ಸೇವಾ ಮನೋಭಾವ ಮೂಡಿಸುವಲ್ಲಿ ಸ್ಕೌಟ್, ಗೈಡ್ ಪಾತ್ರ ಮಹತ್ವದ್ದು

KannadaprabhaNewsNetwork |  
Published : Apr 13, 2026, 02:15 AM IST
ಸಂಡೂರಿನ ಕೃಪಾನಿಲಯ ಶಾಲೆಯಲ್ಲಿ ಮಂಗಳವಾರ ಸ್ಕೌಟ್ ಮತ್ತು ಗೈಡ್ಸ್, ಕಬ್ಸ್ ಹಾಗೂ ಬುಲ್‌ಬುಲ್ಸ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಬೇಸಿಗೆ ಶಿಬಿರದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ತಾಲೂಕು ಘಟಕದ ಕಾರ್ಯದರ್ಶಿ ಜಿ.ಎಸ್. ಸೋಮಪ್ಪ ಮಾತನಾಡಿದರು. | Kannada Prabha

ಸಾರಾಂಶ

ಗುಣಗಳನ್ನು ಬೆಳೆಸುವಲ್ಲಿ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯು ಮಹತ್ವದ ಪಾತ್ರವನ್ನು ವಹಿಸುತ್ತಿದೆ

ಸಂಡೂರು: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾಗ, ದೇಶಭಕ್ತಿ, ಪರಿಸರ ಕಾಳಜಿ, ಸ್ವಾವಲಂಬನೆ, ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯು ಮಹತ್ವದ ಪಾತ್ರವನ್ನು ವಹಿಸುತ್ತಿದೆ ಎಂದು ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ತಾಲೂಕು ಘಟಕದ ಕಾರ್ಯದರ್ಶಿ ಜಿ.ಎಸ್. ಸೋಮಪ್ಪ ತಿಳಿಸಿದರು. ಪಟ್ಟಣದ ಕೃಪಾನಿಲಯ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ಕೌಟ್ ಮತ್ತು ಗೈಡ್ಸ್, ಕಬ್ಸ್ ಹಾಗೂ ಬುಲ್‌ಬುಲ್ಸ್ ವಿದ್ಯಾರ್ಥಿಗಳ ಒಂದು ದಿನದ ಶಾಲಾ ಹಂತದ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ತಾಲೂಕು ಘಟಕದ ಖಜಾಂಚಿ ಮಹಮ್ಮದ್ ಜಾವೀದ್ ಹಾಗೂ ಜಿಲ್ಲಾ ಸಂಘಟಕ ಮಹಮ್ಮದ್ ಷರ್ಫುದ್ದೀನ್ ಮಾತನಾಡಿ, ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು, ಅವರಲ್ಲಿ ವಿವಿಧ ಕೌಶಲ್ಯಗಳನ್ನು ಬೆಳೆಸುವಲ್ಲಿ ಬೇಸಿಗೆ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತವೆ. ಸ್ಕೌಟ್ ಮತ್ತು ಗೈಡ್ಸ್‌ಗಳು ರಾಜ್ಯ ಹಾಗೂ ರಾಷ್ಟ್ರಪತಿ ಪುರಸ್ಕಾರ ಪಡೆಯಲು ಪಡೆಯಬೇಕಾದ ಅಗತ್ಯ ತರಬೇತಿ, ತಿಳಿದುಕೊಳ್ಳಬೇಕಾದ ವಿಷಯಗಳು, ಪರೀಕ್ಷಾ ಪದ್ಧತಿ ಮತ್ತು ರಾಜ್ಯ ಹಾಗೂ ರಾಷ್ಟ್ರ ಪುರಸ್ಕಾರ ಪಡೆಯುವುದರಿಂದ ದೊರೆಯುವ ಅನುಕೂಲಗಳ ಕುರಿತು ವಿವರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಕೌಟ್ ಶಿಕ್ಷಕ ಎ. ಮರಿಸ್ವಾಮಿ, ಶಾಲೆಯಲ್ಲಿ 120 ವಿದ್ಯಾರ್ಥಿಗಳು ಕಬ್ಸ್, ಬುಲ್‌ಬುಲ್ಸ್, ಸ್ಕೌಟ್ ಹಾಗೂ ಗೈಡ್ಸ್ ವಿಭಾಗಗಳಲ್ಲಿ ಹೆಸರು ನೋಂದಾಯಿಸಿ ತರಬೇತಿ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಯಾದಗಿರಿ, ಬೆಳಗಾವಿ, ಉಡುಪಿ ಹಾಗೂ ಮೂಡಬಿದಿರೆಯಲ್ಲಿ ನಡೆದ ಸ್ಕೌಟ್ ಹಾಗೂ ಗೈಡ್ಸ್ ಮೇಳಗಳಲ್ಲಿ ಭಾಗವಹಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಬೇಸಿಗೆ ಶಿಬಿರದಲ್ಲಿ 50 ಕಬ್ಸ್, ಬುಲ್‌ಬುಲ್ಸ್, ಸ್ಕೌಟ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದರು.

ಪೊಲೀಸ್ ಠಾಣೆಗೆ ಭೇಟಿ:

ಧ್ವಜವಂದನೆ, ಧ್ವಜ ಗೀತೆಯ ನಂತರದಲ್ಲಿ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಮುಖ್ಯ ಪೊಲೀಸ್ ಪೇದೆ ರುದ್ರಪ್ಪ ಹಾಗೂ ಪೊಲೀಸ್ ಪೇದೆ ಮಂಜುನಾಥ್ ಅವರು ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯಲ್ಲಿನ ವಿವಿಧ ಹಂತದ ಅಧಿಕಾರಿಗಳು, ಅಲ್ಲಿನ ವ್ಯವಸ್ಥೆ, ದೂರು ದಾಖಲಿಸಿಕೊಳ್ಳುವ ವಿಧಾನ, ಪೊಲೀಸರ ಕರ್ತವ್ಯಗಳು, ಬಂದೂಕಿನ ಬಳಕೆ, ಮಕ್ಕಳ ಹಕ್ಕುಗಳು, ಅವುಗಳ ರಕ್ಷಣೆ, ತುರ್ತು ಕರೆಗಾಗಿ ಬಳಸಬಹುದಾದ ಫೋನ್ ನಂಬರ್ ಮುಂತಾದ ವಿಷಯಗಳ ಕುರಿತು ತಿಳಿಸಿಕೊಟ್ಟರು. ವಿದ್ಯಾರ್ಥಿಗಳು ಪೊಲೀಸರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ನಂತರದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಕಿರು ನಾಟಕಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಶಿಬಿರದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಸಿಸಿಲಿಯಾ ಫೆಲಿಕ್ಸ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೂಸಿ, ಆಡಳಿತಾಧಿಕಾರಿ ಸಿಸ್ಟರ್ ದೀಪ್ತಿ ಥಾಮಸ್, ಗೈಡ್ ಶಿಕ್ಷಕಿ ಯಾಸಿನ್, ಕಬ್ಸ್ ಹಾಗೂ ಬುಲ್‌ಬುಲ್ಸ್ ಶಿಕ್ಷಕಿ ಮೇರಿ, ಶಾಲೆಯ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ: ಸುಬ್ರಹ್ಮಣ್ಯ ಶ್ರೀ
ಕಾರ್ಕಳ: 19ರಂದು ಮಸ್ತಕಾಭಿಷೇಕ ಕಾರ್ಯಾಲಯ ಉದ್ಘಾಟನೆ