ಕನ್ನಡಪ್ರಭ ವಾರ್ತೆ ಬನ್ನೂರು
ತಮಿಳುನಾಡು, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ ಮೊದಲಾದ ರಾಜ್ಯಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡ ವಿವಿಧ ರಾಜ್ಯದ ಡಿಸಿಸಿ ಬ್ಯಾಂಕ್‌ನ ಆಯ್ದ ಸದಸ್ಯರು, ಯಾಚೇನಹಳ್ಳಿ ಗ್ರಾಮದ ಪ್ರಾಥಮಿಕ ಸಹಕಾರ ಸಂಘಕ್ಕೆ ಭೇಟಿ ನೀಡಿದರು.
ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ಅವರನ್ನು ಬರಮಾಡಿಕೊಂಡು ಸದಸ್ಯರಿಗೆ ಸಹಕಾರ ಸಂಘದಲ್ಲಿ ಕೈಗೊಂಡ ವಿವಿಧ ಕಾರ್ಯಕ್ರಮದ ಬಗೆಗೆ ಮಾಹಿತಿ ನೀಡಿದರು.ಯಾಚೇನಹಳ್ಳಿ ಗ್ರಾಮದಲ್ಲಿ 2009ರಲ್ಲಿ ಆರಂಭಿಸಲಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಾರಂಭದ ಆದಾಯ 50 ಸಾವಿರಕ್ಕೆ ಸೀಮಿತವಾಗಿದ್ದು, ಇಂದು ಕೈಗೊಂಡ ವಿವಿಧ ಅಭಿವೃದ್ಧಿ ಕಾರ್ಯಗಳಿಂದ ಕೋಟಿ ವಹಿವಾಟನ್ನು ಕಾಣುವಂತಾಗಿದೆ ಎಂದರು.
ತಾಲೂಕಿನಲ್ಲಿ ಯಾಚೇನಹಳ್ಳಿ ಗ್ರಾಮ ಅಧಿಕ ಪಶುಗಳನ್ನು ಸಾಕುವ ಗ್ರಾಮವಾಗಿದ್ದು, ಇಲ್ಲಿ ನಿತ್ಯ ಹಾಲು ಹಾಕುವವರ ಸಂಖ್ಯೆ ಅಧಿಕವಾಗಿದೆ ಎಂದರು. ಹಾಲಿನ ಪೂರೈಕೆದಾರರಿಗೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, 10 ದಿನಗಳಲ್ಲಿಯೇ ಹಾಲಿನ ದರವನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ ಎನ್ನುವ ವಿಷಯವನ್ನು ತಿಳಿಸಿದರು.
ನಬಾರ್ಡ್ನಿಂದ ಸಾಲವನ್ನು ಪಡೆದು ಸಾಲವನ್ನು ಮರುಪಾವತಿ ಮಾಡುತ್ತಿರುವುದರಿಂದ ಅವರ ಸಹಕಾರ ಗ್ರಾಮಕ್ಕೆ ಬಹಳಷ್ಟು ದೊರೆಯುತ್ತಿದೆ ಎಂದ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸಾಲವನ್ನು ಪಡೆಯುವ ಸದಸ್ಯರು ಮರುಪಾವತಿಯಲ್ಲೂ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವುದು ಸಂಘದ ಅಭಿವೃದ್ಧಿಗೆ ಪ್ರಮುಖ ಕಾರಣ ಎಂದರು.ನಬಾರ್ಡ್ ವತಿಯಿಂದ ಭೇಟಿ ನೀಡಿದ ಪ್ರಾದೇಶಿಕ ನಿರ್ದೇಶಕ ನಿಖಿಲ್ ಕುಮಾರ್ ಅವರನ್ನು ಅಭಿನಂದಿಸಲಾಯಿತು. ವೈ.ಎಂ. ಮಲ್ಲೇಶ್, ವೈ.ಕೆ. ಬೋರೇಗೌಡ, ನಾಗೇಂದ್ರ, ಕಾರ್ಯನಿರ್ವಹಣಾ ಅಧಿಕಾರಿ ವೈ.ಕೆ. ಕ್ಯಾತೇಗೌಡ, ಡಿಸಿಸಿ ಬ್ಯಾಂಕಿನ ನವನೀತ್, ರಾಜಪ್ಪ, ಅಶೋಕ್ ಇದ್ದರು.