ಹುಬ್ಬಳ್ಳಿ:
ಉಡುಪಿಯ ರಾಷ್ಟ್ರಕವಿ ಎಂ. ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಹೈಯರ್ ಎಜುಕೇಷನ್ ಟ್ರಸ್ಟ್ ವತಿಯಿಂದ ನೀಡಲಾಗುವ "ಸೇಡಿಯಾಪು ಕೃಷ್ಣಭಟ್ಟರ " ಪ್ರಶಸ್ತಿಯನ್ನು ಈಚೆಗೆ ಸಾಹಿತಿ ಡಾ. ಬಿ.ವಿ. ಶಿರೂರ ಅವರಿಗೆ ಪ್ರದಾನ ಮಾಡಲಾಯಿತು,ಇಲ್ಲಿನ ಮಂಜುನಾಥ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿಯಿಂದ ಆಗಮಿಸಿದ್ದ ಗೋವಿಂದ ಪೈ ಸಂಶೋಧನ ಕೇಂದ್ರದ ಕಾರ್ಯದರ್ಶಿ ಪ್ರೊ. ಜಗದೀಶ್ ಶೆಟ್ಟಿ ಮತ್ತು ಪಾದೇಕಲ್ ವಿಷ್ಣು ಭಟ್, ವೆಂಕಟೇಶ್, ವಿನಾಯಕ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ನಾಡಿನ ಸಾಕ್ಷಿ ಪ್ರಜ್ಞೆ, ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಡಾ. ಬಿ.ವಿ. ಶಿರೂರು ಅವರಿಗೆ 2024ನೇ ಸಾಲಿನ ಪ್ರಶಸ್ತಿ ನೀಡುತ್ತಿರುವುದು ನಮ್ಮ ಸಂಸ್ಥೆಯ ಹೆಮ್ಮೆಯ ಸಂಗತಿ. ಶಾಸನ, ಗ್ರಂಥ ಸಂಪಾದನೆ, ಜೈನ ಸಾಹಿತ್ಯ, ವೀರಶೈವ ಸಾಹಿತ್ಯ, ವಚನ ಮುಂತಾದ ಕ್ಷೇತ್ರಗಳಲ್ಲಿ ಕೆಲಸಮಾಡಿ ಹೆಸರಾಗಿದ್ದಾರೆ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಬಿ.ವಿ. ಶಿರೂರು, ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ವ್ಯಾಕರಣ ಮತ್ತು ಛಂದಸ್ಸಿನಂಥ ಶಾಸ್ತ್ರೀಯ ಪಾಂಡಿತ್ಯವುಳ್ಳ ಪಠ್ಯವನ್ನು ವಿಶ್ವವಿದ್ಯಾಲಯಗಳು ಕಡಿತಗೊಳಿಸಿ ಕನ್ನಡ ಭಾಷಾ ಗಟ್ಟಿತನವನ್ನು ಹಾಳು ಮಾಡುತ್ತಿರುವುದು ವಿಷಾದನೀಯ. ವರ್ತಮಾನದಲ್ಲಿ ಯುವಕರಿಗೆ ಗೋವಿಂದ ಪೈ ಮತ್ತು ಸೇಡಿಯಾಪು ಕೃಷ್ಣಭಟ್ಟರ ಶಾಸ್ತ್ರೀಯ ಪಾಂಡಿತ್ಯವನ್ನು ಪರಿಚಯಿಸುವ ಕೆಲಸ ಮಾಡಬೇಕು ಎಂದರು.ಪ್ರಾಚಾರ್ಯರಾದ ಪ್ರೊ. ಉಮಾ ನೆರ್ಲೆ, ಅಧ್ಯಕ್ಷತೆ ವಹಿಸಿದ ಡಾ. ವೀರಣ್ಣ ರಾಜೂರ ಮಾತನಾಡಿದರು. ಡಾ. ಸಣ್ಣವೀರಣ್ಣ ದೊಡ್ಡಮನಿ, ಡಾ. ಹನುಮಾಕ್ಷಿ ಗೋಗಿ, ಡಾ. ಧನವಂತ ಹಾಜವಗೋಳ. ಸುರೇಶ ಹೊರಕೇರಿ, ಎಸ್.ಎಂ. ಪಾಟೀಲ್, ಮಂಜುನಾಥ, ಡಾ. ಜಯಶ್ರೀ ಹಿರೇಮಠ, ಡಾ. ಪ್ರಭಾತಿ, ಕೃತಿಕಾ ಶಿರೂರು ಸೇರಿದಂತೆ ಹಲವರಿದ್ದರು.