ವಿದ್ಯಾರ್ಥಿ ದಿಸೆಯಲ್ಲೇ ಶಿಸ್ತು ಕಲಿಸುವ ಸ್ಕೌಟ್ಸ್, ಗೈಡ್ಸ್: ಶಾಸಕ ಎಚ್‌.ಡಿ. ತಮ್ಮಯ್ಯ

KannadaprabhaNewsNetwork |  
Published : Sep 30, 2025, 12:00 AM IST
ಚಿಕ್ಕಮಗಳೂರಿನ ಸ್ಕೌಟ್ಸ್ ಭವನದಲ್ಲಿ ಸೋಮವಾರ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಆಯೋಜಿಸಿದ್ಧ ಎ. ಎಂ.ನಿಂಗೇಗೌಡ ಸ್ಮಾರಕ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದ ಕಟ್ಟಡ ಸಮುಚ್ಚಯದ ಭೂಮಿ ಪೂಜಾ ಸಮಾರಂಭವನ್ನು  ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಉದ್ಘಾಟಿಸಿದರು. ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ, ಪಿ.ಜಿ.ಆರ್‌. ಸಿಂಧ್ಯಾ, ಎ.ಎನ್‌. ಮಹೇಶ್‌ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ವಿದ್ಯಾರ್ಥಿದಿಸೆಯಲ್ಲಿ ಶಿಸ್ತು, ಜವಾಬ್ದಾರಿ, ಸೇವಾ ಮನೋಭಾವ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾಳಜಿ ತುಂಬಿ ಸಮಾಜದಲ್ಲಿ ಮಕ್ಕಳನ್ನು ಸತ್ಪ್ರಜೆಗಳಾಗಿಸುವ ಕಾರ್ಯ ಮಾಡುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

- ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದ ಕಟ್ಟಡ ಸಮುಚ್ಚಯದ ಭೂಮಿ ಪೂಜೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿದ್ಯಾರ್ಥಿದಿಸೆಯಲ್ಲಿ ಶಿಸ್ತು, ಜವಾಬ್ದಾರಿ, ಸೇವಾ ಮನೋಭಾವ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾಳಜಿ ತುಂಬಿ ಸಮಾಜದಲ್ಲಿ ಮಕ್ಕಳನ್ನು ಸತ್ಪ್ರಜೆಗಳಾಗಿಸುವ ಕಾರ್ಯ ಮಾಡುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಸ್ಕೌಟ್ಸ್ ಭವನದಲ್ಲಿ ಸೋಮವಾರ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಆಯೋಜಿಸಿದ್ಧ ಎ. ಎಂ.ನಿಂಗೇಗೌಡ ಸ್ಮಾರಕ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದ ಕಟ್ಟಡ ಸಮುಚ್ಚಯದ ಭೂಮಿ ಪೂಜಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಗತ್ತಿನ ಸುಮಾರು 200 ದೇಶಗಳಲ್ಲಿ ಸ್ಕೌಟ್ಸ್ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ಇದೇ ರೀತಿ ರಾಜ್ಯದಲ್ಲೂ ಸಿಂಧ್ಯಾರವರ ನೇತೃತ್ವದಲ್ಲಿ ಅಭೂತವಾಗಿ ಕಾರ್ಯ ಚಟುವಟಿಕೆ ನಡೆಸಲಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದ ಅವರು, ತುರ್ತು ಅಥವಾ ಅವಘಡ ವೇಳೆಯಲ್ಲಿ ಸ್ವಯಂಸೇವಕರಾಗಿ ದುಡಿಯುತ್ತಿರುವ ಸಂಸ್ಥೆ ಸಮಾಜಮುಖಿ ಚಿಂತನೆ ಹೊಂದಿದೆ ಎಂದರು.

