ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಟು ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಸ ಮಾಡಿದ್ದೇನೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಮೀಸಲಾತಿ ಹಕ್ಕು ನೀಡಿದ್ದಾರೆ. ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದುವರೆದಿರುವ ಜನಾಂಗಕ್ಕೆ ದೇಶದ ಪ್ರಧಾನಿ ಮೋದಿ ತರಾತುರಿಯಲ್ಲಿ ಶೇ.10ರಷ್ಟು ಮೀಸಲಾತಿ ನೀಡಿದರು. ರಾಜ್ಯದಲ್ಲಿ 50 ಲಕ್ಷದಷ್ಟು ನಾಯಕ ಸಮಾಜದವರಿದ್ದಾರೆ. 1.25ಕೋಟಿ ಪರಿಶಿಷ್ಟ ಜಾತಿಯವರಿದ್ದಾರೆ. ಎರಡು ಕಾಲು ಕೋಟಿ ಓಬಿಸಿಗಳಿದ್ದಾರೆ. ಕುಲಶಾಸ್ತ್ರ ಅಧ್ಯಯನದ ಪ್ರಕಾರ ಯಾರ್ಯಾರೂ ಅರ್ಹರಿದ್ದಾರೋ ಅವರನ್ನೆಲ್ಲಾ ಪರಿಶಿಷ್ಟ ವರ್ಗಕ್ಕೆ ಸೇರಿಸಲಿ. ನಮ್ಮದೇನು ಅಭ್ಯಂತರವಿಲ್ಲ ಎಂದರು.
ರಾಜಕಾರಣಿಗಳು ಶೋಷಿತರನ್ನು ಮತ ಬ್ಯಾಂಕಾಗಿ ಮಾಡಿಕೊಂಡು ಚೆಲ್ಲಾಟವಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಮೀಸಲಾತಿ ಶೇ.50ಕ್ಕಿಂತ ಜಾಸ್ತಿಯಾಗಬಾರದೆಂದು ಸೂಚಿಸಿದೆ.ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿ ಜಾರಿಯಲ್ಲಿದೆ. ರಾಜ್ಯ ಸರ್ಕಾರ ಅಕ್ಟೋಬರ್ 23-2022 ರಂದು ಜಸ್ಟಿಸ್ ನಾಗಮೋಹನ್ ದಾಸ್ ವರದಿ ಮೇಲೆ ಕಾನೂನು ಮಾಡಿರುವುದರಿಂದ ಶೋಷಿತ ಸಮುದಾಯಗಳಿಗೆ ನ್ಯಾಯ ಸಿಗುವುದಿಲ್ಲ. ಹಿಂದುಗಳು ನಾವೆಲ್ಲಾ ಒಂದು ಎಂದು ಹೇಳಿಕೊಳ್ಳುತ್ತಿರುವ ಪ್ರಧಾನಿ ಮೋದಿರವರು ಈ ಸಮಾಜಗಳಿಗೆ ಏಕೆ ನ್ಯಾಯ ಕೊಡುತ್ತಿಲ್ಲ.
ಆಲ್ ಪಾರ್ಟಿ ಶೆಡ್ಯೂಲ್ ಮೋದಿ ಬಳಿ ಹೋಗಿ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನಿಗಧಿತ ಗಡುವಿನಲ್ಲಿ ಪ್ರಧಾನಿ ಮೋದಿ ಬಳಿ ನಿಯೋಗ ಹೋಗಿ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಲಿ. ಇನ್ನು ನಮ್ಮ ತಾಳ್ಮೆಯನ್ನು ಕೆಣಕಿದರೆ ಸುಮ್ಮನಿರಲ್ಲ. ಎಂ.ಆರ್.ನಾಯಕ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಬಹಿರಂಗಪಡಿಸಿ ಎಸ್‌ಸಿಪಿ, ಟಿಎಸ್‌ಪಿ ಹಣ 4 ಲಕ್ಷ 40 ಸಾವಿರ ಕೋಟಿ ರು. ಬಜೆಟ್‍ನಲ್ಲಿ ಶೇ.7ರಷ್ಟು ಎಸ್‌ಟಿಗಳಿಗೆ, 14 ಸಾವಿರ ಕೋಟಿ ರು. ಪರಿಶಿಷ್ಟ ಜಾತಿಗೆ, 35 ಸಾವಿರ ಕೋಟಿ ರು. ಹಿಂದುಳಿದ ವರ್ಗಗಳಿಗೆ ನೀಡಬೇಕು. ಎಸ್‌ಸಿ, ಎಸ್‌ಟಿಗಳ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಬಾರದು. ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಮುಂದಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮಠಗಳಿಗೆ ಪ್ರತಿವರ್ಷ 5 ಕೋಟಿ ರು. ಅನುದಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.ನಮ್ಮ ಸಮುದಾಯದಿಂದ ಗೆದ್ದು ಹೋಗಿರುವ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರಾದ ಏಕೆ ಮಾತನಾಡುತ್ತಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರು. ಅವ್ಯವಹಾರವಾಗಿದೆ. ಕೆಡುಕುಂಟು ಮಾಡುವವರ ವಿರುದ್ಧ ಈಗಲಾದರೂ ಧ್ವನಿ ಎತ್ತದಿದ್ದರೆ ರಾಜ್ಯಾದ್ಯಂತ ಹೋರಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಂಪತ್‍ಕುಮಾರ್, ನರಸಿಂಹಯ್ಯ, ರಾಜಣ್ಣ, ವೇಣುಗೋಪಾಲ ನಾಯಕ, ಆನಂದ, ಡಾ.ಮಂಜುಳ, ಜಯಶ್ರಿ ಗುಡ್ಡೆಕಾಯಿ ಉಪಸ್ಥಿತರಿದ್ದರು.