ಎಸ್‌ಡಿಪಿಐನ ಬೆಳಗಾವಿ ಚಲೋಗೆ ಆರಂಭದಲ್ಲಿಯೇ ವಿಘ್ನ!

KannadaprabhaNewsNetwork |  
Published : Dec 11, 2024, 12:45 AM IST
10ಜೋಡುಕಟ್ಟೆ | Kannada Prabha

ಸಾರಾಂಶ

ಸೋಶಿಯಲ್ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಡುಪಿಯಿಂದ ಆರಂಭಿಸಲಿದ್ದ ಬೆಳಗಾವಿ ಚಲೋಗೆ ಆರಂಭದಲ್ಲಿಯೇ ಪೊಲೀಸರಿಂದ ವಿಘ್ನ ಎದುರಾಗಿದೆ. ಉಡುಪಿಯಿಂದ ಮಂಗಳವಾರ ಈ ಚಲೋ ಆರಂಭಿಸಲು ಪೊಲೀಸ್ ಅನುಮತಿ ನೀಡದೇ ಗೊಂದಲಕ್ಕೆ ಕಾರಣವಾಯಿತು. ಕೊನೆಗೆ ಅಧಿಕೃತವಾಗಿ ಚಲೋ ಕಾರ್ಯಕ್ರಮ ಆರಂಭವಾಗಲಿಲ್ಲ.

ಜಾಥಾಕ್ಕೆ ಅನುಮತಿ ನೀಡದ ಪೊಲೀಸರು

ಕನ್ನಡಪ್ರಭ ವಾರ್ತೆ ಉಡುಪಿಸೋಶಿಯಲ್ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಡುಪಿಯಿಂದ ಆರಂಭಿಸಲಿದ್ದ ಬೆಳಗಾವಿ ಚಲೋಗೆ ಆರಂಭದಲ್ಲಿಯೇ ಪೊಲೀಸರಿಂದ ವಿಘ್ನ ಎದುರಾಗಿದೆ. ಉಡುಪಿಯಿಂದ ಮಂಗಳವಾರ ಈ ಚಲೋ ಆರಂಭಿಸಲು ಪೊಲೀಸ್ ಅನುಮತಿ ನೀಡದೇ ಗೊಂದಲಕ್ಕೆ ಕಾರಣವಾಯಿತು. ಕೊನೆಗೆ ಅಧಿಕೃತವಾಗಿ ಚಲೋ ಕಾರ್ಯಕ್ರಮ ಆರಂಭವಾಗಲಿಲ್ಲ.ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಎಸ್ಸಿಎಸ್ಟಿ, ದಲಿತರ, ಅಲ್ಪಸಂಖ್ಯಾತರಿಗೆ ನೀಡಿದ್ದ ಭರವಸೆಗಳನ್ನು ಇನ್ನೂ ಈಡೇರಿಸದೇ ಯೂಟರ್ನ್‌ ಹೊಡೆದಿದೆ ಎಂದು ಆರೋಪಿಸಿ ಎಸ್‌ಡಿಪಿಐ ನಾಯಕರು ಉಡುಪಿಯಿಂದ ಬೆಳಗಾವಿ ಚಲೋ ಆಂಬೇಡ್ಕರ್‌ ಜಾಥಾ -2ನ್ನು ಆಯೋಜಿಸಿದ್ದರು. 6 ದಿನಗಳ ಕಾಲ 11 ಜಿಲ್ಲೆಗಳನ್ನು ಕ್ರಮಿಸಿ ಅಧಿವೇಶನ ನಡೆಯುತ್ತಿರುವ ಬೆಳಗಾವಿಗೆ ತೆರಳಿ ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಈ ರಾಜ್ಯಮಟ್ಟದ ಜಾಥಾ ಆಯೋಜಿಸಲಾಗಿತ್ತು.

ಆದರೆ ಉಡುಪಿಯ ಪೊಲೀಸ್ ಇಲಾಖೆ ಈ ಜಾಥಾಕ್ಕೆ ಅನುಮತಿ ನೀಡಿರಲಿಲ್ಲ. ಇದರಿಂದ ಆಕ್ರೋಶಿತರಾದ ಎಸ್‌ಡಿಪಿಐ ರಾಜ್ಯ ನಾಯಕರಾದ ಭಾಸ್ಕರ ಪ್ರಸಾದ್, ಅಪ್ಸರ್ ಕೋಡ್ಲಿ ಅವರು ಸೋಮವಾರ ಸುದ್ದಿಗೋಷ್ಟಿಯಲ್ಲಿ ಉಡುಪಿ ಎಸ್ಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ಜಾಥಾ ನಡೆಸಲು ಅವಕಾಶ ನೀಡದಿದ್ದಲ್ಲಿ ಎಲ್ಲಾ 11 ಜಿಲ್ಲೆಯ ಕಾರ್ಯಕರ್ತರನ್ನು ಉಡುಪಿಗೆ ಕರೆಸಿ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಸವಾಲು ಹಾಕಿದ್ದರು.ಈ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಈ ಎಸ್‌ಡಿಪಿಐ ನಾಯಕರ ಮೇಲೆ ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗ, ಜನರನ್ನು ಸೇರಿಸಿ ಅಪರಾಧಿ ಕೃತ್ಯ ನಡೆಸಲು ಪ್ರೇರಣೆ ನೀಡಿದ್ದಾರೆ ಎಂದು 2 ಪ್ರತ್ಯೇಕ ಸಮೋಟೋ ಪ್ರಕರಣಗಳನ್ನು ದಾಖಲಿಸಿದ್ದಾರೆ.ಇವು ಜಾಮೀನು ರಹಿತ ಪ್ರಕರಣಗಳಾದ್ದರಿಂದ ಎಸ್‌ಡಿಪಿಐ ನಾಯಕರು ಬಂಧನದ ಭೀತಿಯಿಂದ ಮಂಗಳವಾರ ಬೆಳಗ್ಗೆ 10.30ಕ್ಕೆ ಜಾಥಾ ಆರಂಭವಾಗಬೇಕಾಗಿದ್ದ ನಗರದ ಜೋಡುಕಟ್ಟೆಗೆ ಬರಲೇ ಇಲ್ಲ. ಜೋಡುಕಟ್ಟೆಯಲ್ಲಿ ಮುಂಜಾಗರೂಕ ಕ್ರಮವಾಗಿ ನೂರಾರು ಮಂದಿ ಪೊಲೀಸರ ನಿಯೋಜನೆ ಮಾಡಲಾಗಿತ್ತು.ಆದರೆ ಎಸ್‌ಡಿಪಿಐ ಪಕ್ಷದ ನಾಯಕರು, ಕಾರ್ಯಕರ್ತರು ಬಾರದೇ ಜೋಡುಕಟ್ಟೆಯಲ್ಲಿ 12 ಗಂಟೆ ವರೆಗೆ ಪೊಲೀಸರು, ಪತ್ರಕರ್ತರು ಕಾದುಕಾದು ಸುಸ್ತಾಗಿ ಹಿಂತೆರಳಿದರು. ಆರಂಭದಲ್ಲಿ ಈಗ ಬರುತ್ತೇವೆ, ಇನ್ನರ್ಧ ಗಂಟೆಯಲ್ಲಿ ಬರುತ್ತೇವೆ ಎನ್ನುತ್ತಿದ್ದ ಎಸ್‌ಡಿಪಿಐ ನಾಯಕರು ನಂತರ ಸಂಪರ್ಕಕ್ಕೆ ಸಿಗಲಿಲ್ಲ!

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