- ಅರಣ್ಯ ಅಧಿಕಾರಿಗಳ ಕಾರ್ಯಚರಣೆ । 3ವ್ಯಕ್ತಿಗಳ ಬಂಧನ
ತಾಲೂಕಿನ ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲೂರು ಗ್ರಾಮದ ಭಕ್ತವಾನಿ ಕಿರು ಅರಣ್ಯದಲ್ಲಿ ಸೋಮವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಚುಕ್ಕೆ ಜಿಂಕೆ ಮಾಂಸ ವಶಪಡಿಸಿಕೊಂಡಿದ್ದು 8 ಜನರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸದ್ಯ 3 ಜನರನ್ನು ಬಂಧಿಸಿದ್ದಾರೆ.
ಸಾಲೂರು ಗ್ರಾಮದ ಭಕ್ತವಾನಿ ಕಿರು ಅರಣ್ಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಭಂದಿಗಳು ಖಚಿತ ಮಾಹಿತಿ ಮೇರೆಗೆ ಅರಣ್ಯದಲ್ಲಿ ಹುಡುಕಾಟ ನಡೆಸಿದಾಗ ಜಿಂಕೆ ಮಾಂಸ ಹಾಗೂ ಜಿಂಕೆ ಕೊಂದ 8 ಆರೋಪಿಗಳು ಕಣ್ಣಿಗೆ ಬಿದ್ದಿದ್ದಾರೆ. ಅರಣ್ಯ ಇಲಾಖೆಯ ಸಿಬ್ಭಂದಿಗಳು ಆರೋಪಿಗಳನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ 5 ಆರೋಪಿಗಳು ಪರಾರಿಯಾಗಿದ್ದು 3 ಆರೋಪಿಗಳು ಸೆರೆ ಸಿಕ್ಕಿದ್ದಾರೆ.ಸೆರೆ ಸಿಕ್ಕ ಆರೋಪಿಗಳನ್ನು ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯ ಬಿಳಾಲುಕೊಪ್ಪ ಗ್ರಾಮದ ಲಕ್ಕುಂದ ಮಂಜುನಾಥ, ಲಕ್ಕುಂದದ ಅಣ್ಣಪ್ಪ ಹಾಗೂ ಬಿಳಾಲುಕೊಪ್ಪ ಗ್ರಾಮದ ಮಂಜುನಾಥ ಎಂದು ಗುರುತಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಉಳಿದ 5 ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಅರಣ್ಯ ಇಲಾಖೆಯವರು ಬಲೆ ಬೀಸಿದ್ದಾರೆ. ಸ್ಥಳದಲ್ಲಿದ್ದ ಜಿಂಕೆ ಮಾಂಸ,1 ನಾಡ ಕೋವಿ,1 ಚೀಲ, ಕತ್ತಿ, 3 ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.