ಜನರ ಜ್ಞಾನ ವಿಕಾಸಕ್ಕೆ ಪುಸ್ತಕಗಳು ಬಹುಮುಖ್ಯ: ಬರಗೂರು ರಾಮಚಂದ್ರಪ್ಪ

KannadaprabhaNewsNetwork |  
Published : Feb 18, 2026, 02:30 AM IST
ಫೋಟೋವಿವರ- (17ಎಚ್‌ಪಿಟಿ1) ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಮಂಗಳವಾರ ನಡೆದ 34 ನೇ ನುಡಿಹಬ್ಬದ ಪ್ರಯುಕ್ತ ಪ್ರಸಾರಾಂಗವು ಹಮ್ಮಿಕೊಂಡಿದ್ದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿ.ವಿ. ಸಂಸ್ಥಾಪಕ ಕುಲಪತಿ ಡಾ. ಚಂದ್ರಶೇಖರ ಕಂಬಾರ ಅವರನ್ನು ಸನ್ಮಾನಿಸಿ, ಗೌರವಿಸಿದರು | Kannada Prabha

ಸಾರಾಂಶ

. ಮನುಷ್ಯ ಜ್ಞಾನ, ಮನುಷ್ಯತ್ವ ಪ್ರಸಾರ ಮಾಡುವಂತಹ ಪುಸ್ತಕಗಳು ಹೊರಬರುವುದು ಪ್ರಸ್ತುತ ಸಂದರ್ಭಕ್ಕೆ ಅಗತ್ಯವಾಗಿದೆ ಎಂದು ಹಿರಿಯ ವಿದ್ವಾಂಸರು ಮತ್ತು ಸಂಸ್ಕೃತಿ ಚಿಂತಕ ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.

ಹೊಸಪೇಟೆ: ಜನರ ಜ್ಞಾನ ವಿಕಾಸಕ್ಕೆ ಕಾರಣವಾಗುವ ಪುಸ್ತಕಗಳು ಬಹುಮುಖ್ಯವಾಗಿವೆ. ಮನುಷ್ಯ ಜ್ಞಾನ, ಮನುಷ್ಯತ್ವ ಪ್ರಸಾರ ಮಾಡುವಂತಹ ಪುಸ್ತಕಗಳು ಹೊರಬರುವುದು ಪ್ರಸ್ತುತ ಸಂದರ್ಭಕ್ಕೆ ಅಗತ್ಯವಾಗಿದೆ ಎಂದು ಹಿರಿಯ ವಿದ್ವಾಂಸರು ಮತ್ತು ಸಂಸ್ಕೃತಿ ಚಿಂತಕ ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಮಂಗಳವಾರ ನಡೆದ 34ನೇ ನುಡಿಹಬ್ಬದ ಪ್ರಯುಕ್ತ ಪ್ರಸಾರಾಂಗ ಹಮ್ಮಿಕೊಂಡಿದ್ದ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಇಂದು ಪ್ರಸಾರಾಂಗಗಳು ಭೂತ ಮತ್ತು ಭವಿಷ್ಯದ ಚಿಂತನೆಗಳ ಜೊತೆಗೆ ಹೆಚ್ಚು ಹೆಚ್ಚು ವರ್ತಮಾನದ ಜೊತೆ ಮುಖಾಮುಖಿಯಾಗುವ, ಅನುಸಂಧಾನಗೊಳ್ಳುವ ಪುಸ್ತಕಗಳ ಪ್ರಕಟಣೆಗೆ ಒತ್ತು ನೀಡಬೇಕು. ಇತ್ತೀಚಿಗೆ ವಾಣಿಜ್ಯ, ವಾಸ್ತುಶಿಲ್ಪ, ಫ್ಯಾಶನ್, ತಂತ್ರಜ್ಞಾನ, ಹೊಟೇಲ್ ಮ್ಯಾನೇಜ್‌ಮೆಂಟ್ ಶಿಸ್ತುಗಳು ಮುನ್ನಲೆಯಲ್ಲಿದ್ದು, ಮಾನವಿಕ ಶಿಸ್ತುಗಳನ್ನು ಅಧ್ಯಯನ ಮಾಡುವವರ ಪ್ರಮಾಣ ಶೇ. 5ರಷ್ಟಿದೆ. ಮಾನವಿಕ ಜ್ಞಾನ ಶಿಸ್ತುಗಳಿಗೆ ಹಿನ್ನಡೆಯಾಗುತ್ತಿದೆ. ಬದುಕನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಾನವಿಕ ಜ್ಞಾನಗಳ ಅಗತ್ಯವಿದೆ ಎಂದರು.

