ರೈಲು ಮಾರ್ಗದಲ್ಲಿ ವೈಜ್ಞಾನಿಕ ಸೇತುವೆಗಳ ನಿರ್ಮಿಸಿ

KannadaprabhaNewsNetwork |  
Published : Jun 17, 2024, 01:32 AM IST
ಕ್ಯಾಪ್ಷನಃ14ಕೆಡಿವಿಜಿ32ಃದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. | Kannada Prabha

ಸಾರಾಂಶ

ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಕಾಮಗಾರಿ ನಡೆಯುತ್ತಿದೆ. ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಹಾದುಹೋಗುವ ಮಾರ್ಗದಲ್ಲಿ ವೈಜ್ಞಾನಿಕವಾಗಿ ಸೇತುವೆಗಳನ್ನು ನಿರ್ಮಿಸಬೇಕಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ ನೀಡಿದ್ದಾರೆ.

- ಡಿಸಿ ಕಚೇರಿ ಚರ್ಚೆ ಸಭೆಯಲ್ಲಿ ಅಧಿಕಾರಿಗಳು, ಎಂಜಿನಿಯರ್‌ಗಳಿಗೆ ಶಾಸಕ ಸೂಚನೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಕಾಮಗಾರಿ ನಡೆಯುತ್ತಿದೆ. ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಹಾದುಹೋಗುವ ಮಾರ್ಗದಲ್ಲಿ ವೈಜ್ಞಾನಿಕವಾಗಿ ಸೇತುವೆಗಳನ್ನು ನಿರ್ಮಿಸಬೇಕಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ ನೀಡಿದರು.

ಡಿಸಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್, ರೈಲ್ವೆ ಅಧಿಕಾರಿಗಳು, ಎಂಜಿನಿಯರ್‌ಗಳೊಂದಿಗೆ ಚರ್ಚೆ ನಡೆಸಿದ ಅವರು, ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಈ ಹೊಸ ರೈಲು ಮಾರ್ಗದಲ್ಲಿ ಬುಳ್ಳಾಪುರ, ಆನಗೋಡು, ನೀರ್ಥಡಿ, ಚಿನ್ನಸಮುದ್ರ, ಹೆಬ್ಬಾಳು ಗ್ರಾಮಗಳು ಬರುತ್ತವೆ. ಅಲ್ಲದೇ, ಜಿಲ್ಲಾ ಮತ್ತು ರಾಜ್ಯ ಹೆದ್ದಾರಿಗಳು ಇವೆ. ಭವಿಷ್ಯದಲ್ಲಿ ಜನಸಂಖ್ಯೆ ಮತ್ತು ವಾಹನ ಸಂಖ್ಯೆಗಳ ಪ್ರಮಾಣ ಹೆಚ್ಚಳದ ದೃಷ್ಟಿಕೋನದಲ್ಲಿ ಮುಂದಿನ 50 ವರ್ಷಗಳ ಕಾಲ ಬಾಳಿಕೆ ಬರುವಂತಹ, ವೈಜ್ಞಾನಿಕವಾಗಿ ಕೆಳಸೇತುವೆ ಅಥವಾ ಮೇಲ್ಸೇತುವೆ ನಿರ್ಮಿಸಬೇಕೆಂದರು.

ಆನಗೋಡು- ಹೊಸಪೇಟೆ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಲಾರಿಗಳು ಸಂಚರಿಸುತ್ತವೆ. ಇದರಿಂದಾಗಿ 5 ಮೀಟರ್ ಎತ್ತರದಲ್ಲಿ ಸೇತುವೆ ನಿರ್ಮಿಸಿದರೆ ಸಂಚರಿಸಲು ತೊಂದರೆ ಆಗುತ್ತದೆ. ಹೀಗಾಗಿ 7 ಮೀಟರ್ ಎತ್ತರದಲ್ಲಿ ಸೇತುವೆ ನಿರ್ಮಿಸಬೇಕು. ಅವೈಜ್ಞಾನಿಕವಾಗಿ ಸೇತುವೆ ನಿರ್ಮಿಸಿ ಮತ್ತೆ ಕಿತ್ತು ಕೋಟ್ಯಂತರ ರು. ಅನುದಾನ ವ್ಯರ್ಥ ಆಗಬಾರದು ಎಂದು ಸಲಹೆ ನೀಡಿದರು.

ಕಾಮಗಾರಿಗಳು ಶಾಶ್ವತವಾಗಿ ಉಳಿಯಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರ ಹಣ ಪೋಲಾಗದಂತೆ ಎಚ್ಚರ ವಹಿಸಬೇಕು. ಕಾಟಾಚಾರಕ್ಕೆ ಕಾಮಗಾರಿ ನಡೆಸದೇ, ಗುಣಮಟ್ಟದ ಕಾಮಗಾರಿ ನಡೆಸಬೇಕು. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕೆಂದು ಸೂಚಿಸಿದರು.

ಈ ಹೊಸ ರೈಲ್ವೆ ಮಾರ್ಗದಲ್ಲಿ ಜಮೀನುಗಳು ಬರಲಿದ್ದು, ಅಲ್ಲಲ್ಲಿ ಸಂಪರ್ಕ ಕಲ್ಪಿಸುವ ರಸ್ತೆಗಳು ಇವೆ. ಅಲ್ಲೂ ಕೂಡ ರೈತರು ಜಮೀನುಗಳಿಗೆ ಹೋಗಿ ಬರಲು ಯಾವುದೇ ರೀತಿಯ ತೊಂದರೆ ಆಗದಂತೆ ಸೇತುವೆಗಳನ್ನು ನಿರ್ಮಿಸಬೇಕು. ಈ ಭಾಗಗಳಲ್ಲಿ ಸೇತುವೆ ನಿರ್ಮಿಸಲು ಎಸ್ಟಿಮೇಟ್ ಇರದಿದ್ದರೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿ ಅಲ್ಲಿ ಸೇತುವೆ ನಿರ್ಮಾಣಕ್ಕೆ ಸೇರ್ಪಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಭೂಸ್ವಾಧೀನ ಸಮಸ್ಯೆಯಿದ್ದರೆ ಜಿಲ್ಲಾಧಿಕಾರಿ ಅವರು ತ್ವರಿತವಾಗಿ ಬಗೆಹರಿಸುವ ಕೆಲಸ ಮಾಡಬೇಕೆಂದರು.

ಚಿತ್ರದುರ್ಗ ಜಿಲ್ಲೆಯಲ್ಲಿ ರೈಲ್ವೆ ಮಾರ್ಗದ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಕಾಮಗಾರಿ ತ್ವರಿತವಾಗಿ ಗತಿಯಲ್ಲಿ ನಡೆಯುತ್ತಿರುವಂತೆ ಅಲ್ಲೂ ತ್ವರಿತ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳಬೇಕೆಂದು ರೈಲ್ವೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ರೈಲ್ವೆ ಅಧಿಕಾರಿಗಳು ಇದ್ದರು.

- - - -14ಕೆಡಿವಿಜಿ32ಃ:

ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ
ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