ಅಪಘಾತ ತಪ್ಪಿಸಲು ವೈಜ್ಞಾನಿಕವಾಗಿ ರಸ್ತೆತಡೆ ಅಳವಡಿಸಿ: ಜಿಲ್ಲಾಧಿಕಾರಿ ದಿವಾಕರ್

KannadaprabhaNewsNetwork |  
Published : Jul 24, 2025, 12:45 AM IST
23ಎಚ್‌ಪಿಟಿ7- ಹೊಸಪೇಟೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಇದ್ದರು. | Kannada Prabha

ಸಾರಾಂಶ

ಜಿಲ್ಲಾ ವ್ಯಾಪ್ತಿಯ ನಗರ ಮತ್ತು ಪಟ್ಟಣಗಳ ರಸ್ತೆಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ರಸ್ತೆ ಅಪಘಾತಗಳನ್ನು ತಪ್ಪಿಸಲು ಸ್ಥಳ ಗುರುತಿಸಿ ಶೀಘ್ರವೇ ವೈಜ್ಞಾನಿಕವಾಗಿ ರಸ್ತೆ ತಡೆಗಳನ್ನು ಅಳವಡಿಸಬೇಕು.

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆಕನ್ನಡಪ್ರಭ ವಾರ್ತೆ ಹೊಸಪೇಟೆ

ಜಿಲ್ಲಾ ವ್ಯಾಪ್ತಿಯ ನಗರ ಮತ್ತು ಪಟ್ಟಣಗಳ ರಸ್ತೆಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ರಸ್ತೆ ಅಪಘಾತಗಳನ್ನು ತಪ್ಪಿಸಲು ಸ್ಥಳ ಗುರುತಿಸಿ ಶೀಘ್ರವೇ ವೈಜ್ಞಾನಿಕವಾಗಿ ರಸ್ತೆ ತಡೆಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದ ಅವರು, ನಗರ, ಪಟ್ಟಣಗಳಲ್ಲಿ ವೇಗವಾಗಿ ವಾಹನಗಳನ್ನು ಚಲಾಯಿಸುತ್ತಿರುವ ಅನೇಕ ದೂರುಗಳು ಬಂದ ಹಿನ್ನೆಲೆ ವೇಗ ನಿಯಂತ್ರಣಕ್ಕೆ ಸಣ್ಣ ರಸ್ತೆ ತಡೆಗಳನ್ನು ಅಳವಡಿಸಬೇಕಾಗಿದೆ. ಶಾಲಾ, ಕಾಲೇಜುಗಳ ರಸ್ತೆ ಸೇರಿದಂತೆ ಹೆಚ್ಚು ವಾಹನಗಳು ಸಂಚರಿಸುವ ರಸ್ತೆ ಗುರುತಿಸಿ, ಅನೇಕ ಅಪಘಾತಗಳಲ್ಲಿ ಸಾವಿನ ಪ್ರಕರಣಗಳಿಲ್ಲದಿದ್ದರೂ, ಸವಾರರು ಗಂಭೀರ ಗಾಯಾಳುಗಳಾಗಿ ನಿರಂತರ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಚಾರಕ್ಕೂ ತೊಂದರೆ ಆಗದಂತೆ ವಾಹನಗಳ ವೇಗ ನಿಯಂತ್ರಿಸುವ ನಿಟ್ಟಿನಲ್ಲಿ ಕೆಲ ಕ್ರಮಗಳನ್ನು ವಹಿಸಬೇಕಿದೆ ಎಂದರು.

ಎನ್‌ಎಚ್‌ಎಐ ಅಧಿಕಾರಿಗಳ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು 6 ಕಡೆ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ಈಗಾಗಲೇ 5 ಬ್ಲಾಕ್ ಸ್ಪಾಟ್‌ಗಳನ್ನು ಸರಿಪಡಿಸಲಾಗಿದೆ. ಉಳಿದ 1 ಬ್ಲಾಕ್ ಸ್ಪಾಟ್‌ನ್ನು ಆದಷ್ಟು ಬೇಗ ಪೂರೈಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಹೊಸಪೇಟೆ ನಗರದಲ್ಲಿ ಮಳೆಯಿಂದಾಗಿ ರಸ್ತೆ ಮೇಲೆ ಅಲ್ಲಲ್ಲಿ ನೀರು ಸಂಗ್ರಹವಾಗುತ್ತಿದೆ. ರಸ್ತೆಯ ಮೇಲಿನ ನೀರು ಸರಾಗವಾಗಿ ಚರಂಡಿಗಳಿಗೆ ಹರಿಯುವಂತೆ ಕ್ರಮವಹಿಸಬೇಕು. ರಾಷ್ಟ್ರೀಯ ಹೆದ್ದಾರಿ ಹೊಸಹಳ್ಳಿ ರಸ್ತೆಯ ಬಳಿ 300 ಮೀಟರ್ ಉದ್ದದ ಚರಂಡಿ ನಿರ್ಮಿಸುವಂತೆ ಹಾಗೂ ರಸ್ತೆಯ ಮೇಲಿನ ಕಸ ತೆರವುಗೊಳಿಸಬೇಕು ಎಂದು ಸೂಚಿಸಿದರು.

