ಆಸ್ತಿ ಕರ ಪಾವತಿಸಲು ಬಂದವರಿಗೆ ಆಸನ, ನೆರಳಿನ ವ್ಯವಸ್ಥೆ

KannadaprabhaNewsNetwork | Published : Apr 9, 2024 12:46 AM

ಸಾರಾಂಶ

ಗದಗ ಬೆಟಗೇರಿ ನಗರಸಭೆ ೨೦೨೪-೨೫ನೇ ಸಾಲಿನ ಆಸ್ತಿ ತೆರಿಗೆ ತುಂಬಲು ಏ. ೧ರಿಂದ ೩೦ರ ವರೆಗೆ ಶೇ. ೫ ರಿಯಾಯಿತಿ ನೀಡಿದ್ದು, ತೆರಿಗೆ ಪಾವತಿಸಲು ಬರುವವರಿಗೆ ಆಸನ, ನೆರಳಿನ ವ್ಯವಸ್ಥೆ ಮಾಡಲಾಗಿದೆ.

ಮಹೇಶ ಛಬ್ಬಿ

ಗದಗ: ಗದಗ-ಬೆಟಗೇರಿ ನಗರಸಭೆಯು ಆಸ್ತಿ ಕರ ಪಾವತಿಸಲು ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಹಾಗೂ ನೆರಳಿನ ವ್ಯವಸ್ಥೆ ಕಲ್ಪಿಸಿದೆ.

೨೦೨೪-೨೫ನೇ ಸಾಲಿನ ಆಸ್ತಿ ತೆರಿಗೆ ತುಂಬಲು ಏ. ೧ರಿಂದ ೩೦ರ ವರೆಗೆ ಶೇ. ೫ ರಿಯಾಯಿತಿ ನೀಡಲಾಗಿದೆ. ಹೀಗಾಗಿ ಅವಳಿ ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಗದಗ-ಬೆಟಗೇರಿ ನಗರಸಭೆಗೆ ಧಾವಿಸುತ್ತಿದ್ದಾರೆ. ಈ ಬಾರಿ ವಿಪರೀತ ಬಿಸಿಲು ಇರುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ನರಸಭೆ ಪೆಂಡಾಲ ಹಾಕಿ ನೆರಳಿನ ವ್ಯವಸ್ಥೆ ಕಲ್ಪಿಸಿದೆ. ಸರತಿಯಲ್ಲಿ ನಿಲ್ಲಲು ಹಿರಿಯರಿಗೆ, ಮಹಿಳೆಯರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಆಸನ ವ್ಯವಸ್ಥೆ ಮಾಡಿದೆ.ಸಾರ್ವನಿಕರಿಂದ ಭಾರಿ ಮೆಚ್ಚುಗೆ:

ಪ್ರಸಕ್ತ ವರ್ಷ ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ಸಂಪೂರ್ಣ ಬರಗಾಲ ಬಿದ್ದು, ಕುಡಿಯುವ ನೀರಿಗೂ ಪರದಾಡುವಂತಾಗಿದೆ. ದಾಖಲೆ ಪ್ರಮಾಣದಲ್ಲಿ ದಿನೇ ದಿನೇ ಉಷ್ಣಾಂಶದ ತೀವ್ರತೆ ಹೆಚ್ಚುತ್ತಿದೆ. ವಿಪರೀತ ಬಿಸಿಲು, ಬಿಸಿ ಗಾಳಿ ಬೀಸುತ್ತಿದೆ. ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಸ್ತಿ ಕರ ತುಂಬುವ ಸಲುವಾಗಿ ಬಿಸಲಿನಲ್ಲಿ ಸರದಿ ಸಾಲಿನಲ್ಲಿ ನಿಲ್ಲುವುದು ಕಷ್ಟಕರ. ಹೀಗಾಗಿ ನಗರಸಭೆಯೂ ಕುಡಿಯುವ ನೀರು, ನೆರಳು, ಆಸನಗಳ ವ್ಯವಸ್ಥೆ ಕಲ್ಪಿಸಿದ್ದು, ನಗರಸಭೆ ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಆಸ್ತಿ ಕರ ತುಂಬಲು ಶೇ. ೫ ರಿಯಾಯಿತಿ ಇದೆ. ಈಗಲೇ ನಮ್ಮ ಆಸ್ತಿ ಕರ ಪಾವತಿಸಿದರೆ ಅನುಕೂಲ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರಬಹುದು, ಈ ಬಿಸಿಲಿನಲ್ಲಿ ಹೇಗಪ್ಪ ಸರದಿಯಲ್ಲಿ ನಿಲ್ಲುವುದು? ಎಂದುಕೊಂಡೆವು. ಏನಾದರೂ ಆಗಲಿ ನೋಡೋಣ ಎಂದು ನಗರಸಭೆಗೆ ಬಂದರೆ ಇಲ್ಲಿ ನಾವು ಊಹಿಸಿದ ವಾತಾವರಣವಿರಲಿಲ್ಲ. ನಗರಸಭೆ ಸಾರ್ವಜನಿರ ಮೇಲೆ ವಿಶೇಷ ಕಾಳಜಿ ವಹಿಸಿ ಕುಡಿಯಲು ನೀರು, ಬಿಸಲಿನ ತಾಪದಿಂದ ರಕ್ಷಿಸಿಕೊಳ್ಳಲು ನೆರಳು ಹಾಗೂ ಆಸನಗಳ ವ್ಯವಸ್ಥೆ ಕಲ್ಪಿಸಿದೆ. ಈ ಕಾರ್ಯದಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲಕರವಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

Share this article