ಯಶಸ್ವಿ ರೈತನಾಗಲು ವೈಜ್ಞಾನಿಕ ಇಚ್ಛಾಶಕ್ತಿ ಅಗತ್ಯ

KannadaprabhaNewsNetwork |  
Published : Sep 11, 2025, 12:04 AM IST
ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದ ಕಬ್ಬು ಬೇಸಾಯದ ಸಮಗ್ರ ಬೇಸಾಯ ಪದ್ಧತಿ ಕುರಿತು ಕಾರ್ಯಾಗಾರದ ಉದ್ಘಾಟನೆ ನಡೆಯಿತು. | Kannada Prabha

ಸಾರಾಂಶ

ಕಬ್ಬು ಬೇಸಾಯದ ವಿವಿಧ ಮಜಲುಗಳಲ್ಲಿ ಪಾಲಿಸಬೇಕಾದ ನಿಯಮಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ಕರಾರುವಕ್ಕಾಗಿ ಪಾಲಿಸಿ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮಣ್ಣಿನ ಆರೋಗ್ಯ, ಭೂ ಫಲವತ್ತತೆ, ಸುಧಾರಿತ ತಂತ್ರಜ್ಞಾನ, ಬೆಳೆ ವಿಧಾನಗಳ ಬಗ್ಗೆ ಆಳವಾದ ಅಧ್ಯಯನ ಮಾಡುವ ಮೂಲಕ ಪ್ರತಿ ಬೆಳೆಯಲ್ಲೂ ಅಧಿಕ ಇಳುವರಿ ಪಡೆಯಬಹುದು. ಈ ಸತ್ಯವನ್ನು ಅರಿತು ಎಕರೆಗೆ 100 ಟನ್ ಕಬ್ಬು ಬೆಳೆದು ಯಶಸ್ವಿ ರೈತರಾಗಲು ವೈಜ್ಞಾನಿಕ ಇಚ್ಛಾಶಕ್ತಿ ಅಗತ್ಯ ಎಂದು ಮಹಾರಾಷ್ಟ್ರದ ಖ್ಯಾತ ಕಬ್ಬು ವಿಜ್ಞಾನಿ ವಿಜಯ ಮಾಳಿ ತಿಳಿಸಿದರು.

ಪಟ್ಟಣದ ತಹಸೀಲ್ದಾರ್‌ ಕಚೇರಿ ಹಿಂದಿರುವ ಆದಿತ್ಯ ಪ್ಲಾಜಾದ ಸಭಾ ಭವನದಲ್ಲಿ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ಬೆಂಗಳೂರು, ಜೈನ್ ಇರಿಗೇಷನ್ ಸಿಸ್ಟಂ, ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠ ಬಸರಕೋಡ ಹಾಗೂ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಮುದ್ದೇಬಿಹಾಳ ಸಂಯುಕ್ತಾಶ್ರಯದಲ್ಲಿ ನಡೆದ ವೈಜ್ಞಾನಿಕ ಕಬ್ಬು ಬೇಸಾಯ- ಎಕರೆಗೆ 100 ಟನ್ ಇಳುವರಿ ಎಂಬ ವಿಷಯಾಧರಿತ ರೈತ ವಿಜ್ಞಾನಿ ತಾಂತ್ರಿಕ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಭೂಮಿ ತಯಾರಿ, ನಾಟಿ ಪದ್ಧತಿ, ತಳಿ ಆಯ್ಕೆ, ನೀರು ಮತ್ತು ಪೋಷಕಾಂಶಗಳ ಪೂರೈಕೆ, ಕೀಟ-ರೋಗಗಳ ನಿರ್ವಹಣೆ, ಇತ್ಯಾದಿ ವಿಷಯಗಳಲ್ಲಿ ಮಾಡಬಹುದಾದ ಪ್ರಮಾದಗಳಿಂದ ಇಳುವರಿಯಲ್ಲಿ ಹೊಡೆತ ತಿನ್ನುವ ಕಬ್ಬು ಬೆಳೆಗಾರರು, ಕಬ್ಬು ಬೇಸಾಯದ ವಿವಿಧ ಮಜಲುಗಳಲ್ಲಿ ಪಾಲಿಸಬೇಕಾದ ನಿಯಮಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ಕರಾರುವಕ್ಕಾಗಿ ಪಾಲಿಸಿದಲ್ಲಿ ಎಕರೆಗೆ 100 ಟನ್‌ಗಳಿಗೂ ಮೀರಿ ಕಬ್ಬು ಇಳುವರಿ ಪಡೆಯಲು ಸಾಧ್ಯವೆಂದರು.