ವಿಶ್ವವಿದ್ಯಾಲಯಗಳು ಯಾವತ್ತೂ ಮತಿಯವಾಗಬಾರದು ಎಂದು ನಾನು ಭಾವಸಿಕೊಂಡಿದ್ದೇನೆ. ನನ್ನ ದೃಷ್ಷಿಯಲ್ಲಿ ಕನ್ನಡ ಎಂದರೆ ಜಾತ್ಯಾತೀತ ಭಾಷೆ, ಕನ್ನಡ ಎಂದರೆ ಸೌಹಾರ್ದ, ಸಮಾನತೆ ಸಾರುವಂತಹ ಕನ್ನಡದಲ್ಲಿ ಸಾವಿರಾರು ಕೃತಿಗಳು ಹೊರಬಂದಿವೆ. ಎಲ್ಲ ಜಾತಿ, ಧರ್ಮದವರು ಸಾಹಿತ್ಯ ಕಟ್ಟುತ್ತ ಬಂದಿದ್ದಾರೆ. ಕನ್ನಡ ಸಮಾಜದೊಳಗೆ ಕ್ರಿಯಾಶೀಲರಾಗಿದ್ದಾರೆ. ಆದ್ದರಿಂದ ಕನ್ನಡವನ್ನು ಕೇಂದ್ರವನ್ನಾಗಿಟ್ಟುಕೊಂಡಿರುವ ಮತ್ತು ಸಂಶೋಧನೆ ಜೀವಾಳವಾಗಿಸಿಕೊಂಡಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಹೆಚ್ಚು ಬೆಂಬಲ ಸಿಗಬೇಕು ಎಂದರು.

ಇತ್ತೀಚಿಗೆ ಸಂವಾದ ಕಡಿಮೆಯಾಗಿ, ಸಂವಾದ ಜಾಗಕ್ಕೆ ವಿವಾದ ಬರುತ್ತಿದೆ. ವಿವೇಕ ಜಾಗಕ್ಕೆ ಉದ್ರೇಕ ಬರುತ್ತಿದೆ. ಈ ಉದ್ರೇಕ ಏನು ಬೇಕಾದರೂ ಮಾಡಬಹುದು. ಇಂಥ ಸಂದರ್ಭದಲ್ಲಿ ಜಾತಿ ಮೂಲವಾದ, ಧರ್ಮ ಮೂಲವಾದದಂತಹ ದ್ವೇಷಗಳನ್ನು ಮೀರಿದ ಒಂದು ಓದುವಿಕೆ ಕಟ್ಟುವುದು ಇದೆಯಲ್ಲ. ಅದು ವಿಶ್ವವಿದ್ಯಾಲಯಗಳ ಕೆಲಸವಾಗಬೇಕು ಎಂದರು.

ಪುಸ್ತಕಗಳ ಓದಿನ ಪ್ರವೇಶ ಪೂರ್ವಾಗ್ರಹಗಳಿಂದ ಮುಕ್ತವಾಗಿರಬೇಕು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬೇಕು. ಆದರೆ, ದ್ವೇಷಗಳಿರಬಾರದು, ಬೌದ್ಧಿಕ ವಿಭಜಕ ಪ್ರವೃತ್ತಿಗಳಿರಬಾರದು. ಲೇಖಕರಾದ ನಾವೆಲ್ಲರೂ ಜನರಿಗೆ ಸತ್ಯವನ್ನು ಹೇಳುವ ಮನುಷ್ಯರಾಗೋಣ ಎಂದು ತಿಳಿಸಿದರು.

