ಹಾವೇರಿ: ದತ್ತು ಮಾಸಾಚರಣೆ-2025ರ ಅಂಗವಾಗಿ ಹಾವೇರಿ ಜಿಲ್ಲೆಯಲ್ಲಿ ವಿನೂತನವಾಗಿ ಹಾಗೂ ಕ್ರಿಯಾಶೀಲವಾಗಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಅತ್ಯುತ್ತಮವಾಗಿ ಆಯೋಜಿಸಿದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ. ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯ ವತಿಯಿಂದ ನ. 29ರಂದು ಬೆಂಗಳೂರಿನ ಜವಾಹರ ಬಾಲಭವನದಲ್ಲಿ ಹಮ್ಮಿಕೊಳ್ಳಲಾದ ದತ್ತು ಪೋಷಕರ ಸಮಾವೇಶ ಕಾರ್ಯಕ್ರಮದಲ್ಲಿ ಕೇಂದ್ರದ ದತ್ತು ಸಂಪನ್ಮೂಲ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಭಾವನಾ ಸೆಕ್ಸೆನಾ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕ ಡಾ.ಅಶೋಕ.ಡಿ ಹಾಗೂ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರಾದ ಹಲೀಮಾ ಕೆ. ಅವರು ಹಾವೇರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ ಅವರಿಗೆ ಅಭಿನಂದನಾ ಪತ್ರ ಹಾಗೂ ಫಲಕವನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸ್ಪಂದನಾ ವಿಶೇಷ ದತ್ತು ಕೇಂದ್ರದಲ್ಲಿ ಸುಮಾರು 15 ವರ್ಷಗಳ ಕಾಲ ಸಂಸ್ಥೆಯಲ್ಲಿರುವ ಮಕ್ಕಳನ್ನು ಉತ್ತಮವಾಗಿ ಪಾಲನೆ ಮತ್ತು ಆರೈಕೆ ಮಾಡಿದ್ದಕ್ಕಾಗಿ ಕಮಲವ್ವ ಹಾಗೂ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.83 ಅಂಕಗಳಿಸಿದ್ದಕ್ಕಾಗಿ ಹಾವೇರಿ ಸರ್ಕಾರಿ ಬಾಲಕಿಯರ ಬಾಲಮಂದಿರ ಸಂಸ್ಥೆಯ ಲಕ್ಷ್ಮಿ ಬಾಳೂರು ಅವರನ್ನು ಸನ್ಮಾನಿಸಲಾಯಿತು. ಇದೇ ಸಮಯದಲ್ಲಿ ಸ್ಪಂದನಾ ವಿಶೇಷ ದತ್ತು ಸಂಸ್ಥೆಯಲ್ಲಿರುವ ಗಂಡು ಮಗುವನ್ನು ತೆಲಂಗಾಣ ರಾಜ್ಯದ ದತ್ತು ದಂಪತಿಗಳಿಗೆ ಮಾರ್ಗಸೂಚಿಯನ್ವಯ ದತ್ತು ಪೂರ್ವ ಪೋಷಕತ್ವಕ್ಕೆ ನೀಡಲಾಯಿತು.ದತ್ತು ಪೋಷಕರ ಸಮಾಲೋಚನಾ ಸಭೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿಯಲ್ಲಿ ಆಯೋಜನೆ ಮಾಡಿ ಮಾರ್ಗಸೂಚಿಯನ್ವಯ ಮಕ್ಕಳನ್ನು ಕಾನೂನು ಬದ್ಧವಾಗಿ ದತ್ತು ಪಡೆಯುವ ಬಗ್ಗೆ ಮಾರ್ಗದರ್ಶನ ನೀಡಿರುತ್ತಾರೆ. ಹಾವೇರಿ ನಗರದ ಪ್ರಮುಖ ಬೀದಿಗಳಲ್ಲಿ ಕಾನೂನು ಬದ್ಧ ದತ್ತು ಪ್ರಕ್ರಿಯೆ ಕುರಿತು ಪ್ರಚಾರಾಂದೋಲನ ಮತ್ತು ಜಾಥಾ ಮೂಲಕ ಹೆಚ್ಚಿನ ಅರಿವು ಮೂಡಿಸಲಾಗಿದೆ.