ಜಿಲ್ಲೆಯ ಸ್ಕೌಟ್ಸ್ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಟೋಯೊಟಾ ಕಂಪನಿ ತನ್ನ ಸಿಎಸ್‌ಆರ್ ನಿಧಿಯಿಂದ ತರಬೇತಿ ಕೇಂದ್ರ ನಿರ್ಮಿಸಿರುವುದು ಖುಷಿ ವಿಷಯ. ಅದರಂತೆ ಜಿಲ್ಲಾ ಸಂಸ್ಥೆ ಎಲ್ಲಾ ಪದಾಧಿಕಾರಿಗಳು ಮಕ್ಕಳಲ್ಲಿ ರಾಷ್ಟ್ರ ಪ್ರೇಮ, ಸೇವಾ ಚಟುವಟಿಕೆಗಳ ಬಗ್ಗೆ ಮನದಟ್ಟು ಮಾಡಿ ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಕೆಲಸ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಜೀವನದ ಶಿಕ್ಷಣ, ಸಂಸ್ಕಾರದ ಗುಣವನ್ನು ಸ್ಕೌಟ್ಸ್ ಸಂಸ್ಥೆ ಅರಿವು ಮೂಡಿಸುತ್ತಿದೆ. ಮನೆಗೆ ಬೆಳಕು, ಗುರು ಹಿರಿಯರು, ಪಾಲಕರಿಗೆ ಹಾಗೂ ನಾಡು ನುಡಿ ಬಗ್ಗೆ ಗೌರವಿಸುವ ಪರಿಪಾಠವನ್ನು ಬೋಧಿಸಿ ಸಮಾಜದ ಒಳಿತಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಭವಿಷ್ಯದಲ್ಲಿ ಮಕ್ಕಳು ಸಾರ್ಥಕ ಜೀವನ ಹಾಗೂ ಶಿಸ್ತುಬದ್ಧ ಬದುಕಿಗಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ. ಮೊದಲೆಲ್ಲಾ ಅವಕಾಶ ಬಹಳಷ್ಟು ಕಡಿಮೆಯಿತ್ತು. ಸೂಕ್ತ ವ್ಯವಸ್ಥೆ ಸೌಲಭ್ಯವಿರಲಿಲ್ಲ. ಇದೀಗ ತರ ಬೇತಿ, ಕಾರ್ಯಾಗಾರ ಇನ್ನಿತರೆ ಚಟುವಟಿಕೆಗಳು ಉತ್ತಮ ಕಟ್ಟಡಗಳಲ್ಲಿ ನಿರ್ಮಿಸಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಸ್ಕೌಟ್ಸ್ ತರಬೇತಿಯನ್ನು ಕಾಲಕ್ಕೆ ತಕ್ಕಂತೆ ಬದಲಾವಣೆಗೊಳಿಸಿ, ಮೂಲತತ್ವ ಉಳಿಸಬೇಕು. ಹಾಗಾಗಿ ವಿಶೇಷವಾಗಿ ತರಬೇತಿಯಲ್ಲಿ ಪರಿಸರ ರಾಯಭಾರಿಗಳಾಗಿಸುವ ಕಾರ್ಯ ಮಾಡುತ್ತಿದೆ. ಮಕ್ಕಳು ಕೇವಲ ಪುಸ್ತಕದ ಓದಿನಲ್ಲಿ ಪರಿಸರ ಕಾಳಜಿ ತೋರದೇ ನೈಜ ಪರಿಸರ ಪ್ರೇಮಿಗಳಾಗಬೇಕು ಎಂದು ತಿಳಿಸಿದರು.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹತ್ತಾರು ಎಕರೆ ಪ್ರದೇಶದಲ್ಲಿ ತರಬೇತಿ ಕೇಂದ್ರ ಸ್ಥಾಪಿಸಿ ನೂರಾರು ಮಕ್ಕಳಿಗೆ ತರಬೇತಿ ಜೊತೆಗೆ ಉದ್ಯೋಗಕ್ಕೆ ಅನುಕೂಲವಾಗಲು ಶ್ರಮಿಸುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ನಾಲ್ಕು ಸಾವಿರ ಮಕ್ಕಳಿಗೆ ಅವಕಾಶ ಕಲ್ಪಿಸ ಲಾಗಿದ್ದು ಪ್ರತಿ ವಿದ್ಯಾರ್ಥಿಗೂ ತರಬೇತಿ ಜೊತೆಗೆ ಸೇವಾಭತ್ಯೆ ವಿತರಿಸಲಾಗುತ್ತದೆ ಎಂದು ಹೇಳಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ ಎ.ಎನ್.ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಸಂಸ್ಥೆ 1907 ರಲ್ಲಿ ಇಂಗ್ಲೇಡ್ ದೇಶದಲ್ಲಿ ಉಗಮಿಸಿತು. 1907 ರಲ್ಲಿ ಭಾರತದಲ್ಲಿ ಸ್ಥಾಪನೆಗೊಂಡು ವಿಸ್ತಾರಗೊಂಡಿತು. ನಂತರ 1975 ರಲ್ಲಿ 1.20 ಎಕರೆ ಪ್ರದೇಶವನ್ನು ಜಿಲ್ಲಾ ಸಂಸ್ಥೆಗೆ ಸರ್ಕಾರ ಕಲ್ಪಿಸಿಕೊಟ್ಟಿದ್ದು. ಇದೀಗ ಟೋಯೋಟಾ ಕಂಪನಿ ಸಿಎಸ್‌ಆರ್ ನಿಧಿಯಿಂದ ಕಟ್ಟಡ ಪೂರ್ಣಗೊಳಿಸಲು ಮುಂದಾಗುತ್ತಿದೆ ಎಂದರು.

