ಹಾವೇರಿ: ದ್ವಿತೀಯ ಪಿಯುಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆ ಶೇ.84.11 ಫಲಿತಾಂಶ ದಾಖಲಿಸುವುದರೊಂದಿಗೆ ರಾಜ್ಯಕ್ಕೆ 22ನೇ ಸ್ಥಾನ ಪಡೆದಿದೆ. ಕಳೆದ ವರ್ಷ 21ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ಒಂದು ಸ್ಥಾನ ಕುಸಿತ ಕಂಡಿದೆ.ಜಿಲ್ಲೆಯ 25 ಪರೀಕ್ಷಾ ಕೇಂದ್ರಗಳಲ್ಲಿ ಫೆ. 28ರಿಂದ ಮಾ. 17ರ ವರೆಗೆ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆದಿವೆ. ಜಿಲ್ಲೆಯಲ್ಲಿ 12684 ರೆಗ್ಯುಲರ್ ವಿದ್ಯಾರ್ಥಿಗಳಿದ್ದು, ಈ ಪೈಕಿ 10,669 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಫಲಿತಾಂಶ ಶೇ. 84.1ರಷ್ಟಾಗಿದೆ. ಉಳಿದಂತೆ 298 ಖಾಸಗಿಯಾಗಿ ಪರೀಕ್ಷೆ ಬರೆದವರಿದ್ದು ಈ ಪೈಕಿ 127 ಹಾಗೂ 855 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 292 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಬಾಲಕಿಯರ ಮೇಲುಗೈ: ಎಂದಿನಂತೆ ಜಿಲ್ಲೆಯ ಪಿಯುಸಿ ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 8283 ಬಾಲಕಿಯರು ಪರೀಕ್ಷೆ ಬರೆದಿದ್ದು ಇವರಲ್ಲಿ 6996 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ. 84.46 ಆಗಿದೆ. 5554 ಬಾಲಕರು ಪರೀಕ್ಷೆ ಬರೆದಿದ್ದು, ಇವರಲ್ಲಿ 4092 ಜನ ಉತ್ತೀರ್ಣರಾಗಿದ್ದಾರೆ. ಬಾಲಕರ ಉತ್ತೀರ್ಣ ಪ್ರಮಾಣ ಶೇ.73.68 ಆಗಿದೆ.ಗ್ರಾಮೀಣ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ: ಈ ಬಾರಿ ಜಿಲ್ಲೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷೆ ಬರೆದ 5567 ವಿದ್ಯಾರ್ಥಿಗಳ ಪೈಕಿ 4507 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.80.96 ಫಲಿತಾಂಶ ದಾಖಲಾಗಿದ್ದರೆ ನಗರ ಪ್ರದೇಶದಲ್ಲಿ 8270 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ 6581 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದಲ್ಲಿ ಒಟ್ಟು ಶೇ. 79.58 ಫಲಿತಾಂಶ ದಾಖಲಾಗಿದೆ.ವಿಜ್ಞಾನ ವಿಭಾಗ ಉತ್ತಮ: ವಿಜ್ಞಾನ ವಿಭಾಗದಲ್ಲಿ 4100 ವಿದ್ಯಾರ್ಥಿಗಳ ಪೈಕಿ 3737 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.91.15 ಫಲಿತಾಂಶ ದಾಖಲಾಗಿದ್ದರೆ ವಾಣಿಜ್ಯ ವಿಭಾಗದಲ್ಲಿ 3518 ವಿದ್ಯಾರ್ಥಿಗಳ ಪೈಕಿ 3070 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 87.27 ಫಲಿತಾಂಶ ಬಂದಿದೆ. ಇನ್ನು, ಕಲಾ ವಿಭಾಗದಲ್ಲಿ 5066 ವಿದ್ಯಾರ್ಥಿಗಳಲ್ಲಿ 3862 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.76.23 ಫಲಿತಾಂಶ ಬಂದಿದೆ.ಒಂದು ಸ್ಥಾನ ಕುಸಿತ: ಕಳೆದ ವರ್ಷ ಜಿಲ್ಲೆ ರಾಜ್ಯಕ್ಕೆ 21ನೇ ಸ್ಥಾನ ಪಡೆದಿದ್ದರೂ ಶೇಕಡಾವಾರು ಫಲಿತಾಂಶ ಕಡಿಮೆ ಇತ್ತು. ಒಟ್ಟು ಶೇ. 67.56 ಫಲಿತಾಂಶ ಬಂದಿತ್ತು. ಈ ವರ್ಷ ಒಂದು ಸ್ಥಾನ ಕುಸಿತ ಕಂಡಿದ್ದರೂ ಶೇಕಡಾವಾರು ಫಲಿತಾಂಶ 84.11ಕ್ಕೆ ಏರಿದೆ. ಜಿಲ್ಲೆಯ ಒಟ್ಟಾರೆ ಫಲಿತಾಂಶ ಸಮಾಧಾನಕರವಾಗಿದ್ದರೂ ಸ್ಥಾನದಲ್ಲಿ ಕುಸಿತ ಕಂಡಿರುವುದು ಶಿಕ್ಷಣ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಉತ್ತಮವಾಗಿದ್ದರೂ, ಇತರ ಜಿಲ್ಲೆಗಳಿಗಿಂತ ಸ್ಪರ್ಧಾತ್ಮಕ ಮಟ್ಟದಲ್ಲಿ ಹಿಂದುಳಿದಿರುವುದರಿಂದ ಸ್ಥಾನದಲ್ಲಿ ಈ ಬದಲಾವಣೆ ಕಂಡುಬಂದಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿರುವುದು ವಿಶೇಷವಾಗಿದ್ದು, ಹಲವು ಸರ್ಕಾರಿ ಕಾಲೇಜುಗಳು ಶ್ರೇಷ್ಠ ಫಲಿತಾಂಶ ದಾಖಲಿಸಿರುವುದು ಗಮನಾರ್ಹವಾಗಿದೆ. ಆದರೆ ಕೆಲವು ವಿಷಯಗಳಲ್ಲಿ ಕಡಿಮೆ ಫಲಿತಾಂಶ ದಾಖಲಾಗಿರುವುದು ಒಟ್ಟಾರೆ ಶೇಕಡಾವಾರಿನ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.