ಅರಸೀಕೆರೆಯಿಂದ ಮತ್ತಿಹಳ್ಳಿಗೆ ಹೋಗುವ ರಸ್ತೆ ಮಾರ್ಗದಲ್ಲಿ ಎರಡು ಕಿಲೋಮೀಟರ್‌ನಷ್ಟು ವಾಹನಗಳು ಸಂಚರಿಸಲು ಸಂಪೂರ್ಣ ರಸ್ತೆ ಹದಗೆಟ್ಟಿದೆ. ಎನ್‌ಎಚ್‌ಎಐ ಮರಿಯಮ್ಮನಹಳ್ಳಿಯ ಹತ್ತಿರ ಡಣಾಯಕನಕೆರೆ, ದೇವಲಾಪುರ ಮತ್ತು ಗೊಲ್ಲರಹಳ್ಳಿ ಮೂರು ರೋಡ್ ಕ್ರಾಸ್ ಬಳಿ ಲೈಟ್ ಮತ್ತು ರಸ್ತೆತಡೆಗಳನ್ನು ಆಳವಡಿಸಬೇಕು. ನಿರಂತರ ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳಲ್ಲಿ ನೀರು ನಿಲ್ಲದಂತೆ ಮುಚ್ಚಲು ಕ್ರಮವಹಿಸಬೇಕು. ರಸ್ತೆಗಳಲ್ಲಿ ಅಪಘಾತ ಪ್ರಕರಣಗಳನ್ನು ತಗ್ಗಿಸುವಲ್ಲಿ ಪಿಡಬ್ಲ್ಯುಡಿ ಅಧಿಕಾರಿಗಳ ಪಾತ್ರ ಹೆಚ್ಚಾಗಿದೆ. ಮಳೆಗಾಲ ಮುಗಿಯುವವರೆಗೆ ಅಧಿಕಾರಿಗಳು ನಿರ್ಲಕ್ಷಿಸದೇ ಎಲ್ಲಾ ರಸ್ತೆಗಳ ಮೇಲೆ ನಿಗಾವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಮಾತನಾಡಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಯಾವುದೇ ರಸ್ತೆಗಳಲ್ಲಿ ರಸ್ತೆತಡೆಗಳನ್ನು ಅಳವಡಿಸುವ ಮುನ್ನ ಆಯಾ ವೃತ್ತ ನಿರೀಕ್ಷಕರ ಸಲಹೆ ಪಡೆದುಕೊಳ್ಳಬೇಕು. ಹೊಸಪೇಟೆ ನಗರದಲ್ಲಿ ಮುಖ್ಯ ವೃತ್ತಗಳಲ್ಲಿ ಸಿಗ್ನಲ್ ಬೋರ್ಡ್ ಮತ್ತು ರಸ್ತೆತಡೆಗಳನ್ನು ಆಳವಡಿಸಬೇಕು. ನಗರದ ಭಟ್ರಹಳ್ಳಿ ಆಂಜನೇಯ ದೇವಸ್ಥಾನ ಮುಂದೆ ಹೋಗುವ ದಾರಿಯಲ್ಲಿ ಬಹಳ ತಿರುವುಗಳಿದ್ದು, ಅಪಘಾತಗಳು ಸಂಭವಿಸುತ್ತಿವೆ ಎಂಬ ಮಾಹಿತಿ ಇದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾಪಿನಾಯಕನಹಳ್ಳಿ ಮತ್ತು ವಡ್ಡರಹಳ್ಳಿಯಲ್ಲಿ ರಸ್ತೆಗಳ ಮೇಲೆ ಹೆಚ್ಚು ಗುಂಡಿಗಳು ಬಿದ್ದಿವೆ. ಹೆದ್ದಾರಿಗಳಲ್ಲಿ ಅಪಘಾತಗಳು ತಡೆಗಟ್ಟಲು ಮೊದಲು ಆದ್ಯತೆ ನೀಡಬೇಕು. ಅನಂತಶಯನಗುಡಿ ರಸ್ತೆಯಲ್ಲಿ ಮೇಲುಸೇತುವೆ ನಿರ್ಮಿಸುತ್ತಿರುವ ಹಿನ್ನೆಲೆ ತಾತ್ಕಾಲಿಕ ರಸ್ತೆ ಸಂಚಾರಕ್ಕೆ ಅನುವು ನೀಡಿರುವ ರಸ್ತೆ ಸಹ ಹದಗೆಟ್ಟಿದೆ. ಬೈಕ್, ಆಟೋಗಳು ಮತ್ತು ಕಾರುಗಳ ಸಂಚಾರಕ್ಕೆ ತೊಂದರೆ ಆಗಿದೆ. ರಸ್ತೆ ನಿರ್ಮಾಣ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿದರೇ ಸಂಚಾರಕ್ಕೆ ಅನುಕೂಲವಾಗಲಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆಗೆ ಅಡ್ಡಲಾಗಿರುವ ಮರಗಳ ಕೊಂಬೆಗಳನ್ನು ತೆರವುಗೊಳಿಸಬೇಕು ಎಂದರು.

ಸಭೆಯಲ್ಲಿ ಸಾರಿಗೆ ಇಲಾಖೆ, ಪಿಡಬ್ಲ್ಯುಡಿ, ಎನ್‌ಎಚ್‌ಎಐ ಸೇರಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