ಟೋಯೋಟಾ ಕಂಪನಿ ಉದ್ಯಮದೊಂದಿಗೆ ತನ್ನ ಸಿಎಸ್‌ಆರ್ ನಿಧಿಯಿಂದ ಅನೇಕ ಶಾಲೆ, ಸಮುದಾಯ ಭವನಗಳಿಗೆ ಸಹಾಯಹಸ್ತ ಚಾಚಿ ಅಭಿವೃದ್ಧಿಗೊಳಿಸಿದೆ. ಪಿ.ಜಿ.ಆರ್.ಸಿಂಧ್ಯಾ ನೇತೃತ್ವದಲ್ಲಿ ₹110 ಕೋಟಿ ಅನುದಾನವನ್ನು ರಾಜ್ಯಕ್ಕೆ ತಂದು ಸ್ಕೌಟ್ಸ್ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಟೋಯೋಟಾ ಕಂಪನಿ ಉಪಾಧ್ಯಕ್ಷ ಎ.ರಮೇಶ್‌ರಾವ್, ಜನರಲ್ ಮ್ಯಾನೇಜರ್‌ಗಳಾದ ಆರ್.ರೋಷನ್, ಎಚ್.ಜೆ.ಕಿರಣ್, ಸಿಎಸ್‌ಆರ್ ಮ್ಯಾನೇಜರ್ ಈಶ್ವರ್‌ಬಾಬು, ಜಿಲ್ಲಾ ಆಯುಕ್ತ ಡಿ.ಎಸ್.ಮಮತಾ, ಕೋಶಾಧಿಕಾರಿ ಕೆ.ಎಸ್.ರಮೇಶ್, ಕಾರ್ಯದರ್ಶಿ ನೀಲಾಕಂಠಾಚಾರ್ಯ, ತರಬೇತಿ ಆಯುಕ್ತರಾದ ಸಿ. ಸಂಧ್ಯಾರಾಣಿ, ಎಂ.ವಿ.ಪ್ರತಿಮಾ , ಸಂಘಟಕ ಬಿ.ಎನ್.ಕಿರಣ್‌ಕುಮಾರ್ ಉಪಸ್ಥಿತರಿದ್ದರು. 29 ಕೆಸಿಕೆಎಂ 1ಚಿಕ್ಕಮಗಳೂರಿನ ಸ್ಕೌಟ್ಸ್ ಭವನದಲ್ಲಿ ಸೋಮವಾರ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಆಯೋಜಿಸಿದ್ಧ ಎ. ಎಂ. ನಿಂಗೇಗೌಡ ಸ್ಮಾರಕ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದ ಕಟ್ಟಡ ಸಮುಚ್ಚಯದ ಭೂಮಿ ಪೂಜಾ ಸಮಾರಂಭವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು. ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ, ಪಿ.ಜಿ.ಆರ್‌. ಸಿಂಧ್ಯಾ, ಎ.ಎನ್‌. ಮಹೇಶ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