವ ಕುರಿತು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಸಲಹೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಬಹುತೇಕ ರೈತರು ಹೈನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಅನೇಕರಿಗೆ ಪಶುಗಳ ನಿರ್ವಹಣೆ ಬಗ್ಗೆ ವೈಜ್ಞಾನಿಕ ಮಾಹಿತಿ ಇರುವುದಿಲ್ಲ. ಆದ್ದರಿಂದ ಹೈನುಗಾರರಿಗೆ ಪಶುವೈದ್ಯರು, ಡಿಎಂಗಳು ಮತ್ತು ಮೇಲ್ವಿಚಾರಕರು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅನುಭವಿ ಸಿಬ್ಬಂದಿ ತಮ್ಮ ಜ್ಞಾನವನ್ನು ರೈತರಿಗೆ ತಲುಪಿಸಬೇಕು. ಕೇವಲ ಕೆಲಸ ನಿರ್ವಹಿಸುವುದಕ್ಕೆ ಸೀಮಿತವಾಗದೆ, ರೈತರಲ್ಲಿ ವೈಜ್ಞಾನಿಕ ಪಶುಸಂಗೋಪನೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಹಸುಗಳ ಆರೋಗ್ಯ, ಸಂತಾನೋತ್ಪತ್ತಿಗೆ ಆದ್ಯತೆ:ಹಸುಗಳ ಗರ್ಭಧಾರಣೆಗೆ ಸೂಕ್ತ ಸಮಯ, ಯಾವ ಹಸುವಿಗೆ ಯಾವ ಚಿಕಿತ್ಸೆ, ಕೃತಕ ಗರ್ಭಧಾರಣೆ ಕುರಿತು ರೈತರಿಗೆ ತಿಳಿವಳಿಕೆ ನೀಡಬೇಕು. ಕ್ಷೇತ್ರಮಟ್ಟದ ಸಿಬ್ಬಂದಿಯಿಂದ ಸಮಸ್ಯೆ ಬಗೆಹರಿಯದಿದ್ದರೆ ಪಶುವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಒದಗಿಸಬೇಕು. ಹಸುಗಳ ಆರೋಗ್ಯ ತಪಾಸಣೆ, ಸಂತಾನೋತ್ಪತ್ತಿ ನಿರ್ವಹಣೆ ಹಾಗೂ ಹಾಲಿನ ಉತ್ಪಾದನೆ ಹೆಚ್ಚಿಸುವ ಕ್ರಮಗಳಲ್ಲಿ ಪಶುವೈದ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಅದೇ ರೀತಿ, ಕರು ಹುಟ್ಟಿದ ನಂತರದ ಮೊದಲ ಎರಡು-ಮೂರು ತಿಂಗಳು ವೈಜ್ಞಾನಿಕವಾಗಿ ಸಾಕುವುದು, ಸಮರ್ಪಕ ಪೌಷ್ಟಿಕ ಆಹಾರ ಹಾಗೂ ಅವುಗಳ ಬೆಳವಣಿಗೆ ಮಾಹಿತಿ ನೀಡಬೇಕು. ಹಸುಗಳ ತೂಕ, ದೇಹದ ಬೆಳವಣಿಗೆ ಮತ್ತು ಹಾಲಿನ ಇಳುವರಿ ನಡುವಿನ ಸಂಬಂಧ ವಿವರಿಸಬೇಕು ಎಂದು ಸೂಚಿಸಿದರು.
ಸಾಮಾನ್ಯ ೩೫೦ ಕೆಜಿ ತೂಕದ ಹಸು ದಿನಕ್ಕೆ 7 ಲೀಟರ್ ಹಾಲು ನೀಡಿದರೆ, ಅದಕ್ಕಿಂತ ಹೆಚ್ಚು ಹಾಲು ಉತ್ಪಾದನೆ, ಆರೋಗ್ಯ ನಿರ್ವಹಣೆ ಮತ್ತು ತಳಿ ಸುಧಾರಣೆಗೆ ಒತ್ತು ನೀಡಬೇಕು. ವೈಜ್ಞಾನಿಕ ತಳಿ ಅಭಿವೃದ್ಧಿ ಹಾಗೂ ಸುಧಾರಿತ ಪಶುಸಂಗೋಪನಾ ಪದ್ಧತಿಗಳ ಬಗ್ಗೆ ಅಧ್ಯಯನ ಮಾಡಿ ರೈತರಿಗೆ ಸೂಕ್ತ ಮಾಹಿತಿ ಒದಗಿಸಬೇಕು. ರೈತರು ಮತ್ತು ಅಧಿಕಾರಿಗಳ ನಡುವೆ ಪರಸ್ಪರ ಜ್ಞಾನ ವಿನಿಮಯ ಆಗಬೇಕು. ರೈತರ ಅನುಭವಕ್ಕೆ ಅಧಿಕಾರಿಗಳ ತಾಂತ್ರಿಕ ಜ್ಞಾನ ಸೇರಿದಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯ. ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಸುಧಾರಣೆಗೆ ಒಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಮುಲ್ ಉಪಾಧ್ಯಕ್ಷ ಕೆಎಂಎಫ್ ಮಂಜುನಾಥ್, ನಿರ್ದೆಶಕರಾದ ಬಿ.ವಿ.ಸತೀಶ್‌ಗೌಡ, ಕಡತನಮಲೆ ಸತೀಶ್, ಆನಂದ್ ಕುಮಾರ್, ಮುನಿರಾಜು, ಕೃಷ್ಣೇಗೌಡ, ನಾಗಪ್ಪ, ನಾಮ ನಿರ್ದೇಶಕ ನಜೀರ್ ಆಲಿಖಾನ್, ಎಂಡಿ ಮಂಜುನಾಥ್, ನಿವೃತ್ತ ಎಂಡಿ ನಾಗರಾಜಯ್ಯ, ಶಿಬಿರದ ಉಪ ವ್ಯವಸ್ಥಾಪಕ ವಿನಯ್, ಹಾಲು ಉತ್ಪಾದಕರ ನೌಕರರ ಸಂಘದ ಜಿಲ್ಲಾಧ್ಯಕ್ಷ ಲೋಕೇಶ್, ತಾಲೂಕು ಅಧ್ಯಕ್ಷ ವಿಜಯ್‌ಕುಮಾರ್, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಜಯರಾಜ್, ಜಿಪಂ ಮಾಜಿ ಅಧ್ಯಕ್ಷ ಮುನಿಯಪ್ಪ ಇತರರು ಹಾಜರಿದ್ದರು.
ಹೊಸಕೋಟೆ ತಾಲೂಕಿನ ಕಸಬಾ ಹೋಬಳಿ ಚಿಕ್ಕಹುಲ್ಲೂರು ಬಳಿ ಇರುವ ಬಮುಲ್ ಶಿಬಿರ ಕಚೇರಿಯಲ್ಲಿ ಆಯೋಜಿಸಿದ್ದ ಕೃತಕ ಗರ್ಭಧಾರಣಾ ಕಾರ್ಯಕರ್ತರ ಸಮಾವೇಶವನ್ನು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕ ಶರತ್ ಬಚ್ಚೇಗೌಡ, ಬಮುಲ್ ನಿರ್ದೆಶಕ ಬಿ.ವಿ.ಸತೀಶಗೌಡ ಉದ್ಘಾಟಿಸಿದರು.