ಕನ್ನಡಪ್ರಭ ವಾರ್ತೆ ಪಾಂಡವಪುರ ಕೆಆರ್ ಎಸ್ ಅಣೆಕಟ್ಟೆ ವ್ಯಾಪ್ತಿಯ ಅತಿದೊಡ್ಡ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿ ಆರಂಭಗೊಂಡಿದ್ದು, ರೈತರಿಗೆ ಒಂದೆಡೆ ಖುಷಿಕೊಟ್ಟರೆ, ಮತ್ತೊಂದೆಡೆ ಬೆಳೆಗಳಿಗೆ ನೀರಿಲ್ಲದ ಆತಂಕ ಎದುರಾಗಿದೆ.ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ವೇಳೆ, ಸಿ.ಎಸ್.ಪುಟ್ಟರಾಜು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ 2018-19ನೇ ಸಾಲಿನಲ್ಲಿ ಸರ್ಕಾರ ವಿಸಿ ನಾಲೆಯ ಆಧುನೀಕರಣಕ್ಕಾಗಿ 300 ಕೋಟಿ ರು. ಅನುದಾನ ಬಿಡುಗಡೆ ಮಾಡಿ ಬಜೆಟ್ ನಲ್ಲಿ ಘೋಷಿಸಿದ್ದರು. ಜಿಲ್ಲೆಯ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣವಾಗಿ ಇಲ್ಲಿಯವರೆಗೆ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ನಡೆದಿರಲಿಲ್ಲ. ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಸೇರಿದಂತೆ ಅಂದಿನ ಜಿಲ್ಲಾ ಜೆಡಿಎಸ್ ಶಾಸಕರ ಮನವಿಯಿಂದಾಗಿ ಅನುದಾನ ಬಿಡುಗೆಯಾಗಿತ್ತು.
ನಾಲೆಗೆ ನೀರು ಹರಿಸುವುದು ಕಷ್ಟ: ನಾಲೆ ಆಧುನೀಕರಣ ಆರಂಭಗೊಂಡಿರುವ ಕಾರಣ ಮತ್ತೆ ನಾಲೆಗೆ ನೀರು ಹರಿಸುವುದು ಕನಸಿನ ಮಾತು. ಇದರಿಂದ ವಿಸಿ ನಾಲಾ ವ್ಯಾಪ್ತಿಯಲ್ಲಿ ನಾಲೆ ನೀರನ್ನೇ ನೆಚ್ಚಿಕೊಂಡು ಬೆಳೆದಿದ್ದ ಕಬ್ಬು ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲಾಗದೇ ರೈತರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಕೊರತೆ ಎದುರಾದ ಹಿನ್ನೆಲೆಯಲ್ಲಿ ವಿಧಿಇಲ್ಲದೆ ರೈತರು 5 ರಿಂದ 6 ತಿಂಗಳ ಬೆಳೆದಿದ್ದ ಕಬ್ಬನೇ ಕೊಟ್ಟಷ್ಟು ಹಣಕ್ಕೆ ಸಕ್ಕರೆ ಕಾರ್ಖಾನೆಗಳಿಗೆ ಕಟಾವು ಮಾಡಿಸುತ್ತಿದ್ದಾರೆ. ನಾಲಾ ವ್ಯಾಪ್ತಿಯಲ್ಲಿ ಲಕ್ಷಾಂತರ ಎಕರೆ ಕಬ್ಬು ನೀರಿಲ್ಲದೇ ಒಣಗುತ್ತಿರುವುದು ರೈತರ ಆತಂಕಕ್ಕೂ ಕಾರಣವಾಗಿದೆ.
