
ಮಡಿಕೇರಿ: ಆನೆ-ಮಾನವ ಸಂಘರ್ಷದಿಂದ ನಮ್ಮ ಜಿಲ್ಲೆ ತತ್ತರಿಸುತ್ತಿದೆ. ಇಂದು ಬೆಳಗ್ಗೆ ಕೂಡ ಬೆಳೆಗಾರರೊಬ್ಬರು ಆನೆ ದಾಳಿಯಿಂದ ಮೃತಪಟ್ಟಿದ್ದು, ಅತ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವೈಜ್ಞಾನಿಕ ಕ್ರಮ ಅಗತ್ಯ. ಆದ್ದರಿಂದ ಸಂಪುಟ ಸಭೆ ನಡೆಸಿ ಪರಿಹಾರಕ್ಕೆ ಮುಂದಾಗಬೇಕೆಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಮನವಿ ಮಾಡಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ಮಾತನಾಡಿದ ಅವರು, ಕೊಡಗಿನಲ್ಲಿ ಕಳೆದ ಹತ್ತು ದಿನದಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ. ಕುಶಾಲನಗರದ ಬಾಳೆಗುಂಡಿಯಲ್ಲಿ ಮಹಿಳೆ, ಮದೆನಾಡು ಸಮೀದಪಲ್ಲಿ ಯುವತಿಯೊಬ್ಬಳು ಹಾಗೂ ಸಿದ್ದಾಪುರದಲ್ಲಿ ಬೆಳೆಗಾರರೊಬ್ಬರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ.
ಕ್ರೀಡೆಗೆ ಪ್ರೋತ್ಸಾಹ, ಪೊನ್ನಣ್ಣ ಸ್ವಾಗತ: ರಾಜ್ಯದಲ್ಲಿ ಅತಿ ಹೆಚ್ಚು ಒಲಂಪಿಯನ್ ಗಳನ್ನು ನೀಡಿದ ಪುಟ್ಟ ಜಿಲ್ಲೆ ಕೊಡಗು ಜಿಲ್ಲೆಯಾಗಿದೆ. ಇದನ್ನು ಗುರುತಿಸಿ ನನ್ನ ಮನವಿಯನ್ನು ಪರಿಗಣಿಸಿ ವಿರಾಜಪೇಟೆಯಲ್ಲಿ ಈಗಾಗಲೇ 11.5 ಎಕರೆ ಜಾಗ ಗುರುತಿಸಿದ್ದು, ಇದರಲ್ಲಿ ಕ್ರೀಡಾ ತರಬೇತಿ ವಸತಿ ಕೇಂದ್ರವನ್ನು ಸ್ಥಾಪಿಸಲು ಕ್ರಮ ಜರುಗಿಸುವ ಘೋಷಣೆಗಳನ್ನು ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವುದು ಬಹಳ ಮುಖ್ಯವಾದ ವಿಚಾರವಾಗಿದೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಿಎಂ ತೆಗೆದುಕೊಂಡ ದಿಟ್ಟ ನಿರ್ಧಾರವನ್ನು ಸ್ವಾಗತಿಸುವುದಾಗಿ ಅವರು ಬಜೆಟ್ ಚರ್ಚೆ ಸಂದರ್ಭ ಸ್ವಾಗತಿಸಿದರು.