ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪಟ್ಟಣದ ಸೋಮವಾರಪೇಟೆ ಬಳಿಯಿಂದ ಗುಂಡ್ಲುಪೇಟೆ, ಮೈಸೂರು ಮತ್ತು ಕೊಳ್ಳೇಗಾಲ ರಸ್ತೆಗೆ ಸೇರುವ ಗಾಳೀಪುರ ಬಡಾವಣೆಯ ಹತ್ತಿರದಿಂದ ಹೋಗುವ ರಿಂಗ್ ರಸ್ತೆಯಲ್ಲಿ ಅಂಡರ್ ಪಾಸ್ ನಿರ್ಮಾಣ ಮತ್ತು ಡಿವೈಡರ್‌ಗಾಗಿ ಒತ್ತಾಯಿಸಿ ಸೋಮವಾರ ಎಸ್‌ಡಿಪಿಐ ಪ್ರತಿಭಟನೆ ನಡೆಸಲಾಯಿತು.ಗಾಳೀಪುರ ಬಡಾವಣೆಯ ಮೂವರು ಬಾಲಕರನ್ನು ಬಲಿ ತೆಗೆದುಕೊಂಡ ಸ್ಥಳದಲ್ಲಿ ಜಮಾಯಿಸಿದ ಎಸ್‌ಡಿಪಿಐ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಜನಪ್ರತಿಧಿಗಳು ಮತ್ತು ಎನ್‌ಎಚ್ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಅಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದಾಗಿ ಈ ರಸ್ತೆಯಲ್ಲಿ 15ಕ್ಕೂ ಹೆಚ್ಚು ಜನರು ಮತಪಟ್ಟಿದ್ದು, ಸೆ. 6ರಂದು ನಡೆದ ಲಾರಿ ಮತ್ತು ಕಾರಿನ ಮದ್ಯೆ ದ್ವಿಚಕ್ರ ವಾಹನದ ಅಪಘಾತದಲ್ಲಿ ಮೂವರು ಅಮಾಯಕ ಬಾಲಕರು ಬಲಿಯಾಗಿ ಒಬ್ಬ ಬಾಲಕ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದರು.ಈ ದುರಂತದಿಂದ ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡು ಪಡುತ್ತಿರುವ ಸಂಕಷ್ಟ ಹೇಳತೀರದು. ಈ ರಿಂಗ್ ರಸ್ತೆಯ ಪಕ್ಕದಲ್ಲಿ ಅತಿ ಹೆಚ್ಚು ಜನಸಾಂದ್ರತೆ ಇರುವ ಗಾಳೀಪುರ ಬಡಾವಣೆ ಇದೆ. ಇಲ್ಲಿಯ ಜನ ಈ ರಿಂಗ್ ರಸ್ತೆಯಲ್ಲಿ ಓಡಾಡುವುದು ಸಾಮಾನ್ಯವಾಗಿದೆ, ರಸ್ತೆ ನಿರ್ಮಾಣಕ್ಕೂ ಮೊದಲೇ ಇಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದೆವು, ನಮ್ಮ ಮನವಿಯನ್ನು ಪುರಸ್ಕರಿಸದೇ ಇದ್ದುದರಿಂಲೇ ಈ ಅವಘಡ ಸಂಭವಿಸಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.