ಶಿಸ್ತು, ಸಂಯಮ, ಮೌಲ್ಯ ಬೆಳೆಸಲು ಸ್ಕೌಟ್ಸ್ ಗೈಡ್ಸ್‌ ಸಹಕಾರಿ: ಸಿಂಧ್ಯಾ

KannadaprabhaNewsNetwork | Published : Jun 26, 2024 12:36 AM

ಸಾರಾಂಶ

ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ , ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶಿಕ್ಷಕರಿಗೆ ಒಂದು ವಾರ ಕಾಲ ಏರ್ಪಡಿಸಿದ್ದ ಜಿಲ್ಲಾಮಟ್ಟದ ಮೂಲ ತರಬೇತಿ ಹಾಗೂ ಮುಂದುವರಿದ ತರಬೇತಿಯ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸ್ಕೌಟ್ಸ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಉತ್ತಮ ನಾಯಕತ್ವ ಗುಣ ಹಾಗೂ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಅವರಲ್ಲಿ ಭ್ರಾತೃತ್ವ ಬೆಳೆಸುವ ಮೂಲಕ ಸಮಾಜದ ಉತ್ತಮ ಹಾಗೂ ಜವಾಬ್ದಾರಿ ನಾಗರಿಕರನ್ನಾಗಿ ರೂಪಿಸಲು ಶ್ರಮಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಕರ್ನಾಟಕ ರಾಜ್ಯದ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಕರೆ ನೀಡಿದ್ದಾರೆ.

ತಾಲೂಕಿನ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ , ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶಿಕ್ಷಕರಿಗೆ ಒಂದು ವಾರ ಕಾಲ ಏರ್ಪಡಿಸಿದ್ದ ಜಿಲ್ಲಾಮಟ್ಟದ ಮೂಲ ತರಬೇತಿ ಹಾಗೂ ಮುಂದುವರಿದ ತರಬೇತಿಯ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸ್ಕೌಟಿಂಗ್ ಮತ್ತು ಗೈಡಿಂಗ್ ಯುವಜನರಿಗೆ ಸ್ವಯಂಪ್ರೇರಿತ ಶಿಸ್ತು, ಸಂಯಮ ಉತ್ತಮ ನಾಯಕತ್ವ ಬೆಳೆಸುವ ಹಾಗೂ ಭ್ರಾತೃತ್ವ ಮತ್ತು ಸೇವಾ ಮನೋಭಾವ ಬೆಳೆಸುವ ಶೈಕ್ಷಣಿಕ ಆಂದೋಲನವಾಗಿದೆ. ಇದು ಮೂಲ, ಜನಾಂಗ ಅಥವಾ ಧರ್ಮದ ಭೇದವಿಲ್ಲದೆ ಎಲ್ಲರಿಗೂ ಮುಕ್ತವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸ್ಕೌಟ್ಸ್, ಗೈಡ್ಸ್ ನ ಮೌಲ್ಯಗಳನ್ನು ಕಲಿಸುವ ಮೂಲಕ ಅವರಲ್ಲಿ ಉತ್ತಮ ನಾಗರಿಕ ಮೌಲ್ಯಗಳು, ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವುದರೊಂದಿಗೆ ಅವರನ್ನು ತುರ್ತು ಸಂದರ್ಭಗಳಲ್ಲಿ ತಮ್ಮನ್ನು ಸಾಹಸಮಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.

ಜಿಲ್ಲಾ ಸ್ಕೌಟ್ಸ್ ವಿಭಾಗದ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತನಾಡಿ, ತರಬೇತಿ ಪಡೆದ ಶಿಕ್ಷಕರು ತಮ್ಮ ಶಾಲಾ ಮಕ್ಕಳಲ್ಲಿ ಸ್ಕೌಟ್ಸ್ , ಗೈಡ್ಸ್ ನ ಧ್ಯೇಯೋದ್ದೇಶಗಳ ಬಗ್ಗೆ ಅರಿವು ಮೂಡಿಸಿ ಅವರಲ್ಲಿ ಜೀವನ ಕೌಶಲ್ಯ ಹಾಗೂ ಉತ್ತಮ ನಾಯಕತ್ವ ಬೆಳೆಸಲು ವಿಶೇಷ ಗಮನಹರಿಸಬೇಕು ಎಂದರು.

ಸಂಸ್ಥೆಯ ಸ್ಥಾನೀಕ ಆಯುಕ್ತ ಜಿಲ್ಲಾ ಗೈಡ್ಸ್ ಸಂಸ್ಥೆಯ ಆಯುಕ್ತೆ ಪದ್ಮಶ್ರೀ ಪುರಸ್ಕೃತ ರಾಣಿ ಮಾಚಯ್ಯ, ಸ್ಥಾನಿಕ ಆಯುಕ್ತ ಎಚ್.ಆರ್.ಮುತ್ತಪ್ಪ, ಸಹ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಗೈಡ್ಸ್ನ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನ, ಸಂಸ್ಥೆಯ ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ ,ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಅಲೀಮ, ಮೈಥಿಲಿರಾವ್, ಉಷಾರಾಣಿ, ಶಿವಶಂಕರಪ್ಪ, ಟಿ.ಬಿ.ಕುಮಾರಸ್ವಾಮಿ, ಕೆ.ಯು.ರಂಜಿತ್, ವಾಮನ, ಭೋಜಮ್ಮ, ವೀಣಾ, ಗಣೇಶ್, ಭೀಮಯ್ಯ, ಗ್ರಾ.ಪಂ.ಸದಸ್ಯ ಡೀನ್ ಬೋಪಣ್ಣ, ಸಂಪಾಜೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ. ಧನಂಜಯ, ಇತರರು ಇದರು.

ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಅವರನ್ನು .ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಅಭಿನಂದಿಸಿದರು. ಮೆಚ್ಚುಗೆ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯು ಗುಣಾತ್ಮಕ ಫಲಿತಾಂಶ ಗಳಿಸುವ ಮೂಲಕ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿರುವುದನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಕರ್ನಾಟಕ ರಾಜ್ಯದ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಶ್ಲಾಘಿಸಿದ್ದಾರೆ.

Share this article