ಕನ್ನಡಪ್ರಭ ವಾರ್ತೆ ಗುಡಿಬಂಡೆ
ಐತಿಹಾಸಿಕ ಹಿನ್ನೆಲೆಯ ಸುರಸದ್ಮಗಿರಿಯಲ್ಲಿ ಬೆಂಗಳೂರು ಮೂಲದ ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ ಗ್ರೂಪ್ ಫೌಂಡೇಷನ್, ಯೂತ್ ಫಾರ್ ಸೇವಾ ಹಾಗೂ ಸ್ಥಳೀಯ ಗ್ರಾಮ ವಿಕಾಸ ಸಂಸ್ಥೆಯ ವತಿಯಿಂದ ಬೀಜದುಂಡೆ ತಯಾರಿಕೆ ಹಾಗೂ ಬೆಟ್ಟದಲ್ಲಿ ಬೀಜದುಂಡೆಗಳ ಪ್ರಸರಣದ ಜೊತೆಗೆ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಟೆಕ್ಕಿಗಳು ಭಾಗವಹಿಸಿದ್ದರು.ಈ ವೇಳೆ ಫೌಂಡೇಷನ್‌ನ ನಿರ್ದೇಶಕ ನಿತಿನ್ ಶಾಸ್ತ್ರಿ ಮಾತನಾಡಿ, ನಮ್ಮ ಕಂಪನಿಯಲ್ಲಿ ಸುಮಾರು ಆರೂವರೆ ಸಾವಿರ ನೌಕರರಿದ್ದಾರೆ. ಪ್ರತಿ ವರ್ಷ ನಮ್ಮ ಕಂಪನಿಯ ವತಿಯಿಂದ ಈ ರೀತಿಯ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಸ್ವಚ್ಛತಾ ಅಭಿಯಾನ:ಗುಡಿಬಂಡೆ ಭಾಗದಲ್ಲಿ ಸುಂದರವಾದ ಪ್ರಕೃತಿಯಿದೆ. ಆ ಪ್ರಕೃತಿಯನ್ನು ಮತಷ್ಟು ಹೆಚ್ಚಿಸಲು ನಮ್ಮ ಕಡೆಯಿಂದ ಈ ಬೀಜದುಂಡೆ ತಯಾರಿಕೆ ಹಾಗೂ ಪ್ರಸರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೀಜದುಂಡೆಗಳ ಪ್ರಸರಣದ ಬಳಿಕ ನಮ್ಮ ಸಿಬ್ಬಂದಿಯಿಂದ ಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನ ಸಹ ಹಮ್ಮಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿಯೇ ಹೆಚ್ಚು ಕಾರ್ಯಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದರು.
ಫೌಂಡೇಷನ್ ನ ಸಿಬ್ಬಂದಿ ಆಲ್ಬರ್ಟ್ ಬೆಕ್ಕಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್, ಶುದ್ದ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್, ಪೀಠೋಪಕರಣಗಳು, ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆಯ ಕೋ ಆರ್ಡಿನೇಟರ್ ಮಂಜುನಾತ್ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಸಂಸ್ಥೆಯ ಮುಖ್ಯಸ್ಥ ಶ್ರೀಧರ ಸಾಗರ ಜೀ, ಯೂತ್ ಫಾರ್ ಸೇವಾ ಸಂಸ್ಥೆಯ ನಾಗರಾಜ್ ಭಟ್, ಪ್ರಶಾಂತ್, ವಾಹಿನಿ ಸಂಸ್ಥೆಯ ಸುರೇಶ್, ಚಲಪತಿ, ಪರಿಸರ ವೇದಿಕೆಯ ಗುಂಪು ಮರದ ಆನಂದ್, ಕಸಾಪ ಅಧ್ಯಕ್ಷ ಬಿ.ಮಂಜುನಾಥ್ ಸೇರಿದಂತೆ ಹಲವರು ಇದ್ದರು.