ಕಾಳಿ ನದಿ ನೀರಾವರಿ ಯೋಜನೆ ಅಂತಿಮ ಹಂತಕ್ಕೆ: ಆರ್.ವಿ. ದೇಶಪಾಂಡೆ

KannadaprabhaNewsNetwork |  
Published : Feb 18, 2026, 02:30 AM IST
ಶಾಸಕ ಆರ್.ವಿ. ದೇಶಪಾಂಡೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕಾಳಿ ನದಿ ಯೋಜನೆಗೆ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ. ಹೀಗಿದ್ದೂ ಕೆಲವು ರೈತ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಹೋರಾಟದ ಮಾತನಾಡಿದ್ದಾರೆ. ಅದನ್ನು ಏನೆಂದು ತಿಳಿಯಬೇಕು ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಪ್ರಶ್ನಿಸಿದರು.

ಹಳಿಯಾಳ: ಕಾಳಿ ನದಿ ನೀರಾವರಿ ಯೋಜನೆ ಅಂತಿಮ ಹಂತಕ್ಕೆ ಬಂದಿದೆ. ಯೋಜನೆಗೆ ಕ್ಯಾಬಿನೆಟ್ ಒಪ್ಪಿಗೆ ದೊರಕಿದೆ ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯ ಅನುಷ್ಠಾನದಲ್ಲಿ 12ಕ್ಕಿಂತ ಹೆಚ್ಚು ಇಲಾಖೆಗಳು ಕೈಜೋಡಿಸಿವೆ. ಈ ಯೋಜನೆಯಡಿ ಪೈಪ್‌ಲೈನ್‌ ಅಳವಡಿಸಲು ಆರಂಭದಲ್ಲಿ ರೈತರಿಂದ ವಿರೋಧ ವ್ಯಕ್ತವಾದರೂ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ. ಹೀಗಿದ್ದೂ ಕೆಲವು ರೈತ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಹೋರಾಟದ ಮಾತನಾಡಿದ್ದಾರೆ. ಅದನ್ನು ಏನೆಂದು ತಿಳಿಯಬೇಕು ಎಂದು ಪ್ರಶ್ನಿಸಿದರು.

ಕಾಳಿನದಿ ಮತ್ತು ಜೋಯಿಡಾದಲ್ಲಿ ಹರಿಯುವ ಪಾಂಡ್ರಿ ನದಿ ನಮ್ಮ ಕ್ಷೇತ್ರಕ್ಕೆ ವರದಾನವಾಗಿದೆ. ಬೇಸಿಗೆಯಲ್ಲಿ ಬೇರೆ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾದರೆ, ಕಾಳಿ ಹಾಗೂ ಪಾಂಡ್ರಿ ನದಿಯಲ್ಲಿ ಹರಿವು ಕಡಿಮೆಯಾಗುವುದಿಲ್ಲ. ಕಾಳಿ ನದಿಯಿಂದ ಹಳಿಯಾಳ ತಾಲೂಕಿನಲ್ಲಿ ನೀರಾವರಿ ಯೋಜನೆಗೆ ನೀರು ದೊರೆಯಲಿದ್ದು, ಬಹುಗ್ರಾಮಗಳಿಗೂ ಕುಡಿಯುವ ಜೀವಜಲ ಲಭ್ಯವಾಗಲಿದೆ. ಹಳಿಯಾಳ ಮತ್ತು ದಾಂಡೇಲಿ ನಗರಗಳಿಗೆ ನಿರಂತರ ನೀರು ಯೋಜನೆಯಡಿ ಕಾಳಿನದಿ ನೀರು ತಲುಪಲಿದೆ. ಇನ್ನೂ ಪಾಂಡ್ರಿ ನದಿಯ ಮೂಲಕ ಜೋಯಿಡಾ ತಾಲೂಕಿನ ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ ಎಂದರು.

ಕೆರೆಗಳ ನವೀಕರಣ: ಕಾಳಿನದಿ ನೀರಾವರಿ ಯೋಜನೆಯ ಸಿದ್ಧತೆಗಾಗಿ ಹಳಿಯಾಳ ತಾಲೂಕಿನ ಕೆರೆಗಳ ನವೀಕರಣಕ್ಕಾಗಿ ಸಣ್ಣ ನೀರಾವರಿ ಇಲಾಖೆಯಿಂದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ನೀರಾವರಿ ಯೋಜನೆಯನ್ನು ತಾಂತ್ರಿಕ ಪರಿಶೀಲನಾ ಕಾರ್ಯ ಹಾಗೂ ಟೆಸ್ಟಿಂಗ್ ಕಾರ್ಯ ಮುಗಿದ ಆನಂತರ ಹಂತ ಹಂತವಾಗಿ ಆರಂಭಿಸಲಾಗುವುದು ಎಂದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸಹ ಹಂತ ಹಂತವಾಗಿ ಪ್ರತಿ ಗ್ರಾಮಗಳಿಗೆ ನೀರು ಪೂರೈಕೆ ಆರಂಭಿಸುವ ಮೂಲಕ ಎಲ್ಲ 113 ಗ್ರಾಮಗಳಿಗೆ ನೀರು ಪೂರೈಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ರವಿ ತೋರಣಗಟ್ಟಿ, ವಿ.ಆರ್.ಡಿ. ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೆ. 27ರಿಂದ ನೀರಿಗಾಗಿ ಹೆಜ್ಜೆ ಹಾಕಿ ಜನಜಾಗೃತಿ ಪಾದಯಾತ್ರೆ
ಸಮಾಜಸೇವೆ ಗುಣ ಬೆಳೆಸಿಕೊಳ್ಳಿ: ಅಭಿನವ ಮೃತ್ಯುಂಜಯ ಸ್ವಾಮೀಜಿ