ಜಿಲ್ಲೆಯಲ್ಲಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ಸ್ಥಳಗಳನ್ನು ಗುರುತಿಸಿ ಅಪಘಾತಗಳನ್ನು ತಪ್ಪಿಸಲು ವೈಜ್ಞಾನಿಕವಾಗಿ ರೂಪುರೇಷೆ ಸಿದ್ಧಪಡಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೇಗದ ಚಾಲನೆಗೆ ಕಡಿವಾಣ ಹಾಕಿ: ಜಿಲ್ಲೆಯಲ್ಲಿ ಹೊಸದಾಗಿ ನೆಲಮಂಗಲದ ಡಾಬಸ್ ಪೇಟೆಯಿಂದ ದೊಡ್ಡಬಳ್ಳಾಪುರ ಮೂಲಕ ಹೊಸಕೋಟೆ ವರೆಗೂ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಚೆನೈ ಎಕ್ಸ್‌ಪ್ರೆಸ್ ಹೈವೇ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಗಳಲ್ಲಿ ವಾಹನಗಳು ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸುವುದಕ್ಕೆ ಕಡಿವಾಣ ಹಾಕಬೇಕು. ವೇಗವಾಗಿ ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತಗಳು ಉಂಟಾಗುವ ಸಂಭವ ಹೆಚ್ಚಾಗಿದ್ದು, ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಅಪಘಾತ ತಡೆಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ರಸ್ತೆ ದಾಟುವ ಪ್ರದೇಶಗಳಲ್ಲಿ ಸೂಚನಾ ಫಲಕ ಅಳವಡಿಸುವ ಜೊತೆಗೆ ಜಾಗೃತಿ ಮೂಡಿಸಬೇಕು. ರಾಷ್ಟ್ರೀಯ ಹೆದ್ದಾರಿ 648ರಲ್ಲಿ ಕೆಲವು ಕಡೆ ಸರ್ವಿಸ್ ರೋಡ್ ಹಾಗೂ ಕೆಳ ಸೇತುವೆ (ಅಂಡರ್ ಪಾಸ್) ಬೇಕೆಂದು ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದರು.ಕಡ್ಡಾಯವಾಗಿ ಅವಶ್ಯಕತೆ ಇರುವ ರಸ್ತೆ ಭಾಗಗಳಲ್ಲಿ ಸೂಚನಾ ಫಲಕಗಳು(ಸೈನ್ ಬೋರ್ಡ್), ಹಂಸ್‌ಗಳು, ರಸ್ತೆ ದುರಸ್ತಿ ಕಾಮಗಾರಿಗಳ ಸ್ಥಳಗಳಲ್ಲಿ ಸೈನ್ ಬೋರ್ಡ್ ಅಳವಡಿಕೆ, ಇತರೆ ಇಲಾಖೆಗಳು ನಡೆಸುವ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ, ಗುಂಡಿಗಳನ್ನು ತೆಗೆದಾಗ ಅಲ್ಲಿ ಕಡ್ಡಾಯವಾಗಿ ಸುತ್ತಲೂ ಸೂಚನಾ ಫಲಕಗಳನ್ನು ಅಳವಡಿಸಿ ಬ್ಯಾರಿಕೇಡ್ ಅಳವಡಿಸಬೇಕೆಂದು ಸೂಚಿಸಿದರು.
---------
-ಡಾ.ಎನ್ ಶಿವಶಂಕರ್, ಜಿಲ್ಲಾಧಿಕಾರಿ
‘ರಸ್ತೆಗಳಲ್ಲಿ ಅಪಘಾತ ಸಂಭವಿಸಿ ಪ್ರಾಣಾಪಾಯದಿಂದ ಪಾರಾಗುವ ಸಂಭವ ಹೆಚ್ಚಿದ್ದಾಗ ಅಮೂಲ್ಯ ಸಮಯ(ಗೋಲ್ಡನ್ ಅವರ್ಸ್) ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಇಂತಹ ಸಂದರ್ಭದಲ್ಲಿ ಮಾಹಿತಿ ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ ಸಮಯ ವ್ಯರ್ಥಮಾಡದೆ ಕಾರ್ಯಪ್ರವೃತ್ತರಾಗಿ ಅಪಘಾತವಾದ ವ್ಯಕ್ತಿಯನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿರುತ್ತದೆ.’