ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್‌ಗೆ ಎಸ್‌ಡಿಪಿಐ ಒತ್ತಾಯ

KannadaprabhaNewsNetwork | Published : Mar 7, 2025 12:48 AM

ಸಾರಾಂಶ

ಕಲ್ಯಾಣ ರಾಜ್ಯಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.7ರಂದು ಜನತಾ ಬಜೆಟ್‌-2025 ಮಂಡಿಸಬೇಕು ಎಂದು ಪಕ್ಷದ ವತಿಯಿಂದ ಪುಸ್ತಕ ಸಮೇತ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ ಒತ್ತಾಯಿಸಿದೆ.

- ಹೆಗಡೆ ನಗರ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಲು ವಿಶೇಷ ಅನುದಾನಕ್ಕೆ ಆಗ್ರಹ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕಲ್ಯಾಣ ರಾಜ್ಯಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.7ರಂದು ಜನತಾ ಬಜೆಟ್‌-2025 ಮಂಡಿಸಬೇಕು ಎಂದು ಪಕ್ಷದ ವತಿಯಿಂದ ಪುಸ್ತಕ ಸಮೇತ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ ಒತ್ತಾಯಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಆರ್‌. ತಾಹೀರ್‌, ರಾಜ್ಯದ 7 ಕೋಟಿ ಜನರ ಅಗತ್ಯತೆ, ಪರಿಸ್ಥಿತಿ ಅವಲೋಕನ ಮಾಡಿ, ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್ ಎಂಬ ಬೇಡಿಕೆಗಳನ್ನು ಒಳಗೊಂಡ ಪುಸ್ತಕವನ್ನು ಎಸ್‌ಡಿಪಿಐ ಪ್ರಕಟಿಸಿದೆ. ಆ ಬೇಡಿಕೆಗಳನ್ನೇ ಬಜೆಟ್‌ನಲ್ಲಿ ಈಡೇರಿಸುವಂತೆ ಫೆ.19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜನಾಗ್ರಹ ಸಭೆ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದರು.

ಸಿಎಂ ಪ್ರತಿನಿಧಿಯಾಗಿ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್‌ ಸ್ಥಳಕ್ಕೆ ಭೇಟಿ ನೀಡಿ, ಮನವಿ ಸ್ವೀಕರಿಸಿದ್ದರು. ಎಸ್‌ಡಿಪಿಐ ತಯಾರಿಸಿರುವ ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್ ಬಗ್ಗೆ ಸ್ವತಃ ಜಮೀರ್ ಅಹಮ್ಮದ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರಲ್ಲಿರುವ ಅಂಶಗಳ ಬಗ್ಗೆ ಸಿಎಂ ಜೊತೆಗೆ ಚರ್ಚಿಸಿ, ಅನುಷ್ಠಾನಗೊಳಿಸಲು ಪ್ರಯತ್ನಿಸುವ ಭರವಸೆ ನೀಡಿದ್ದರು ಎಂದು ತಿಳಿಸಿದರು.

ನಾಡಿನ ಜಾತ್ಯತೀತ ಪಕ್ಷಗಳ ಶಾಸಕರು ಮತ್ತು ವಿಧಾನ ಪರಿಷತ್ತು ಸದಸ್ಯರನ್ನು ಎಸ್‌ಡಿಪಿಐ ಮುಖಂಡರು ಭೇಟಿ ಮಾಡಿ, ಪಕ್ಷದ ಜನತಾ ಬಜೆಟ್‌ನ ಪ್ರತಿ ನೀಡಿ, ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸಿ, ಅನುಷ್ಠಾನಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದ್ದರು. ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಭೇಟಿ ಮಾಡಿ, ದಾವಣಗೆರೆಯ ಕಲ್ಯಾಣಕ್ಕಾಗಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸುವಂತೆ ಸಿಎಂ ಮೇಲೆ ಒತ್ತಡ ಹೇರಲು ಆಗ್ರಹಿಸಿದ್ದರು ಎಂದು ಮಾಹಿತಿ ನೀಡಿದರು.

ದಾವಣಗೆರೆ ಹೆಗ್ಡೆ ನಗರದ ನಿವಾಸಿಗಳಿಗೆ ವರ್ತುಲ ರಸ್ತೆಯಿಂದ ಸ್ಥಳಾಂತರ ಮಾಡಲಾಗಿತ್ತು. ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಚುನಾವಣೆ ಪೂರ್ವದಲ್ಲಿ ತಾವೇ ಭರವಸೆ ನೀಡಿದ್ದಂತೆ ಹೆಗಡೆ ನಗರದಿಂದ ಸ್ಥಳಾಂತರಗೊಂಡ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಲು ಬಜೆಟ್‌ನಲ್ಲಿ ವಿಶೇಷ ಅನುದಾನ ತಂದು, ಬಡವರ ಸಂಕಷ್ಟಕ್ಕೆ ಅಂತ್ಯ ಹಾಡಬೇಕು ಎಂದು ಮನವಿ ಮಾಡಿದರು.

ಪಕ್ಷದ ಜಿಲ್ಲಾಧ್ಯಕ್ಷ ರಜ್ವಿ ರಿಯಾಜ್ ಅಹಮ್ಮದ್‌, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್, ಹರಿಹರ ಅಧ್ಯಕ್ಷ ಸಮೀವುಲ್ಲಾ ಮುಲ್ಲಾ ಇತರರು ಇದ್ದರು.

- - - -6ಕೆಡಿವಿಜಿ61.ಜೆಪಿಜಿ:

ದಾವಣಗೆರೆಯಲ್ಲಿ ಗುರುವಾರ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಆರ್.ತಾಹೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article