ಪ್ರಾಮಾಣಿಕ ಅಧಿಕಾರಿಗಳಿಂದ ಮಾತ್ರ ಕ್ಷೇತ್ರ ಅಭಿವೃದ್ಧಿ: ಶಾಸಕ ಗುಡಗುಂಟಿ

KannadaprabhaNewsNetwork |  
Published : Nov 30, 2024, 12:50 AM IST
ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶಾಸಕ ಜಗದೀಶ ಗುಡಗುಂಟಿ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಅಧಿಕಾರಿಗಳು ತಮ್ಮ ಇಲಾಖೆಯಿಂದ ಆಗಬೇಕಾದ ಕಾಮಗಾರಿಗಳ ಬಗ್ಗೆ ನಿರ್ದಿಷ್ಟವಾದ ಯೋಜನೆ ರೂಪಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಜಮಖಂಡಿ

ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಜಗದೀಶ ಗುಡಗುಂಟಿ ಅಭಿಪ್ರಾಯ ಪಟ್ಟರು.

ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರಿಗಳು ತಮ್ಮ ಇಲಾಖೆಯಿಂದ ಆಗಬೇಕಾದ ಕಾಮಗಾರಿಗಳ ಬಗ್ಗೆ ನಿರ್ದಿಷ್ಟವಾದ ಯೋಜನೆ ರೂಪಿಸಿಕೊಳ್ಳಬೇಕು. ನುರಿತ ತಜ್ಞರಿಂದ ವರದಿ ತಯಾರಿಸಿಕೊಂಡು ಇಂಥಹ ಕಾರ್ಯಗಳಾಗಬೇಕೆಂಬ ಸ್ಪಷ್ಟತೆಯಿಂದ ಸಭೆಯ ಗಮನಕ್ಕೆ ತಂದರೆ ಅದರ ಬಗ್ಗೆ ಪ್ರಯತ್ನ ಮಾಡಬಹುದು. ಸಂಬಂಧಪಟ್ಟ ಇಲಾಖೆಯ ಸಚಿವರನ್ನು ಭೇಟಿ ಮಾಡಿ ಕಾಮಗಾರಿಗೆ ಅನುಮತಿ ಪಡೆಯಬಹುದು. ಅದನ್ನು ಬಿಟ್ಟು ಕೇವಲ ವರದಿ ಸಲ್ಲಿಸಿ ಹೋದರೆ ಯಾವ ಪ್ರಯೋಜನ ಇಲ್ಲ. ಅಭಿವೃದ್ಧಿಯೂ ಆಗುವುದಿಲ್ಲವೆಂದರು.

ನಗರಸಭೆಯಿಂದ ಹಲವಾರು ಕಾಮಗಾರಿ ಆಗಬೇಕಿದೆ. ಲಕ್ಕನಕೆರೆಯ ಹತ್ತಿರದ ಬೈಪಾಸ್‌ ರಸ್ತೆಯಲ್ಲಿ ನೀರು ಸಂಗ್ರಹವಾಗದಂತೆ ಕ್ರಮ ಜರುಗಿಸುವುದು. ಯುಜಿಡಿ ಕೆಲಸಗಳು, ಮಹಿಳೆಯರ ಶೌಚಾಲಯ ನಿರ್ಮಾಣ, ಬೀದಿಬದಿ ವ್ಯಾಪಾರಸ್ಥರಿಗೆ ಶಾಶ್ವತ ಮಾರುಕಟ್ಟೆ, ಬೀದಿದೀಪಗಳ ಅಳವಡಿಕೆ, ದೊಡ್ಡ ಚರಂಡಿಗಳ ಹೂಳೆತ್ತುವುದು ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳಾಬೇಕು. ಅದಕ್ಕೆ ಬೇಕಾದ ಯೋಜನೆ ಸಿದ್ಧ ಪಡಿಸಬೇಕು ಎಂದು ಸೂಚಿಸಿದರು.

