ಫೆಬ್ರವರಿ 14ರಂದು ರಾಜ್ಯಮಟ್ಟದ ಎರಡನೇ ಬೃಹತ್ ಹಕ್ಕುಪತ್ರ ವಿತರಣಾ ಕಾರ್ಯಕ್ರಮ

KannadaprabhaNewsNetwork |  
Published : Feb 10, 2026, 02:30 AM IST
ಹಾವೇರಿ ತಹಸೀಲ್ದಾರ್ ಕಚೇರಿಯಲ್ಲಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದ ಸಕಲ ತಯಾರಿ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ವತಿಯಿಂದ ಫೆ. 14ರಂದು ರಾಜ್ಯಮಟ್ಟದ ಎರಡನೇ ಬೃಹತ್ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ ಯಶಸ್ಸಿಗೆ ಎಲ್ಲಾ ಅಧಿಕಾರಿಗಳು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ಹಾವೇರಿ:ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ವತಿಯಿಂದ ಫೆ. 14ರಂದು ರಾಜ್ಯಮಟ್ಟದ ಎರಡನೇ ಬೃಹತ್ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ ಯಶಸ್ಸಿಗೆ ಎಲ್ಲಾ ಅಧಿಕಾರಿಗಳು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು. ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಸಮಾವೇಶದ ಸಕಲ ತಯಾರಿ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಹಿಂದೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದ ಸುಮಾರು 130 ಎಕರೆ ಜಾಗದಲ್ಲಿ ಸಮರ್ಪಣಾ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಈ ಪೈಕಿ 18 ಎಕರೆ ಜಾಗದಲ್ಲಿ ಮುಖ್ಯ ವೇದಿಕೆ ನಿರ್ಮಾಣವಾಗುತ್ತಿದೆ. 94 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ, 8 ಎಕರೆ ಜಾಗದಲ್ಲಿ ಒಟ್ಟು 4 ಹೆಲಿಪ್ಯಾಡ್, 10 ಎಕರೆ ಜಾಗದಲ್ಲಿ ಊಟದ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. 200 ಅತಿಥಿಗಳು ಕುಳಿತುಕೊಳ್ಳುವ 140*60 ಅಡಿ ವಿಸ್ತೀರ್ಣದ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದೆ. ಒಂದು ಲಕ್ಷ ಜನ ಕುಳಿತುಕೊಳ್ಳಲು ಅವಕಾಶವಿರುವ ಒಟ್ಟು 2,76,000 ಚದರ ಅಡಿಯ ಜರ್ಮನ್ ಟೆಂಟ್ ಅಳವಡಿಸಲಾಗುತ್ತಿದೆ ಎಂದರು.ಹಾವೇರಿ ಹಾಗೂ ಇತರೆ 8 ಜಿಲ್ಲೆಗಳನ್ನು ಸೇರಿ ಒಂದು ಲಕ್ಷ ಫಲಾನುಭವಿಗಳಿಗೆ ಫೆ. 