ವಿಸಿ ನಾಲೆ ಆಧುನೀಕರಣದ ಜೊತೆಗೆ ಹೊಸದಾಗಿ 7 ಹೊಸ ಮೇಲ್ಸೇತುಗಳನ್ನು ಸಹ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಹಿಂದಿನ ಸರಕಾರವೇ ಹೊಸ 7 ಸೇತುವೆಗಳನ್ನುನಿರ್ಮಿಸಲು ಮಂಜೂರು ಮಾಡಿಸಿದೆ. ಮಾಜಿ ಸಚಿವ ಸಿ..ಎಸ್.ಪುಟ್ಟರಾಜು ಅವರು ಪಟ್ಟಣದ ಗಾಂಧಿ ಬಡಾವಣೆಯ ನಿವಾಸಿಗಳ ಅನುಕೂಲಕ್ಕಾಗಿ ಅಲ್ಲಿಗೆ ಹೊಸ ಸೇತುವೆ ಮಂಜೂರು ಮಾಡಿಸಿದ್ದರು. ಇದೀಗ ಆ ಸೇತುವೆ ಕೆಲಸವು ಸಹ ಆರಂಭಗೊಂಡಿದೆ. ಉಳಿದಂತೆ ಅರಳಕುಪ್ಪೆಯಲ್ಲಿ 4, ಎಲೆಕೆರೆ ಹ್ಯಾಂಡ್ ಪೋಸ್ಟ್ ನಲ್ಲಿ ಒಂದು ಮೇಲ್ಸೇತುವೆ ನಿರ್ಮಾಣವಾಗುತ್ತಿದೆ.ವಿತರಣಾ ನಾಲೆಗಳ ಅಭಿವೃದ್ಧಿಗೆ ಆಗ್ರಹ:ವಿಸಿ ನಾಲೆ ಆಧುನೀಕರಣ ಕಾಮಗಾರಿ ಆರಂಭಗೊಂಡಿದೆ. ಆದರೆ, ವಿಸಿ ಮುಖ್ಯ ನಾಲೆ ವಿತರಣಾ ನಾಲೆಗಳು ಸಹ ಸಂಪೂರ್ಣ ಅಧ್ವಾನಗೊಂಡಿವೆ. ನಾಲಾ ವ್ಯಾಪ್ತಿಯ ಎಲ್ಲಾ ವಿತರಣೆ ನಾಲೆಗಳಲ್ಲಿ ಗಿಡಗಂಟಿಗಳು ಬೆಳೆದು ಹೂಳು ತುಂಬಿಕೊಂಡಿವೆ. ತಡೆಗೋಡೆಗಳು, ಮೋರಿಗಳು ಕುಸಿದು ಹೋಗಿವೆ. ವಿತರಣಾ ನಾಲೆಗಳಿಂದ ರೈತರ ಜಮೀನುಗಳಿಗೆ ನೀರು ಸಂರ್ಪಕವಾಗಿ ತುಲುಪುತ್ತಿಲ್ಲ. ಅದಕ್ಕಾಗಿ ಈಗಿನ ಸರ್ಕಾರ ವಿಸಿ ನಾಲೆಯ ವಿತರಣಾ ನಾಲೆಗಳ ಆಧುನೀಕರಣಗೊಳಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
2018-19ನೇ ಸಾಲಿನಲ್ಲಿ ಮಂಜೂರಾಗಿದ್ದ ವಿಸಿ ನಾಲೆ ಆಧುನೀಕರಣ ಕಾಮಗಾರಿ ಮತ್ತೆ ಆರಂಭಗೊಂಡಿದೆ. ಅಣೆಕಟ್ಟೆಯಲ್ಲಿ ನೀರು ಕಡಿಮೆ ಇವರ ಕಾರಣ ನಾಲೆಗೆ ನೀರು ಹರಿಸಲಾಗದು. ಆ ಹಿನ್ನೆಲೆಯಲ್ಲಿ ಆಧುನೀಕರಣ ಆರಂಭಗೊಂಡಿದೆ. ಕಾಮಗಾರಿ ಬರದಿಂದ ಸಾಗುತ್ತಿದೆ. ನಾಲೆ ಜತೆಗೆ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ ಮೂರ್ನಾಲ್ಕು ತಿಂಗಳೊಳಗೆ ನಾಲೆ ಆಧುನೀಕರಣ ಪೂರ್ಣಗೊಳ್ಳಲಿದೆ.
-ಜಯಂತ್, ಇಇ, ಕಾವೇರಿ ನೀರಾವರಿ ನಿಗಮ.ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ, ಸಿ.ಎಸ್.ಪುಟ್ಟರಾಜು ಸಣ್ಣ ನೀರಾವರಿ ಸಚಿವರಾಗಿದ್ದಾಗ ಸರ್ಕಾರ ಮಂಜೂರು ಮಾಡಿದ್ದ ವಿಸಿ ನಾಲೆಯ ಆಧುನೀಕರಣ ಕಾಮಗಾರಿ ತಡವಾಗಿಯಾದರೂ ನಡೆಯುತ್ತಿರುವುದು ಖುಷಿಯ ವಿಚಾರ. ವಿಸಿ ನಾಲೆ ಆಧುನೀಕರಣದ ಜತೆಗೆ ಈಗಿನ ಸರ್ಕಾರ ವಿತರಣಾ ನಾಲೆಗಳ ಆಧುನೀಕರಣವನ್ನು ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು.
ಮಹೇಶ್ ಸುಂಕಾತೊಣ್ಣೂರು ಗ್ರಾಪಂ ಸದಸ್ಯರು.