ಕನ್ನಡಪ್ರಭ ವಾರ್ತೆ ಕೊಪ್ಪಳ
ಸಂಗನಾಳ ಗ್ರಾಮದಲ್ಲಿ ಕ್ಷೌರ ಮಾಡಿಸಿಕೊಳ್ಳಲು ಹೋಗಿದ್ದ ದಲಿತ ಯುವಕನನ್ನು ಕೊಲೆ ಮಾಡಿರುವ ಘಟನೆ ಖಂಡಿಸಿ ನಗರದ ಅಶೋಕ ವೃತ್ತದಲ್ಲಿ ಎಸ್‌ಡಿಪಿಐ ಪ್ರತಿಭಟನೆ ನಡೆಸಿತು.ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸಲೀಮ್ ಖಾದ್ರಿ ಮಾತನಾಡಿ, ಈ ಕೊಲೆ ನ್ಯಾಯವೇ? ಈ ಕೊಲೆಗೆ ಕಾರಣವಾದವರು ನಾಗರಿಕ ಸಮಾಜದಲ್ಲಿ ಬದುಕಲು ಅರ್ಹರೇ?, ಭಾರತದಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆ, ಜಾತೀಯತೆ ಮತೀಯವಾದ, ಕೋಮುವಾದ, ಮೇಲು-ಕೀಳಿನ ತಾರತಮ್ಯ ಇರುವುದು ಖಂಡನೀಯ ಎಂದರು.
ಭಾರತ ಸಂವಿಧಾನದ ಅನುಚ್ಚೇದ 17 ಇಡೀ ಭಾರತದಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಿದೆ. ಕೊಪ್ಪಳ ಮಾತ್ರವಲ್ಲದೇ ರಾಜ್ಯದ ಇನ್ನೂ ಅನೇಕ ಕಡೆಗಳಲ್ಲಿ ದಲಿತರಿಗೆ ದೇಗುಲ ಪ್ರವೇಶ, ಕ್ಷೌರ ನಿಷಿದ್ಧ ಪದ್ಧತಿ ಆಚರಣೆ, ಹೋಟೆಲ್‌ಗೆ ನಿರಾಕರಣೆ ಪದ್ದತಿ ಇದ್ದು, ಮಾತೆತ್ತಿದರೆ ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂದು ಬೀದಿಯಲ್ಲಿ ಅರಚಾಡುವ ಮಂದಿ ರಾಜ್ಯದಲ್ಲಿ ನಡೆಯುತ್ತಿರುವ ಅಸ್ಪೃಶ್ಯತಾ ಆಚರಣೆ ಕುರಿತು ಬಾಯಿಗೆ ಬೀಗ ಹಾಕಿ ಕೂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಯಮನೂರಪ್ಪ ಕೊಲೆಗೆ ಜಿಲ್ಲಾಧಿಕಾರಿ ಮತ್ತು ಎಸ್ಪಿಯನ್ನೇ ಹೊಣೆ ಮಾಡಬೇಕು ಮತ್ತು ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಎಸ್‌ಡಿಪಿಐ ಮಾಜಿ ಜಿಲ್ಲಾ ಅಧ್ಯಕ್ಷ ಹುಜೂರ್ ಅಹ್ಮದ್ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮಹಮ್ಮದ್ ಸಾಧಿಕ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಜಾಮುದ್ದೀನ್ ಮಾಳೇಕಪ್, ಕೊಪ್ಪಳ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಅರ್ಷದ್ ಶೇಖ್, ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಫಾರೂಕ್ ಅತ್ತಾರ ಮೊದಲಾದವರು ಇದ್ದರು.ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಮನವಿ:
ದಲಿತ ಯುವಕನಿಗೆ ಕ್ಷೌರ ಮಾಡಲು ನಿರಾಕರಿಸಿ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಯುವಕನ ಕುಟುಂಬಕ್ಕೆ ₹೫೦ ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ಕಲ್ಯಾಣ ಕನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಯಲಬುರ್ಗಾದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.ಸಮಿತಿ ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ಮಾತನಾಡಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ೭೮ ವರ್ಷ ಗತಿಸಿದರೂ ಸಹ ಇನ್ನೂ ಇಂತಹ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಕೂಡಲೇ ಸರ್ಕಾರ ದಲಿತ ಸಮುದಾಯಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಜಿಲ್ಲೆ, ತಾಲೂಕು, ಗ್ರಾಮಗಳ ಹೋಟೆಲ್, ಕ್ಷೌರದಂಗಡಿ, ದೇವಸ್ಥಾನಗಳಲ್ಲಿ ಮುಕ್ತ ಅವಕಾಶ ನೀಡುವಂತೆ ಜಿಲ್ಲಾ ಹಾಗೂ ತಾಲೂಕಾಡಳಿತ ಹೆಚ್ಚಿನ ಮುತುವರ್ಜಿ ವಹಿಸಬೇಕು. ಪೊಲೀಸ್ ಇಲಾಖೆಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭ ಜಿಲ್ಲಾಧ್ಯಕ್ಷ ರಮೇಶ ಅಂಗಡಿ, ಪದಾಧಿಕಾರಿಗಳಾದ ಸುಮಿತ್ರಾ, ಮಂಜುನಾಥ ಬಡಿಗೇರ, ಹನುಮಂತರಡ್ಡಿ, ಮರಿಸ್ವಾಮಿ, ನಾಗರಾಜ ಯಡಿಯಾಪೂರ ಮತ್ತಿತರರಿದ್ದರು.