ಕನ್ನಡಪ್ರಭ ವಾರ್ತೆ ಕಾರವಾರ
ಈ ಬಾರಿಯ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದು, ಅತಿ ಹೆಚ್ಚು ಅಂದರೆ ಶೇ. 94.7ರಷ್ಟು ಮಂದಿ ಪಾಸ್ ಆಗಿದ್ದಾರೆ. ಅದೇ ರೀತಿ ವಾಣಿಜ್ಯ ವಿಭಾಗದಲ್ಲಿ ಶೇ. 93.2ರಷ್ಟು ಹಾಗೂ ಕಲಾ ವಿಭಾಗದಲ್ಲಿ ಶೇ. 83.9ರಷ್ಟು ವಿದ್ಯಾರ್ಥಿಗಳು ಯಶಸ್ಸು ಕಂಡಿದ್ದಾರೆ ಎಂದು ಕಾರವಾರದ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪ ನಿರ್ದೇಶಕರು ಅಂಕಿ-ಅಂಶಗಳೊಂದಿಗೆ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ತಾಲೂಕುವಾರು ಸಾಧನೆ ಗಮನಿಸಿದರೆ ಶಿರಸಿ ತಾಲೂಕು ಅತಿ ಹೆಚ್ಚು ಶೇ. 96.7ರಷ್ಟು ಫಲಿತಾಂಶ ದಾಖಲಿಸಿ ಜಿಲ್ಲೆಗೆ ಅಗ್ರಸ್ಥಾನದಲ್ಲಿದೆ. ಶಿರಸಿಯಿಂದ ಪರೀಕ್ಷೆ ಬರೆದ 948 ವಿದ್ಯಾರ್ಥಿಗಳಲ್ಲಿ 917 ಮಂದಿ ಉತ್ತೀರ್ಣರಾಗಿದ್ದಾರೆ. ಇನ್ನು ಕುಮಟಾ ತಾಲೂಕಿನ 1,089 ವಿದ್ಯಾರ್ಥಿಗಳಲ್ಲಿ 1,049 ಪಾಸ್ ಆಗಿದ್ದು ಶೇ. 96.3ರಷ್ಟು ಸಾಧನೆಯೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಹೊನ್ನಾವರ ತಾಲೂಕಿನಿಂದ ಅತಿ ಹೆಚ್ಚು ಅಂದರೆ 2,234 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಅವರಲ್ಲಿ ಶೇ. 92.9ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ.ವಿಶೇಷವೆಂದರೆ ದಾಂಡೇಲಿ ತಾಲೂಕಿನಲ್ಲಿ ವಿಜ್ಞಾನ ವಿಭಾಗದಿಂದ ಪರೀಕ್ಷೆ ಬರೆದ ಎಲ್ಲಾ 6 ವಿದ್ಯಾರ್ಥಿಗಳು ಪಾಸ್ ಆಗುವ ಮೂಲಕ ಶೇ. 100ರಷ್ಟು ಫಲಿತಾಂಶ ದಾಖಲಾಗಿದೆ. ಉಳಿದಂತೆ ಮುಂಡಗೋಡು ಶೇ. 93.8, ಜೋಯಿಡಾ ಶೇ. 92.4 ಮತ್ತು ಸಿದ್ದಾಪುರ ತಾಲೂಕು ಶೇ. 91.7ರಷ್ಟು ಫಲಿತಾಂಶದೊಂದಿಗೆ ಗಮನಾರ್ಹ ಸಾಧನೆ ತೋರಿವೆ.
ಕಲಾ ವಿಭಾಗದಲ್ಲಿ ಭಟ್ಕಳದ ಅಂಜುಮನ್ ಮಹಿಳಾ ಪದವಿ ಪೂರ್ವ ಕಾಲೇಜಿನ ಶಿಫಾ ಅನಾಮ್ 591 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಕುಮಟಾ ತಾಲೂಕಿನ ಹಿರೇಗುತ್ತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜಾನ್ಹವಿ ಮಾಸ್ತಿ ಗೌಡ 587 ಅಂಕಗಳೊಂದಿಗೆ ದ್ವಿತೀಯ ಹಾಗೂ ಕಾರವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಾಕ್ಷಿ ವಿನೋದ ನಾಯ್ಕ 585 ಅಂಕ ಗಳಿಸಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಹೊನ್ನಾವರದ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ಚಿನ್ಮಯಿ ಮಂಜುನಾಥ ಶೆಟ್ಟಿ 596 ಅಂಕಗಳೊಂದಿಗೆ ಜಿಲ್ಲೆಗೆ ಮೊದಲ ಸ್ಥಾನ ಪಡೆದು ಮಿಂಚಿದ್ದಾರೆ. ಶಿರಸಿಯ ಎಂಇಎಸ್ ಪದವಿ ಪೂರ್ವ ಕಾಲೇಜಿನ ಪ್ರಣವ್ ಎನ್. ಭಟ್ 594 ಅಂಕಗಳೊಂದಿಗೆ 2ನೇ ಸ್ಥಾನ ಹಾಗೂ ಭಟ್ಕಳದ ದಿ ನ್ಯೂ ಇಂಗ್ಲಿಷ್ ಪದವಿ ಪೂರ್ವ ಕಾಲೇಜಿನ ಸಂಜನಾ ನಾಗಪ್ಪ ನಾಯ್ಕ 593 ಅಂಕಗಳೊಂದಿಗೆ 3ನೇ ಸ್ಥಾನ ಹಂಚಿಕೊಂಡಿದ್ದಾರೆ.