ಪೌರಾಯುಕ್ತ ಜ್ಯೋತಿಗಿರೀಶ ಮಾತನಾಡಿ, ಎಲ್ಲ ಕಾಮಗಾರಿಗಳ ಕುರಿತು ವರದಿ ಸಿದ್ಧ ಪಡಿಸಿದ್ದಾಗಿ ತಿಳಿಸಿದರು. ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಮಗಾರಿ ಕೈಗೆತ್ತಿಕೊಂಡು ನಗರದ ನಿವಾಸಿಗಳಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು. ಕೃಷಿ ಇಲಾಖೆಯಿಂದ ಕೃಷಿ ಹೊಂಡಗಳ ನಿರ್ಮಾಣಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಕಡಲೆ ಹಾಗೂ ಜೋಳದ ಬೆಳೆಗಳ ಪ್ರಾತ್ಯಕ್ಷಿಕೆ ಏರ್ಪಡಿಸಲಾಗುವುದೆಂದು ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ತಾಲೂಕು ಆರೋಗ್ಯ ಅಧಿಕಾರಿ ಗೈಬುಸಾಬ ಗಲಗಲಿ ಮಾತನಾಡಿ, ಲ್ಯಾಪ್ರೋಸ್ಕೋಪಿಕ್‌ ಸರ್ಜನ್‌ ಇಲ್ಲದ ಕಾರಣ ಅವಶ್ಯವಿರುವ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಔಷಧಿ ಕೊರತೆ ಇಲ್ಲ, ಪುರುಷರ ಸಂತಾನ ಹರಣ ಚಿಕಿತ್ಸೆಗೆ ಜನರ ಸಹಕಾರ ವಿಲ್ಲದ ಕಾರಣ ಗುರಿಮುಟ್ಟಲಾಗುತ್ತಿಲ್ಲ. ಟುಬ್ಯಾಕ್ಟಮಿ (ಮಹಿಳೆರ ಸಂತಾನ ಹರಣ) ಪ್ರಕರಣಗಳಲ್ಲಿ ನಿಗದಿತ ಗುರಿ ಸಾಧಿಸಲಾಗಿದೆ. ಎಚ್‌1ಎನ್‌1, ಡೆಂಘೀ ಪ್ರಕರಣಗಳು ದಾಖಲಾಗಿಲ್ಲ. ಟಿಬಿ, ಮಲೇರಿಯಾ, ಕುಷ್ಟರೋಗ, ಮಧುಮೇಹ, ರಕ್ತದೊತ್ತಡದ ರೋಗಿಗಳಿಗೆ ವೈದ್ಯೋಪಚಾರ ನೀಡಲಾಗುತ್ತಿದೆ. ಕಳೆದ ಎಫ್ರಿಲ್‌ನಿಂದ ಅಕ್ಟೋಬರ್‌ ವರೆಗೆ 4216 ಹೆರಿಗೆಗಳಾಗಿವೆ, ಶೇ.30ರಷ್ಟು ಸಿಜರಿನ್‌ ಹರಿಗೆ ಮಾಡಿಸಲಾಗಿದೆ ಎಂದು ವಿವರಿಸಿದರು.

ಸಮಾಜಕಲ್ಯಾಣ ಇಲಾಖೆಗೆ ಅನುದಾನ, ಸಿಬ್ಬಂದಿ ಕೊರತೆ ಇದೆ. 33 ಹುದ್ದೆಗಳ ಪೈಕಿ 14 ಹುದ್ದೆ ಖಾಲಿ ಇದೆ. ಅಲ್ಪಸಂಖ್ಯಾತರ ಇಲಾಖೆ ವಸತಿ ನಿಲಯಕ್ಕೆ ಕಟ್ಟಡ ಅವಶ್ಯಕ, ಎಸ್‌ಡಿಎಂ ವಿದ್ಯಾರ್ಥಿನಿಲಯಕ್ಕೆ ಕಟ್ಟಡ ಅವಶ್ಯಕ, ಆಯುಷ್‌ ಇಲಾಖೆಯಲ್ಲಿ 9 ಜನ ಸಿಬ್ಬಂದಿ ಪೈಕಿ ಕೇವಲ ಇಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿರುವುದಾಗಿ ಅಧಿಕಾರಿಗಳು ಅಸಹಾಯಕತೆ ತೋಡಿಕೊಂಡರು. ಪಶುಪಾಲನೆ ಇಲಾಖೆ, ರೇಶ್ಮೆ ಇಲಾಖೆಯಲ್ಲು ಸಿಬ್ಬಂದಿಯ ಕೊರತೆ ಇದೆ ಎಂದು ತಿಳಿಸಿದರು. ನೀರಾವರಿ ಇಲಾಖೆಗೆ ಅನುದಾನದ ಕೊರತೆ ಇದೆ ಇದರಿಂದ ಕಾಲುವೆ ಸ್ವಚ್ಛಗೊಳಿಸಲು ಸಾಧ್ಯವಾಗಿಲ್ಲ ಎಂದರು. ಮೀನುಗಾರಿಕೆ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇದೆ. ಸವಳು-ಜವಳು ಇದ್ದ ಭೂಮಿಗಳಲ್ಲಿ ಮೀನು ಸಾಕಾಣಿಕೆ ಮಾಡಲು ಬಯಸುವರಿಗೆ ಸರ್ಕಾರದಿಂದ ಮೀನಿನ ಹೊಂಡ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ. ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಅಧಿಕಾರಿ ಪ್ರಕಾಶ ಭಜಂತ್ರಿ ಮಾಹಿತಿ ನೀಡಿದರು. ತಾಪಂ ಅಧಿಕಾರಿ ಸಂಜೀವ ಜುನ್ನೂರ, ತಹಸೀಲ್ದಾರ್‌ ಸದಾಶಿವ ಮಕ್ಕೊಜಿ, ತಾಪಂ ಆಡಳಿತಾಧಿಕಾರಿ ಸುಜಾತಾ ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು