ಕನ್ನಡಪ್ರಭ ವಾರ್ತೆ ಮಂಡ್ಯ
ಎಐ ತಂತ್ರಜ್ಞಾನ ಯುಗದ ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸೇವಾ ಮನೋಭಾವ ಕಲಿಸುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಗುಬ್ಬಿಗೂಡು ರಮೇಶ್ ಹೇಳಿದರು.ನಗರದಲ್ಲಿರುವ ಡಯಟ್ ಸಭಾಂಗಣದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಮಿತಿ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಪ್ರಾರಂಭಿಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕೌಶಲ್ಯಜ್ಞಾನ ಬೇಕಿದೆ, ಶಿಕ್ಷಕರು ಮತ್ತು ಉಪನ್ಯಾಸಕರ ಮೂಲಕ ಆಸಕ್ತ ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸೇವಾ ಮನೋಭಾವ ಹೆಚ್ಚಿಸುವ ತರಬೇತಿ ನೀಡಿದರೆ ಉತ್ತಮ ಪ್ರಜೆಗಳಾಗುತ್ತಾರೆ ಎಂದು ನುಡಿದರು.ಇವತ್ತಿನ ಶಿಕ್ಷಣ ವ್ಯವಸ್ಥೆ ಕಾರ್ಖಾನೆಯಾಗಿದೆ, ನಾವು ವರ್ಷಕ್ಕೆ ಇಷ್ಟು ವಿದ್ಯಾರ್ಥಿಗಳನ್ನು ತಯಾರು ಮಾಡಿ ಸಮಾಜಕ್ಕೆ ಕಳಿಸುತ್ತಿದ್ದೇವೆ, ವಿದ್ಯಾರ್ಥಿಗಳಿಗೆ ಶಿಕ್ಷಣ, ಕೌಶಲಜ್ಞಾನ, ಎಐ ತಂತ್ರಜ್ಞಾನ ನೀಡುತ್ತಿದ್ದೇವೆ ಅಷ್ಟೇ. ಉದ್ಯೋಗ-ಉದ್ಯಮ, ದೇಶಭಕ್ತಿ ಕಡೆ ಆಸಕ್ತಿ ಇರುವಂತಹ ವಿದ್ಯಾರ್ಥಿಗಳನ್ನಾಗಿ ರೂಪಿಸುತ್ತಿದ್ದೇವೆ ಎಂದರು.
ದಿನೇ ದಿನೇ ಮಾನವೀಯತೆ ಮೌಲ್ಯಗಳು ಜನರಲ್ಲಿ ಕುಸಿಯುತ್ತಿದೆ. ದೇಶಸೇವೆ, ರಾಷ್ಟಭಕ್ತಿ, ಸೇವಾಮನೋಭಾವ ಉಳ್ಳ ವ್ಯಕ್ತಿಗಳು ರೂಪುಗೊಳ್ಳುತ್ತಿಲ್ಲ, ಎಲ್ಲವೂ ಕಾರ್ಪೋರೇಟ್ ಮನಸ್ಥಿತಿಯುಳ್ಳ ಸಮಾಜ ನಿರ್ಮಾಣವಾಗುತ್ತಿದೆ, ಮನುಷ್ಯತ್ವ ದೂರವಾಗುತ್ತಿದೆ ಎಂದು ವಿಷಾದಿಸಿದರು.ಕೋವಿಡ್-೧೯ರ ದಿನಗಳಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ತಂಡಗಳು, ವಿದ್ಯಾರ್ಥಿಗಳು ಜನಸೇವೆಗೆ ನಿಂತರು. ಪೊಲೀಸ್ ಇಲಾಖೆ, ವೈದ್ಯರಿಗೆ, ಜನರಿಗೆ ನೆರವು ನೀಡುವ ನಿಟ್ಟಿನಲ್ಲಿ ಮಾನವೀಯತೆ ಮೆರೆಯಿತು, ರಾಜ್ಯದಲ್ಲಿ ಸುಮಾರು ೫೦೦ ಯುನಿಟ್‌ಗಳು ಕರ್ತವ್ಯ ಸಲ್ಲಿಸಿದವು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಕಾರ್ಯದರ್ಶಿ ಗಂಗಪ್ಪಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸಿ.ಚಲುವಯ್ಯ, ಡಯಟ್ ಪ್ರಾಂಶುಪಾಲ ಯೋಗೇಶ್, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಜಿ.ಪಿ.ಭಕ್ತವತ್ಸಲ, ಜಿಲ್ಲಾ ಗೈಡ್ಸ್ ಆಯುಕ್ತೆ ಕೆ.ಸಿ.ನಾಗಮ್ಮ, ಜಿಲ್ಲಾ ಸ್ಕೌಟ್ಸ್ ಆಯುಕ್ತ ಅನಿಲ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಶಿವರಾಮೇಗೌಡ, ಜಿಲ್ಲಾ ಸಂಘಟಕರಾದ ಐಲಿನ್ ಸೌಮ್ಯಲತಾ, ಚಂದ್ರು, ಖಜಾಂಚಿ ಕೃಷ್ಣೇಗೌಡ, ಮಂಜುಳಾ, ಶಿವಕುಮಾರಿ, ಕೆ.ಜಿ.ಗೋಲಾಕೃಷ್ಣ, ವಿಷ್ಣುಪ್ರಸಾದ್,ಬೋರೇಗೌಡ, ಡಾ.ಕೆ.ಶಭಾನಾ, ಟಿ.ಕೆ.ನಾಗೇಶ್ ಮತ್ತು ಉಪನ್ಯಾಸಕರು ಹಾಜರಿದ್ದರು.