ಮಾ.1ರಿಂದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ

KannadaprabhaNewsNetwork |  
Published : Feb 27, 2024, 01:34 AM IST
ಚಿತ್ರದುರ್ಗ ಲೀಡ್ ಮಾಡಿಕೊಳ್ಳಬಹುದು | Kannada Prabha

ಸಾರಾಂಶ

ಮಾ.1ರಿಂದ 22ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವ್ಯವಸ್ಥಿತವಾಗಿ, ಯಾವುದೇ ಲೋಪದೋಷವಿಲ್ಲದಂತೆ ಸುಗಮವಾಗಿ ನಡೆಸಬೇಕು

ಚಿತ್ರದುರ್ಗ: ಮಾ.1ರಿಂದ 22ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವ್ಯವಸ್ಥಿತವಾಗಿ, ಯಾವುದೇ ಲೋಪದೋಷವಿಲ್ಲದಂತೆ ಸುಗಮವಾಗಿ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪೂರ್ವಸಿದ್ಧತೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಬೇಸಿಗೆ ಸಂದರ್ಭವಾಗಿರುವ ಕಾರಣ ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ಗಾಳಿ, ಬೆಳಕು, ಆಸನಗಳ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಶೌಚಾಲಯ ಸಮರ್ಪಕವಾಗಿರಬೇಕು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪರೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಮತ್ತು ತಾಲೂಕು ಮಟ್ಟದ 24 ಪರೀಕ್ಷಾ ಕೇಂದ್ರಗಳಿಗೆ ಎ ಮತ್ತು ಬಿ ದರ್ಜೆಯ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರದ ಸುತ್ತಮುತ್ತಲಿರುವ ಜೆರಾಕ್ಸ್ ಮತ್ತು ಕಂಪ್ಯೂಟರ್ ಅಂಗಡಿಗಳನ್ನು ಮುಚ್ಚಿಸುವುದು ಮತ್ತು ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ 144 ಸೆಕ್ಷನ್ ಜಾರಿಗೊಳಿಸಲಾಗುವುದು. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಮೊಬೈಲ್ ಫೋನ್ ಸೇರಿದಂತೆ ಇತರೆ ಎಲ್ಲ ಬಗೆಯ ಎಲೆಕ್ಟ್ರಾನಿಕ್ ಡಿವೈಸ್, ಉಪಕರಣ ತರುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಉಪನ್ಯಾಸಕರು, ಕಚೇರಿ ಸಿಬ್ಬಂದಿಯವರು ಕೂಡ ಪರೀಕ್ಷೆ ನಡೆಯುವ ಅವಧಿಯಲ್ಲಿ ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆ ಕವರ್ ತೆರೆಯುವಾಗ ಹಾಗೂ ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡುವಾಗ ಸಿಸಿ ಟಿವಿ ವೀಕ್ಷಣೆಯಡಿಯಲ್ಲಿ ಕಾರ್ಯನಿರ್ವಹಿಸುವುದು ಮತ್ತು ಎಲ್ಲಾ ಕೊಠಡಿಗಳಿಗೆ ಸಿಸಿ ಟಿವಿ ಅಳವಡಿಸಬೇಕು. ಪರೀಕ್ಷಾ ಕಾರ್ಯದಲ್ಲಿ ಯಾವುದೇ ರೀತಿಯಾದ ಲೋಪಗಳು ಕಂಡುಬಂದಲ್ಲಿ ಸಂಬಂಧಪಟ್ಟವರನ್ನು ಹೊಣೆ ಮಾಡಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 24 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 15,622 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಇಲ್ಲ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಅವಶ್ಯಕತೆ ಇದೆ. ಪರೀಕ್ಷೆ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ಒಂದು ಗಂಟೆ ಮೊದಲು ಹಾಗೂ ಪರೀಕ್ಷಾ ನಂತರ 30 ನಿಮಿಷಗಳು ಪೊಲೀಸ್ ಬಂದೋಬಸ್ತಿನ ಅವಶ್ಯಕತೆ ಇದೆ. ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಖಜಾನೆಯಿಂದ ಪಶ್ನೆಪತ್ರಿಕೆಗಳನ್ನು ಕೊಂಡ್ಯೊಯುವ ಮತ್ತು ವಿತರಣೆ ಮಾಡುವ ಸಮಯಕ್ಕೆ 7 ಮಾರ್ಗಗಳ ತಂಡಕ್ಕೆ ಪ್ರತಿ ತಾಲ್ಲೂಕಿನ ಮಾರ್ಗಾಧಿಕಾರಿಗಳ ಜೊತೆಗೆ ಪೊಲೀಸ್ ರಕ್ಷಣೆ ಬೇಕಾಗಿರುತ್ತದೆ. ಪ್ರಶ್ನೆಪತ್ರಿಕೆಗಳನ್ನು ಕೊಂಡ್ಯೊಯುವ ವಾಹನಗಳಿಗೆ ಜಿಪಿಎಸ್ ಅವಳಡಿಸಬೇಕು ಎಂದು ತಿಳಿಸಿದರು.

ಪರೀಕ್ಷೆ ಬರೆಯಲಿದ್ದಾರೆ 15622 ವಿದ್ಯಾರ್ಥಿಗಳು

14242 ಹೊಸ, 978 ಪುನರಾವರ್ತಿತ ಹಾಗೂ 402 ಖಾಸಗಿ ಸೇರಿದಂತೆ ಒಟ್ಟು 15622 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಚಿತ್ರದುರ್ಗ ತಾಲೂಕಿನಲ್ಲಿ 9 ಪರೀಕ್ಷಾ ಕೇಂದ್ರಗಳಿದ್ದು, 6129 ವಿದ್ಯಾರ್ಥಿಗಳು. ಚಳ್ಳಕೆರೆ ತಾಲೂಕಿನಲ್ಲಿ 3 ಪರೀಕ್ಷಾ ಕೇಂದ್ರಗಳಲ್ಲಿ 2917 ವಿದ್ಯಾರ್ಥಿಗಳು, ಹಿರಿಯೂರು ತಾಲೂಕಿನ 4 ಪರೀಕ್ಷಾ ಕೇಂದ್ರಗಳಲ್ಲಿ 1893 ವಿದ್ಯಾರ್ಥಿಗಳು, ಹೊಸದುರ್ಗ 4 ಪರೀಕ್ಷಾ ಕೇಂದ್ರಗಳಲ್ಲಿ 2172 ವಿದ್ಯಾರ್ಥಿಗಳು. ಮೊಳಕಾಲ್ಮೂರು 2 ಪರೀಕ್ಷಾ ಕೇಂದ್ರಗಳಲ್ಲಿ 1027 ವಿದ್ಯಾರ್ಥಿಗಳು ಹಾಗೂ ಹೊಳಲ್ಕೆರೆ ತಾಲೂಕಿನ 2 ಪರೀಕ್ಷಾ ಕೇಂದ್ರಗಳಲ್ಲಿ 1484 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆಎಸ್‍ಆರ್‍ಟಿಸಿ ವತಿಯಿಂದ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದರು. ಮಾ.1ರಿಂದ 22ರವರೆಗೆ, ಪರೀಕ್ಷೆ ನಡೆಯುವ ದಿನಾಂಕಗಳಂದು ಪರೀಕ್ಷೆಗೆ ಹಾಜರಾಗಲು ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ದ್ವಿತೀಯ ಪಿಯುಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ಉಚಿತವಾಗಿ ಪ್ರಯಾಣಿಸ ಬಹುದಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಖಜಾನಾಧಿಕಾರಿ ರಮೇಶ್, ತಹಶೀಲ್ದಾರ್‍ಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