ಜೈನ್ ಇರಿಗೇಷನ್ ಸಿಸ್ಟಂನ ನೀರಾವರಿ ತಂತ್ರಜ್ಞ ಎಂ.ಕೆ.ಬಿರಾದಾರ ಮಾತನಾಡಿ, ಕಬ್ಬಿನ ಬೆಳೆಗೆ ಬೆಳೆಯುವ ಹಂತಗಳಲ್ಲಿ ಸರಿಯಾಗಿ ತೇವಾಂಶ ಇರುವಂತೆ ಮಾಡಿದಲ್ಲಿ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ಹವಾಮಾಣ, ಮಳೆ ಪ್ರಮಾಣ, ಮಣ್ಣಿನ ಗುಣಧರ್ಮ, ಮಣ್ಣಿನ ಆಳ, ನೀರು ಸಿಗುವ ಪ್ರಮಾಣ ಮತ್ತು ಬೆಳೆಯ ಕಾಲಾವಧಿ ಆಧರಿಸಿ ನೀರು ನಿರ್ವಹಣೆಗೆ ರೈತರು ಹೆಚ್ಚಿನ ಆದ್ಯತೆ ನೀಡಬೇಕೆಂದರು.

ಬೇಸಾಯ ಶಾಸ್ತ್ರಜ್ಞ ಎಸ್.ಬಿ.ಪಾಟೀಲ ಮಾತನಾಡಿ, ಸಂಪೂರ್ಣವಾಗಿ ತಿಳಿಯದೇ ಇನ್ನೊಬ್ಬರ ಅನುಕರಣೆಯಿಂದ ಕಬ್ಬು ಬೆಳೆಯುವ ಪ್ರದೇಶವು ಹೆಚ್ಚು ವಿಸ್ತರಣೆಯಾಗುತ್ತಿದೆ. ಇದರಿಂದ ಕುಂಠಿತವಾಗುತ್ತಿರುವ ಇಳುವರಿ ಮತ್ತು ರೈತರಿಗೆ ಆಗುತ್ತಿರುವ ನಷ್ಟ ತಡೆಯಲು ಇಂತಹ ಗೋಷ್ಠಿಗಳು ಸುತ್ತ್ಯಾರ್ಹವಾಗಿವೆ. ಇವುಗಳ ಸದುಪಯೋಗವನ್ನು ರೈತರು ಪಡೆಯಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಅರವಿಂದ ಕೊಪ್ಪ ಮಾತನಾಡಿ, ಹೆಚ್ಚಿನ ಇಳುವರಿ ಪಡೆಯಲು ಕಬ್ಬು ಸಂಶೋಧನೆ ಮತ್ತು ಅಭಿವೃದ್ಧಿ ಸಂಬಂಧಿತ ಚಟುವಟಿಕೆಗಳಲ್ಲಿ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಮಾಧ್ಯಮವಾಗಿ ಕಾರ್ಯನಿರ್ವಹಿಸಲಿದೆ. ಕಬ್ಬು ಬೆಳೆಗಾರರ ಸಹಭಾಗಿತ್ವದಿಂದ ತಾಂತ್ರಿಕತೆಗಳ ಅಳವಡಿಕೆಯ ಅವಶ್ಯಕತೆ ಗುರುತಿಸಲಾಗುವುದು. ಕನಿಷ್ಠ 100 ಟನ್ ಇಳುವರಿ ಪಡೆಯುವ ರೈತರ ಕ್ಲಬ್ ರಚಿಸಲಾಗುತ್ತಿದೆ ಎಂದು ತಿಳಿಸಿದರು.

ವೇದಿಕೆಯ ಮೇಲೆ ಆಕ್ಸಫರ್ಡ್‌ ಮಠ್ಸ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ಜಿ.ಮಠ, ಅಂಗಾಂಶ ಕೃಷಿ ತಜ್ಞ ಪ್ರಭು ಯಾಳವಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಸನಗೌಡ ಪಾಟೀಲ, ಸಹಾಯಕ ನಿರ್ದೇಶಕರಾದ ಭಗವಂತ ಜಿಗಜಿಣಗಿ, ರಾಘವೇಂದ್ರ ದೇಶಪಾಂಡೆ, ದಾಸೋಹಿ ಎಫ್‌ಪಿಸಿ(ಒ) ನಿರ್ದೇಶಕರಾದ ರಶ್ಮಿ ಕೊಪ್ಪ, ಆರ್.ಬಿ.ಸಜ್ಜನ, ಸೋಮನಗೌಡ ಬಿರಾದಾರ (ಮಡಿಕೇಶ್ವರ), ಶ್ರೀಶೈಲ ಮೇಟಿ(ಚೊಂಡಿ), ಬಸವರಾಜ ಕುಂಟೋಜಿ, ರವೀಂದ್ರ ಕೋಳೂರ, ಪರಸಪ್ಪ ಮೇಟಿ ಇದ್ದರು. ನಿರ್ದೇಶಕರಾದ ಆರತಿ ರಾಯಚೂರಕರ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯಲಕ್ಷ್ಮಿ ಹೊಸಮನಿ ನಿರೂಪಿಸಿ, ಗಿರೀಶ ವಾಗಣಗೇರಿ ವಂದಿಸಿದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!