ತಂತ್ರಜ್ಞಾನ ಇಂದು ಜ್ಞಾನವಾಗಿ ಉಳಿದಿಲ್ಲ, ಉದ್ಯಮವಾಗಿ ಹೋಗಿದೆ. ಮನುಷ್ಯ ಜ್ಞಾನಕ್ಕಿಂತ ತಂತ್ರಜ್ಞಾನ ಮೇಲುಗೈ ಪಡೆದಿದೆ. ತಂತ್ರಜ್ಞಾನವನ್ನು ವಿವೇಕ ಮತ್ತು ಔಚಿತ್ಯಪೂರ್ಣವಾಗಿ ಬಳಸಬೇಕು. ಎಂದಿಗೂ ಮನುಷ್ಯನ ಜ್ಞಾನಕ್ಕೆ ಮೊದಲ ಆದ್ಯತೆ ಸಿಗಬೇಕು. ತಂತ್ರಜ್ಞಾನವನ್ನು ಸೃಷ್ಟಿ ಮಾಡಿದ್ದು ಮನುಷ್ಯನ ಜ್ಞಾನ ಎನ್ನುವುದನ್ನು ಮರೆಯಬಾರದು. ತಂತ್ರಜ್ಞಾನವನ್ನು ಯಾವುದಕ್ಕೆ ಎಷ್ಟರ ಮಟ್ಟಿಗೆ ಬಳಸಿಕೊಳ್ಳಬೇಕು ಎನ್ನುವ ವಿವೇಕ ಮತ್ತು ಔಚಿತ್ಯ ಪಡೆದುಕೊಳ್ಳಬೇಕು ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಡಾ. ಚಂದ್ರಶೇಖರ ಕಂಬಾರ ಮಾತನಾಡಿ, ವಿಶ್ವವಿದ್ಯಾಲಯದ ಪ್ರಸಾರಾಂಗದ ಪುಸ್ತಕಗಳನ್ನು ಬಿಡುಗಡೆ ಮಾಡಲು ನನ್ನನ್ನು ಆಹ್ವಾನಿಸಿರುವುದು ಖುಷಿ ನೀಡಿದೆ. ವಿಶ್ವವಿದ್ಯಾಲಯಕ್ಕೆ ಒಳಿತಾಗಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಡಾ. ಚಂದ್ರಶೇಖರ ಕಂಬಾರ ಅವರನ್ನು ಸನ್ಮಾನಿಸಲಾಯಿತು. ಕನ್ನಡ ವಿ.ವಿ. ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಪ್ರಸಾರಾಂಗ ನಿರ್ದೇಶಕ ಡಾ. ಪಿ. ಮಹಾದೇವಯ್ಯ ಸ್ವಾಗತಿಸಿದರು. ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಉಪಸ್ಥಿತರಿದ್ದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಹಾಯಕ ಕುಲಸಚಿವ ಎಂ.ಎಂ. ಶಿವಪ್ರಕಾಶ್ ನಿರೂಪಿಸಿದರು. ಪ್ರಕಟಣಾ ಸಹಾಯಕ ಡಾ.ಎಸ್. ಮೋಹನ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೆ. 27ರಿಂದ ನೀರಿಗಾಗಿ ಹೆಜ್ಜೆ ಹಾಕಿ ಜನಜಾಗೃತಿ ಪಾದಯಾತ್ರೆ
ಸಮಾಜಸೇವೆ ಗುಣ ಬೆಳೆಸಿಕೊಳ್ಳಿ: ಅಭಿನವ ಮೃತ್ಯುಂಜಯ ಸ್ವಾಮೀಜಿ