ಈ ರಿಂಗ್ ರಸ್ತೆಯ ಪಕ್ಕದಲ್ಲಿರುವ ಕರಿವರದರಾಜಸ್ವಾಮಿ ಬೆಟ್ಟಕ್ಕೆ ವಾಯುವಿಹಾರಕ್ಕೆ ಈ ಬಡಾವಣೆಯ ನಿವಾಸಿಗಳಲ್ಲದೇ, ನಗರದ ಇನ್ನಿತರ ವಾರ್ಡಿನ ಜನ, ರೈತರು ಸಹ ಹೋಗಿ ಬರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ನಗರಸಭಾ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಸಾಗಿಸುವ ನಗರಸಭೆಯ ಕಸವಿಲೇವಾರಿ ವಾಹನಗಳು ಸಹ ಇದೇ ರಸ್ತೆಯಲ್ಲಿ ಹಾದು ಹೋಗುತ್ತವೆ ಇದ್ಯಾವುದನ್ನು ಪರಿಗಣಿಸದೇ ಜನಪತ್ರಿನಿಧಿಗಳು, ಅಧಿಕಾರಿಗಳು ಗುತ್ತಿಗೆದಾರರಿಗೆ ಬಿಲ್ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.ಗಾಳೀಪುರ ಮುಖ್ಯ ರಸ್ತೆಯಿಂದ ಹಾದು ಹೋಗಿ ರಿಂಗ್ ರೋಡ್ ದಾಟಬೇಕಾಗುತ್ತದೆ. ಈ ಪ್ರಕ್ರಿಯೆ ಬಹಳ ಕ್ಲಿಷ್ಟಕರವಾಗಿದೆ. ಆದ್ದರಿಂದ ನಿರ್ದಿಷ್ಟ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಿಸಬೇಕು ಹಾಗೂ ಸೋಮವಾರಪೇಟೆ ಕ್ರಾಸ್‌ಯಿಂದ ಗುಂಡ್ಲುಪೇಟೆ ಮುಖ್ಯ ರಸ್ತೆಗೆ ಸೇರುವ ಹಂತದವರೆಗೂ ರಿಂಗ್ ರೋಡ್ ಮಧ್ಯೆ ಡಿವೈಡರ್ ಹಾಕಿಸಬೇಕು ಎಂದರು.ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಿ ಈ ಎರಡು ಬೇಡಿಕೆಗಳು ಜನತೆಯ ಸುರಕ್ಷತೆಗೆ ಬಹಳ ಮುಖ್ಯವಾಗಿರುವುದರಿಂದ ತಕ್ಷಣಕ್ಕೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ನಾವೇ ಜೆಸಿಬಿ ತಂದು ರಸ್ತೆಯನ್ನು ಅಗೆಯುತ್ತೇವೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಖಲೀಲ್ ಉಲ್ಲಾ, ಪ್ರದಾನ ಕಾರ್ಯದರ್ಶಿ ಮಹೇಶ್, ಉಪಾಧ್ಯಕ್ಷ ನಯಾಜ್‌ವುಲ್ಲಾ, ಮಾಜಿ ಅಧ್ಯಕ್ಷ ಅರೀಪ್, ನಸ್ರುಲ್ಲಾ, ಜಬೀನೂರ್, ಸುಹೇಲ್ ಪಾಷಾ, ಸೈಯದ್ ಇರ್ಪಾನ್, ಮುಖಂಡರಾದ ಪ್ರಭಾಕರ್, ಮಹದೇವಯ್ಯ, ಮಹೇಂದ್ರ, ಮೃತ ಬಾಲಕರ ಸಂಬಂಧಿಗಳು, ಮಹಿಳೆಯರು ಇತರರು ಭಾಗವಹಿಸಿದ್ದರು.೮ಸಿಎಚ್‌ಎನ್೧
ಚಾಮರಾಜನಗರದ ಗಾಳೀಪುರ ಬಡಾವಣೆಯ ಹತ್ತಿರದಿಂದ ಹೋಗುವ ರಿಂಗ್ ರಸ್ತೆಯಲ್ಲಿ ಅಂಡರ್ ಪಾಸ್ ನಿರ್ಮಾಣ ಮತ್ತು ಡಿವೈಡರ್‌ಗಾಗಿ ಒತ್ತಾಯಿಸಿ ಸೋಮವಾರ ಎಸ್‌ಡಿಪಿಐ ಪ್ರತಿಭಟನೆ ನಡೆಸಲಾಯಿತು.