ಅಂಕೋಲಾದಲ್ಲಿ ಗುಟ್ಟಾಗಿ ನಡೆದ ಬಾಲ್ಯವಿವಾಹ ಕೊನೆಗೂ ರಟ್ಟು!

KannadaprabhaNewsNetwork |  
Published : Feb 18, 2026, 02:30 AM IST
ಬಾಲ್ಯ ವಿವಾಹ | Kannada Prabha

ಸಾರಾಂಶ

16 ವರ್ಷದ ಬಾಲೆಯೊಬ್ಬಳನ್ನು 28 ವರ್ಷದ ಯುವಕನೊಬ್ಬ ಗುಟ್ಟಾಗಿ ಮದುವೆಯಾಗಿ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ ಪ್ರಕರಣ ಇದೀಗ ಅಂಕೋಲಾ ತಾಲೂಕಿನಲ್ಲಿ ಬಹಿರಂಗವಾಗಿದೆ.

ರಾಘು ಕಾಕರಮಠಅಂಕೋಲಾ: ಇನ್ನೂ ಬದುಕಿನ ಕಷ್ಟಸುಖಗಳ ಅರಿವೇ ಇಲ್ಲದ ವಯಸ್ಸಿನಲ್ಲಿ ಸಪ್ತಪದಿ ತುಳಿಯಬೇಕಾದ ಪರಿಸ್ಥಿತಿ ಎದುರಾದ ಘಟನೆ ತಾಲೂಕಿನಲ್ಲಿ ಆಘಾತ ಮೂಡಿಸಿದೆ. 16 ವರ್ಷದ ಬಾಲೆಯೊಬ್ಬಳನ್ನು 28 ವರ್ಷದ ಯುವಕನೊಬ್ಬ ಗುಟ್ಟಾಗಿ ಮದುವೆಯಾಗಿ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ ಪ್ರಕರಣ ಇದೀಗ ರಟ್ಟಾಗಿದೆ!ಹೊಟ್ಟೆನೋವು ಎಂದು ಆಸ್ಪತ್ರೆಗೆ ಬಂದಾಗ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆ ಗರ್ಭಿಣಿ ಎಂಬುದು ತಿಳಿದುಬಂದಿದೆ. ಅನುಮಾನಗೊಂಡ ವೈದ್ಯರು ಮಾಹಿತಿ ನೀಡಿದ ಹಿನ್ನೆಲೆ ಪೊಲೀಸರು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ತಾನು ಗೋಕರ್ಣದ ರಾಮತೀರ್ಥ ದೇವಸ್ಥಾನದಲ್ಲಿ ಮದುವೆಯಾಗಿದ್ದೇನೆ ಎಂದು ಬಾಲಕಿ ಹೇಳಿಕೆ ನೀಡಿದಾಗ ಬಾಲ್ಯ ವಿವಾಹದ ಸಂಗತಿ ಬಹಿರಂಗವಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ಇನ್ಯಾರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದ್ದು, ಬಾಲ್ಯ ವಿವಾಹದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಹಾಗೂ ಜಾಗೃತಿ ಅಭಿಯಾನಗಳು ಇನ್ನಷ್ಟು ಬಲಪಡಿಸುವ ಅಗತ್ಯತೆ ಹೆಚ್ಚಾಗಿದೆ.

ಕಾನೂನು ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದು ಅಪರಾಧ. “ಪ್ರೊಹಿಬಿಷನ್ ಆಫ್ ಚೈಲ್ಡ್ ಮ್ಯಾರೇಜ್ ಆಕ್ಟ್” ಪ್ರಕಾರ ಇಂಥ ಮದುವೆಗಳು ಗಂಭೀರ ಅಫರಾಧವಾಗಿದ್ದು, ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಕಾನೂನು ಇದೆ. ಇದರ ಜತೆಗೆ ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಶಾರೀರಿಕ ಸಂಬಂಧ ಹೊಂದಿರುವುದು ಪೋಕ್ಸೋ ಕಾಯ್ದೆ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ.

ವಿಲಕ್ಷಣ ಬಾಲ್ಯ ವಿವಾಹದಿಂದ ತರುಣಿಯರು ಮಾನಸಿಕ ಹಾಗೂ ಶಾರೀರಿಕವಾಗಿ ಸಿದ್ಧರಾಗುವ ಮುನ್ನ ಮದುವೆಯ ಹೊರೆ ಹೊರುವಂತಾಗುತ್ತದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಅಪ್ರಾಪ್ತೆಯನ್ನು ಪುಸಲಾಯಿಸಿ ಬಾಲ್ಯ ಮದುವೆಯಾಗಿರುವ ಹಾಗೂ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಂಕೋಲಾ ಪೊಲೀಸ್ ಠಾಣೆ ಸಿಪಿಐ ಚಂದ್ರಶೇಖರ ಮಠಪತಿ ಹೇಳಿದರು. ಸಂತ್ರಸ್ತೆಯೊಂದಿಗೆ ಆಪ್ತ ಸಮಾಲೋಚನೆ ನಡೆಸಿದಾಗ ಈ ಘಟನೆ ಕುರಿತು ಸಮಾಜದಲ್ಲಿ ಇನ್ನೂ ಜಾಗೃತಿ ಕೊರತೆಯಿರುವುದನ್ನು ತೋರಿಸುತ್ತದೆ. ಶಿಕ್ಷಣ, ಅರಿವು ಹಾಗೂ ಪೋಷಕರ ಜವಾಬ್ದಾರಿಯಿಂದ ಇಂಥ ಘಟನೆಗಳನ್ನು ತಡೆಗಟ್ಟಲು ಸಾಧ್ಯ. ಬಾಲ್ಯವಿವಾಹವು ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಭವಿಷ್ಯವನ್ನು ಕತ್ತಲೆಗೆ ತಳ್ಳುತ್ತದೆ ಎಂದು ಅಂಕೋಲಾ ಮಹಿಳಾ ಸಾಂತ್ವನ ಕೇಂದ್ರ ಪಲ್ಲವಿ ನಾಯ್ಕ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೆ. 27ರಿಂದ ನೀರಿಗಾಗಿ ಹೆಜ್ಜೆ ಹಾಕಿ ಜನಜಾಗೃತಿ ಪಾದಯಾತ್ರೆ
ಸಮಾಜಸೇವೆ ಗುಣ ಬೆಳೆಸಿಕೊಳ್ಳಿ: ಅಭಿನವ ಮೃತ್ಯುಂಜಯ ಸ್ವಾಮೀಜಿ