14ರಂದು ಹಕ್ಕುಪತ್ರ ವಿತರಿಸಲಾಗುವುದು. ಸರ್ಕಾರ ಜಾರಿಗೆ ತಂದಿರುವ ಮಹತ್ವದ ಗ್ಯಾರಂಟಿ ಯೋಜನೆಗಳ ಜೊತೆಗೆ ಈಗ ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟು ಕಂದಾಯ ಗ್ಯಾರಂಟಿ ನೀಡಲು ಮುಂದಾಗಿದೆ. ಇದು ಐತಿಹಾಸಿಕವಾಗಲಿದೆ. ಹೊಸಪೇಟೆಯಲ್ಲಿ ಹಮ್ಮಿಕೊಂಡಿದ್ದ ಸಮಾವೇಶಕ್ಕಿಂತಲೂ ಉತ್ತಮವಾಗಿ ಆಯೋಜಿಸಲು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಿತಿಗಳನ್ನು ರಚಿಸಿಕೊಂಡು ಹಗಲಿರಳು ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಸೇರಿ ಶಕ್ತಿ ಮೀರಿ ಕೆಲಸ ಮಾಡಿ ಸಮಾವೇಶವನ್ನು ಯಶಸ್ವಿಗೊಳಿಸಬೇಕಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಸಮಾವೇಶವು ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯದ ಸಚಿವ ಸಂಪುಟದ ಬಹುತೇಕ ಎಲ್ಲ ಸಚಿವರ ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಮಟ್ಟದ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಯಾವುದೇ ಲೋಪದೋಷಗಳು ಆಗದಂತೆ ಎಚ್ಚರಿಕೆಯಿಂದ ತಮಗೆ ವಹಿಸಿರುವ ಕೆಲಸವನ್ನು ನಿರ್ವಹಿಸಬೇಕು ಮತ್ತು ಜಿಲ್ಲೆಗೆ ಹೆಸರು ತರಬೇಕು ಎಂದು ಸಲಹೆ ನೀಡಿದರು. ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆ ತರಲು 800 ಕೆಎಸ್‌ಆರ್‌ಟಿಸಿ ಬಸ್ಸುಗಳು, 75 ಖಾಸಗಿ ಬಸ್ಸುಗಳು ಹಾಗೂ 200 ಶಾಲಾ ವಾಹನಗಳನ್ನು ಬಳಸಿಕೊಂಡು ವ್ಯವಸ್ಥಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕಾರ್ಯಕ್ರಮದ ಭದ್ರತೆಗಾಗಿ 3500 ಕ್ಕಿಂತಲೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು. ಸಭೆಯಲ್ಲಿ ತಹಸೀಲ್ದಾರ್ ಶರಣಮ್ಮ ಕೆ., ಆಯಾ ತಾಲೂಕಿನ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಹಾಡಿ, ಹಟ್ಟಿ, ಮಜಿರೆ, ದೊಡ್ಡಿ, ಪಾಳ್ಯ ಮೊದಲಾಗಿ ದಾಖಲೆರಹಿತ ಗ್ರಾಮಗಳಿಗೆ ದಾಖಲೆ ಕೊಡಬೇಕು ಎಂದು ನಾವು ದೀರ್ಘ ಕಾಲದಿಂದ ಹೋರಾಟ ನಡೆಸಿದ್ದೆವು. ಅದರ ಫಲವಾಗಿ ಹಾವೇರಿ ಜಿಲ್ಲೆಯಿಂದ 30,204 ಫಲಾನುಭವಿಗಳು ಕಂದಾಯ ಗ್ರಾಮಗಳ ಹಕ್ಕುಪತ್ರ, ಇ-ಪಾವತಿ ಪತ್ರಗಳು ಮತ್ತು ಬಗರ್ ಹುಕುಂ ಪತ್ರದ ಹಕ್ಕುಗಳನ್ನು ಪಡೆಯಲಿದ್ದಾರೆ. ಹಾವೇರಿ ಜಿಲ್ಲೆಯಿಂದ 50,000, ದಾವಣಗೆರೆ 20,000, ಶಿವಮೊಗ್ಗ, ಧಾರವಾಡ ಹಾಗೂ ಗದಗ ಜಿಲ್ಲೆಯಿಂದ ತಲಾ 10,000, ಚಿಕ್ಕಮಗಳೂರು 7,000, ಚಿತ್ರದುರ್ಗ 5,500, ಕೊಪ್ಪಳ 8,000 ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ 1,000 ಜನರು ಹಕ್ಕು ಪತ್ರ ಪಡೆದುಕೊಳ್ಳಲಿದ್ದಾರೆ ಎಂದು ವಿಧಾನಸಭೆ ಉಪಾ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುಷ್ಯ ನಿರಂತರ ಧ್ಯಾನ, ತಪ ಮಾಡಲಿ: ಡಾ. ಚನ್ನವೀರ ಶ್ರೀಗಳು
ಆಧಾರ್ ಸೀಡಿಂಗ್ ಶೇ. 85.62ರಷ್ಟು ಸಾಧನೆ: ಸಚಿವ ಕೃಷ್ಣ ಭೈರೇಗೌಡ