ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಭಾನುವಾರ ಕುಂಬೂರು ಖಾಸಗಿ ಹೋಮ್ ಸ್ಟೇಯಲ್ಲಿ ನಡೆಯಿತು.ಸಿಗ್ಮಾ ನೆಟ್‌ವರ್ಕ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶರಣ್ ಪೂಣಚ್ಚ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಪತ್ರಕರ್ತನು ಕೇವಲ ಸುದ್ದಿಯನ್ನು ಬರೆಯುವ ವ್ಯಕ್ತಿ ಮಾತ್ರವಲ್ಲ, ಸಮಾಜದ ಕಣ್ಣಾಗಿಯೂ, ಕಿವಿಯಾಗಿಯೂ ಕೆಲಸ ಮಾಡುತ್ತಾರೆ. ಒತ್ತಡದ ಮಧ್ಯೆ ಕೆಲಸ ಮಾಡುವ ಪತ್ರಕರ್ತರಿಗೆ ಭದ್ರತೆಯ ಅವಶ್ಯಕತೆಯಿದೆ. ಸರ್ಕಾರ ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸಬೇಕು. ಪತ್ರಿಕೋದ್ಯಮದಲ್ಲಿ ಜಾತಿ, ಧರ್ಮ, ವರ್ಣ, ರಾಜಕೀಯ ಹೊರತುಪಡಿಸಿ ಉತ್ತಮ ಸಮಾಜದ ಹಿತದೃಷ್ಟಿಯಲ್ಲಿ ಕೆಲಸ ಮಾಡುವ ನಿಜವಾದ ಪತ್ರಕರ್ತ ಎನಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು. ಸಂಘದ ಜಿಲ್ಲಾಧ್ಯಕ್ಷೆ ಸವಿತಾ ರೈ ಮಾತನಾಡಿ, ಪತ್ರಿಕೋದ್ಯಮದ ನೈತಿಕತೆ, ಸಾರ್ವಜನಿಕರ ಧ್ವನಿಯನ್ನು ನಿರ್ಭೀತಿಯಾಗಿ ಸಮಾಜಕ್ಕೆ ತಿಳಿಸುವಲ್ಲಿ ಪತ್ರಕರ್ತರ ಪಾತ್ರ ಮತ್ತು ಸಮಾಜದ ಪರಿವರ್ತನೆಗೆ ಮಾಧ್ಯಮದ ಪ್ರಭಾವ ಪಾತ್ರದ ಬಗ್ಗೆ ಮಾತನಾಡಿದರು. 90 ವರ್ಷಗಳ ಸುದೀರ್ಘ ಇತಿಹಾಸ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅಂತಹ ಸಂಘದ ಅಂಗಸಂಸ್ಥೆಯಾಗಿ ಜಿಲ್ಲಾ ಘಟಕ ಕೆಲಸ ಮಾಡುತ್ತಿದೆ. ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಸಂಘ ಕೆಲಸ ಮಾಡುತ್ತಿದೆ. ಅಧ್ಯಕ್ಷರು ಮತ್ತು ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡುವುದರೊಂದಿಗೆ, ಸತ್ಯ ಸುದ್ದಿಯನ್ನು ಸಮಾಜಕ್ಕೆ ನೀಡಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನೂತನ ಅಧ್ಯಕ್ಷ ವಿಶ್ವಕುಂಬೂರು ಮಾತನಾಡಿ, ಸಂಘದ ಭವಿಷ್ಯದ ಯೋಜನೆಗಳನ್ನು ವಿವರಿಸಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ವಿಜಯ್‌ಹಾನಗಲ್, ಸಂಘದ ಮುಂದಿನ ಸಾಲಿನ ಜಿಲ್ಲಾಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಖಚಾಂಚಿ ಬಿ.ಎ.ಭಾಸ್ಕರ್ ಹಾಗು ಪದಾಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.